HOME » NEWS » National-international » OWAISI MAY JOIN HANDS WITH KAMAL HAASAN FOR TAMIL NADU POLLS SNVS

ತಮಿಳುನಾಡಿನಲ್ಲಿ ಕಮಲ್ ಹಾಸನ್-ಒವೈಸಿ ಮೈತ್ರಿ ಸಾಧ್ಯತೆ; 25 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ?

ಬಿಹಾರ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನ ಗೆದ್ದ ಆತ್ಮವಿಶ್ವಾಸದಲ್ಲಿರುವ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಪಕ್ಷ ಈಗ ತಮಿಳುನಾಡು ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ. ಕಮಲ್ ಹಾಸನ್ ಅವರ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳಬಹುದು.

news18-kannada
Updated:December 14, 2020, 1:46 PM IST
ತಮಿಳುನಾಡಿನಲ್ಲಿ ಕಮಲ್ ಹಾಸನ್-ಒವೈಸಿ ಮೈತ್ರಿ ಸಾಧ್ಯತೆ; 25 ಕ್ಷೇತ್ರಗಳಲ್ಲಿ ಎಐಎಂಐಎಂ ಸ್ಪರ್ಧೆ?
ಅಸಾದುದ್ದೀನ್ ಒವೈಸಿ
  • Share this:
ಚೆನ್ನೈ(ಡಿ. 14): ಹೈದರಾಬಾದ್​ನಿಂದ ಹೊರಗೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಅಸಾದುದ್ದೀನ್ ಒವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷ ಇದೀಗ ತಮಿಳುನಾಡಿನಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡುತ್ತಿದೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಸ್ಪರ್ಧಿಸಲು ನಿರ್ಧರಿಸಿದೆ. 234 ಸದಸ್ಯಬಲದ ತಮಿಳುನಾಡು ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಎಐಎಂಐಎಂ ಪಕ್ಷ ಕನಿಷ್ಠ 25 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ. ಹಾಗೆಯೇ, ನಟ ಕಮಲ್ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಮ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದೂ ಒವೈಸಿ ಆಪ್ತ ವಲಯದ ಮೂಲಗಳು ತಿಳಿಸಿವೆ.

“ತಮಿಳುನಾಡು ಚುನಾವಣೆಗೆ ಸಂಬಂಧಿಸಿದಂತೆ ಒವೈಸಿ ಅವರು ಇಂದು ತಮ್ಮ ಪಕ್ಷದ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಹೈದರಾಬಾದ್​ನಲ್ಲಿ ಚರ್ಚೆಯಾಗುತ್ತಿದೆ. ತಿರುಚ್ಚಿ ಮತ್ತು ಚೆನ್ನೈನಲ್ಲಿ ಜನವರಿಯಲ್ಲಿ ಪಕ್ಷದ ಸಮಾವೇಶ ನಡೆಯಲಿದ್ದು, ಅಲ್ಲಿ ಚುನಾವಣಾ ರಣತಂತ್ರ ರೂಪಿಸುವ ನಿರೀಕ್ಷೆ ಇದೆ” ಎಂದು ಈ ಮೂಲಗಳು ಹೇಳಿವೆ.

ಕಮಲ ಹಾಸನ್ ಅವರ ಮಕ್ಕಳ್ ನೀದಿ ಮಯ್ಯಮ್ ಪಕ್ಷ ಕೂಡ ಪೂರ್ಣಪ್ರಮಾಣದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಕಮಲ್ ಹಾಸನ್ ಅವರು ತಾವು ಖುದ್ದಾಗಿ ಒಂದು ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿ ಟ್ವೀಟ್ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಕ್ಷೇತ್ರಗಳಲ್ಲಿ ಎಂಎನ್​ಎಂ ಸ್ಪರ್ಧೆ ಮಾಡಿತ್ತು. ಎಲ್ಲಾ ಕ್ಷೇತ್ರಗಳಲ್ಲಿ ಕಮಲ್ ಪಾಳಯ ಠೇವಣಿ ಕಳೆದುಕೊಂಡರೂ ಚೆನ್ನೈನಂಥ ನಗರ ಪ್ರದೇಶಗಳ ಕ್ಷೇತ್ರಗಳಲ್ಲಿ ಶೇ. 10ಕ್ಕಿಂತ ಹೆಚ್ಚು ವೋಟ್​ಗಳನ್ನ ಪಡೆಯುವಲ್ಲಿ ಸಫಲವಾಗಿರುವುದು ಗಮನಾರ್ಹ. ಈ ಸಕಾರಾತ್ಮಕ ಫಲಿತಾಂಶದಿಂದ ಉತ್ತೇಜಿತಗೊಂಡಿರುವ ಕಮಲ್ ಹಾಸನ್ ಮುಂಬರುವ ವಿಧಾನಸಭಾ ಚುನಾವಣೆಗೆ ಭರ್ಜರಿ ಪ್ಲಾನ್ ರೂಪಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Farmers Protest: ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ತೆರವುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

ಮಹಾತ್ಮ ಗಾಂಧಿ ಅವರನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಭಯೋತ್ಪಾದಕ ಎಂದು ಘೋಷಿಸಬೇಕೆಂದು ಎಂದು ಕಮಲ್ ಹಾಸನ್ ಕಳೆದ ವರ್ಷ ಒತ್ತಾಯಿಸಿದ್ದರು. ಇದಕ್ಕೆ ಒವೈಸಿ ಕೂಡ ಬೆಂಬಲ ನೀಡಿದ್ದರು.

ಇನ್ನು, ಎಐಎಂಐಎಂ ಪಕ್ಷ ಬಿಹಾರ ಚುನಾವಣೆಯಲ್ಲಿ ಗಮನಾರ್ಹ ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ. ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳನ್ನ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಮುಸ್ಲಿಮ್ ಪ್ರಾಬಲ್ಯದ ಐದು ಕ್ಷೇತ್ರಗಳನ್ನ ಒವೈಸಿ ಅವರ ಪಕ್ಷ ಗೆದ್ದಿದೆ. ಅದೇ ರೀತಿ ತಮಿಳುನಾಡಿನಲ್ಲೂ ಒಂದಷ್ಟು ಮ್ಯಾಜಿಕ್ ಮಾಡಲು ಒವೈಸಿ ನಿರ್ಧರಿಸಿದ್ದಾರೆ. ತಮಿಳುನಾಡಿನಲ್ಲಿ ಮುಸ್ಲಿಮ್ ಸಮುದಾಯದ ಸಂಖ್ಯೆ ಶೇ. 5.86 ಇದೆ. ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳ ಪಾಲಾಗುತ್ತಿದ್ದ ಮುಸ್ಲಿಮರ ಮತಗಳು ಈ ಬಾರಿ ಎಐಎಂಐಎಂಗೆ ಸಂಪೂರ್ಣವಾಗಿ ವರ್ಗವಾಗುತ್ತವಾ ಎಂದು ಕಾದು ನೋಡಬೇಕು.

ಇದನ್ನೂ ಓದಿ: ನೂತನ ಕೃಷಿ ಕಾನೂನಿನಿಂದ ರೈತರಿಗೆ ಹೆಚ್ಚಿನ ಮಾರುಕಟ್ಟೆ ಸೃಷ್ಟಿ, ಕೃಷಿ ರಫ್ತಿಗೆ ಉತ್ತೇಜನವೇಲೂರು, ರಾಣಿಪೇಟ್, ತಿರುಪತ್ತೂರು, ಕೃಷ್ಣಗಿರಿ, ರಾಮನಾಥಪುರಂ, ಪುದುಕೋಟ್ಟೈ, ತಿರುಚ್ಚಿ, ಮದುರೈ ಮತ್ತು ತಿರುನೆಲ್ವೇಲಿ ಜಿಲ್ಲೆಗಳಲ್ಲಿ ಮುಸ್ಲಿಮ್ ಸಮುದಾಯ ಒಳ್ಳೆಯ ಸಂಖ್ಯೆಯಲ್ಲಿದೆ. ಆದರೆ, ಮುಸ್ಲಿಮ್ ಲೀಗ್, ಇಂಡಿಯನ್ ನ್ಯಾಷನಲ್ ಲೀಗ್, ಮನಿದನೇಯ ಮಕ್ಕಳ್ ಕಚ್ಚಿ, ತಮಿಳುನಾಡು ತೌಹೀದ್ ಜಮಾತ್ ಮತ್ತಿತರ ಮುಸ್ಲಿಮರ ಪಕ್ಷಗಳು ತಮಿಳುನಾಡಿನಲ್ಲಿವೆ. ಇವೆಲ್ಲವನ್ನೂ ತನ್ನ ವಿಶ್ವಾಸಕ್ಕೆ ಪಡೆದು ಒವೈಸಿ ರಣತಂತ್ರ ರೂಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

2016ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ 125 ಸ್ಥಾನಗಳನ್ನ ಗೆದ್ದು ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು. ಡಿಎಂಕೆ 97 ಸ್ಥಾನಗಳನ್ನ ಗೆದ್ದರೆ ಕಾಂಗ್ರೆಸ್ ಏಳಕ್ಕೆ ತೃಪ್ತಿಪಟ್ಟಿತ್ತು. ಜಯಲಲಿತಾ, ಕರುಣಾನಿಧಿ ಅವರಿಲ್ಲದೇ ಮುಂಬರುವ ವಿಧಾನಸಭಾ ಚುನಾವಣೆ ನಡೆಯುತ್ತಿರುವುದು ವಿಶೇಷ. ಅವರಿಬ್ಬರ ನಿರ್ಗಮನದಿಂದ ಉಂಟಾಗಿರುವ ನಾಯಕತ್ವ ಶೂನ್ಯತೆಯನ್ನು ತುಂಬಲು ತಮಿಳುನಾಡಿನಲ್ಲಿ ಕಸರತ್ತು ನಡೆಯುತ್ತಿವೆ. ಕಮಲ್ ಹಾಸನ್, ರಜಿನೀಕಾಂತ್ ಅವರು ದಿಗ್ಗಜರ ಸ್ಥಾನ ತುಂಬುವ ತವಕದಲ್ಲಿದ್ಧಾರೆ. ಬಿಜೆಪಿ ಕೂಡ ಬಲವರ್ದನೆಗೆ ಸಕಲ ಪ್ರಯತ್ನ ಮಾಡುತ್ತಿದೆ.
Published by: Vijayasarthy SN
First published: December 14, 2020, 1:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories