Kerala: ಎಸ್ಟೇಟ್​​ನಲ್ಲಿ ಬೀಡುಬಿಟ್ಟ 40ಕ್ಕೂ ಹೆಚ್ಚು ಕಾಡಾನೆಗಳ ಬಿಗ್ ಫ್ಯಾಮಿಲಿ: ಪೀಕಲಾಟ ಯಾರಿಗೂ ಬೇಡ!

ಕಳೆದ ಕೆಲವು ದಿನಗಳಿಂದ ರಬ್ಬರ್ ಎಸ್ಟೇಟ್‌ನಲ್ಲಿ ಆನೆಗಳು ಬೀಡು ಬಿಟ್ಟಿವೆ. ಈ ದೊಡ್ಡ ಗುಂಪನ್ನು ಓಡಿಸಲು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದರೂ ಪ್ರಯೋಜನವಾಗುತ್ತಿಲ್ಲ.

ರಬ್ಬರ್​ ಎಸ್ಟೇಟ್​ನಲ್ಲಿ ಕಾಡಾನೆಗಳ ದಂಡು

ರಬ್ಬರ್​ ಎಸ್ಟೇಟ್​ನಲ್ಲಿ ಕಾಡಾನೆಗಳ ದಂಡು

  • Share this:
    ಅರಣ್ಯ ಅಧಿಕಾರಿಗಳು (Forest Officials) ಮತ್ತು ಕಾರ್ಮಿಕರಿಗೆ ಕೇರಳದ ತ್ರಿಶೂರ್‌ನ ( Thrissur, Kerala) ಎಸ್ಟೇಟ್‌ವೊಂದರಲ್ಲಿ (Estate) ಬೀಡು ಬಿಟ್ಟ ಕಾಡಾನೆಗಳು (Wild Elephants) ದೊಡ್ಡ ತಲೆನೋವಾಗಿ ಬಿಟ್ಟಿವೆ. ಎಸ್ಟೇಟ್‌ನಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಲ್ಲಿಂದ ಹೊರ ಹೋಗದೇ ಸಿಬ್ಬಂದಿ, ಕಾರ್ಮಿಕರಿಗೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ದಿಕ್ಕು ತೋಚದಂತೆ ಮಾಡಿವೆ.ಕೇರಳದ ತ್ರಿಶೂರ್ ಜಿಲ್ಲೆಯ ಪಾಲಪ್ಪಿಲ್ಲಿನ ರಬ್ಬರ್ ಎಸ್ಟೇಟ್ ಒಂದರ ಒಳಗೆ ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಕ್ಯಾಂಪ್ ಹೂಡಿಬಿಟ್ಟಿವೆ ಎಂದು ಅಲ್ಲಿನ ಸ್ಥಳೀಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ತೋಟದಲ್ಲಿ ವಾಸ್ತವ್ಯ ಹೂಡಿರುವ ಆನೆಗಳನ್ನು ಅಲ್ಲಿಂದ ಓಡಿಸಲು ಅರಣ್ಯ ಇಲಾಖೆ ನಾನಾ ಪ್ರಯತ್ನಗಳನ್ನು ನಡೆಸಿದರೂ ಸಹ ಯಾವೊಂದು ಈವರೆಗೆ ಯಶಸ್ವಿಯಾಗಿಲ್ಲ.

    ಆನೆಮರಿಗಳು ಸೇರಿದಂತೆ 40ಕ್ಕೂ ಹೆಚ್ಚಿನ ಆನೆಗಳು ರಬ್ಬರ್ ಎಸ್ಟೇಟ್‌ನಲ್ಲಿ ದಾಂಗುಡಿ ಎಬ್ಬಿಸುತ್ತಿವೆ. ಈಗಾಗಲೇ ಹಲವು ಮರಗಳನ್ನು ಕೆಳಗುರುಳಿಸಿವೆ ಮತ್ತು ಎಸ್ಟೇಟ್ ಸುತ್ತಲೂ ಆನೆಗಳ ಉಪಟಳ ಹೆಚ್ಚಾಗುತ್ತಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.

    ರಬ್ಬರ್ ಎಸ್ಟೇಟ್‌ನಲ್ಲಿ ಬೀಡು ಬಿಟ್ಟ ಕಾಡಾನೆಗಳ ಗುಂಪು 

    ರಬ್ಬರ್ ಎಸ್ಟೇಟ್‌ನಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವವರಿಗೆ ಅವರ ಸುರಕ್ಷತಾ ದೃಷ್ಟಿಯಿಂದ ಬೆಳಗ್ಗೆ ಬೇಗ ಕೆಲಸಕ್ಕಾಗಿ ತೋಟಕ್ಕೆ ಬರಬೇಡಿ ಎಂದು ಅರಣ್ಯ ಅಧಿಕಾರಿಗಳು ಸೂಚಿಸಿದ್ದಾರೆ. ಸಾಮಾನ್ಯವಾಗಿ,ಇಲ್ಲಿ ಕಾರ್ಮಿಕರು ರಬ್ಬರ್ ಟ್ಯಾಪಿಂಗ್ ಕೆಲಸವನ್ನು ಬೆಳಗ್ಗಿನ ಜಾವ 3 ಗಂಟೆಗೆ ಪ್ರಾರಂಭಿಸುತ್ತಾರೆ. ಹೀಗಾಗಿ ಕಾರ್ಮಿಕರಿಗೆ ಅಪಾಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ಭದ್ರತಾ ಕ್ರಮದಿಂದ ಕೆಲಸಗಾರರನ್ನು ಗುಂಪು ಗುಂಪಾಗಿ ತೋಟಕ್ಕೆ ಬರುವಂತೆ ಸೂಚಿಸಲಾಗಿದೆ. ಕಾಡಾನೆಗಳ ಉಪಟಳ ಎಸ್ಟೇಟ್‌ನಲ್ಲಿ ಹೆಚ್ಚಾಗಿರುವುದರಿಂದ ಕೆಲಸಗಾರರಿಗೆ ಏನಾದರು ತೊಂದರೆ ಮಾಡಬಹುದು ಎಂದು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅರಣ್ಯ ಇಲಾಖೆ ತೆಗೆದುಕೊಂಡಿದೆ.

    ಪಟಾಕಿಗೆ ಬೆದರದ ಗುಂಪು 

    ಸಾಮಾನ್ಯವಾಗಿ ಆನೆಗಳು ಹಗಲು ಹೊತ್ತಿನಲ್ಲಿ ಬರುತ್ತಿದ್ದವು ಮತ್ತು ಸಂಜೆ ಸಮಯದಲ್ಲಿ ಕಾಡಿಗೆ ಹಿಂತಿರುಗಿ ಹೋಗುತ್ತಿದ್ದವು. ಆದರೆ ಈ ಬಾರಿ ಆನೆಗಳ ಗುಂಪು ಎಸ್ಟೇಟ್ ಬಿಟ್ಟು ಹೋಗುತ್ತಿಲ್ಲ, ಇಲ್ಲಿಯೇ ಬೀಡು ಬಿಟ್ಟಿದ್ದಾವೆ ಎಂದು ಎಸ್ಟೇಟ್ ಕಾರ್ಮಿಕರು ತಿಳಿಸಿದ್ದಾರೆ. ಆನೆ ಹಿಂಡನ್ನು ತೋಟದಿಂದ ಮರಳಿ ಅರಣ್ಯಕ್ಕೆ ಓಡಿಸಲು ಪಟಾಕಿಗಳನ್ನು ಸಿಡಿಸಿದರೂ ಸಹ ಏನು ಪ್ರಯೋಜನವಾಗಿಲ್ಲ ಎಂದು ಕಾರ್ಮಿಕರು ಹೇಳಿದರು. ನೀರು ಅರಸಿ ಆನೆಗಳು ತೋಟಕ್ಕೆ ಬಂದಿರುವುದರಿಂದ ಸದ್ಯ ಇಲ್ಲಿಯೇ ವಾಸ್ತವ್ಯ ಹೂಡಿವೆ ಎಂದಿದ್ದಾರೆ.

    40ಕ್ಕೂ ಹೆಚ್ಚು ಕಾಡಾನೆಗಳು 

    ಕಳೆದ ಕೆಲವು ದಿನಗಳಿಂದ ರಬ್ಬರ್ ಎಸ್ಟೇಟ್‌ನಲ್ಲಿ ಆನೆಗಳು ಬೀಡು ಬಿಟ್ಟಿವೆ. ಮರಗಳನ್ನು ಕಿತ್ತುಹಾಕುವ ಮೂಲಕ ಆಸ್ತಿಗೆ ವ್ಯಾಪಕ ಹಾನಿಯನ್ನುಂಟುಮಾಡುತ್ತಿದೆ ಎಂದು ಕೇರಳದ ಸ್ಥಳೀಯ ಮಾಧ್ಯಮಗಳಿಗೆ ಎಸ್ಟೇಟ್ ಸಿಬ್ಬಂದಿ ಹೇಳಿದ್ದಾರೆ. ತ್ರಿಶ್ಶೂರ್‌ನ ಅರಣ್ಯದ ಗಡಿಯಲ್ಲಿರುವ ಈ ರಬ್ಬರ್ ಎಸ್ಟೇಟ್ ಅನ್ನು ಕಾಡಾನೆಗಳು ಅತಿಕ್ರಮಿಸಿದ್ದು, 40ಕ್ಕೂ ಹೆಚ್ಚು ವಯಸ್ಕ ಆನೆ ಮತ್ತು ಮರಿ ಆನೆಗಳನ್ನು ಓಡಿಸಲು ರಾಜ್ಯ ಅರಣ್ಯ ಅಧಿಕಾರಿಗಳ ಗುಂಪು ಹಗಲಿರುಳು ಶ್ರಮಿಸುತ್ತಿದೆ. ಉನ್ನತ ಅರಣ್ಯ ಅಧಿಕಾರಿ ಪ್ರೇಮ್ ಶಂಕರ್ ಮತ್ತು ಅವರ ತಂಡವು ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿಯಿಂದ ಸುಮಾರು 220 ಕಿಮೀ ದೂರದಲ್ಲಿರುವ ತ್ರಿಶೂರ್ ಬಳಿಯ ಕೊಚ್ಚಿನ್-ಮಲಬಾರ್ ರಬ್ಬರ್ ಎಸ್ಟೇಟ್‌ನಲ್ಲಿ ನೆಲೆಸಿದ್ದು ಆನೆಗಳನ್ನು ಓಡಿಸಲು ಶತಪ್ರಯತ್ನ ನಡೆಸಿವೆ.

    ಉನ್ನತ ಅರಣ್ಯ ಅಧಿಕಾರಿ ಪ್ರೇಮ್ ಶಂಕರ್ ಹೇಳುವ ಪ್ರಕಾರ, ಆನೆಗಳು ಕಾಡುಗಳಿಂದ ರಬ್ಬರ್ ಎಸ್ಟೇಟ್‌ಗೆ ದಾರಿ ತಪ್ಪಿ ಬಂದಿವೆ. ಎಸ್ಟೇಟ್ ಮೂಲಕ ಹರಿಯುವ ಹೊಳೆಯ ನೀರು ಸೌಲಭ್ಯ ಇವುಗಳನ್ನು ಇಲ್ಲಿಯೇ ಇರುವಂತೆ ಮಾಡಿದೆ ಎಂದರು. ರಬ್ಬರ್ ಎಸ್ಟೇಟ್‌ನಲ್ಲಿ ಸುಮಾರು 150 ಜನರು ಮುಂಜಾನೆ ಬೇಗ ಏಳುವ ಮತ್ತು ಸುಮಾರು 4 ಗಂಟೆಗೆ ರಬ್ಬರ್ ಟ್ಯಾಪಿಂಗ್ ಪ್ರಾರಂಭಿಸಲು ಸಾಧ್ಯವಾಗದ ಕಾರಣ ಸಮಸ್ಯೆ ಹೆಚ್ಚಾಗಿದೆ ಎಂದಿದ್ದಾರೆ. ಕಾಡಾನೆಗಳನ್ನು ಎಷ್ಟು ಬೇಗನೆ ಅವುಗಳ ನೈಸರ್ಗಿಕ ವಾಸಸ್ಥಾನಕ್ಕೆ ಸೇರಿಸಬಹುದು ಎಂಬುದರ ಕುರಿತು ವಿವಿಧ ರೀತಿ ಚರ್ಚೆ ನಡೆಸಲಾಗತ್ತಿದೆ ಎಂದು ಶಂಕರ್ ಹೇಳಿದರು.
    Published by:Kavya V
    First published: