Landslides - ಮಹಾರಾಷ್ಟ್ರದಲ್ಲಿ ಭೂಕುಸಿತ ದುರಂತ: 36 ಮಂದಿ ಬಲಿ; ಮಣ್ಣಿನಡಿ ಸಿಲುಕಿರುವ 30ಕ್ಕೂ ಹೆಚ್ಚು ಜನರು

ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮೂರು ಗ್ರಾಮಗಳಲ್ಲಿ ನಿನ್ನೆ ಸಂಭವಿಸಿದ ಭೂಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿದೆ. ಇಲ್ಲಿ ಇನ್ನೂ 30ಕ್ಕೂ ಹೆಚ್ಚು ಮಂದಿ ಮಣ್ಣಿನಡಿ ಸಿಲುಕಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ

ಮಹಾರಾಷ್ಟ್ರದಲ್ಲಿ ಪ್ರವಾಹ ಪರಿಸ್ಥಿತಿ

 • News18
 • Last Updated :
 • Share this:
  ಮುಂಬೈ (ಜುಲೈ 23): ಮಹಾರಾಷ್ಟ್ರದ ವಿವಿಧೆಡೆ ಕೆಲವಾರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ನಿಲ್ಲುತ್ತಿಲ್ಲ. ರಾಯಗಡ ಜಿಲ್ಲೆಯಲ್ಲಿ ನಿನ್ನೆ ಸಂಜೆ ಮೂರು ಕಡೆ ಭೂಕುಸಿತದ ಘೋರ ದುರಂತ ಸಂಭವಿಸಿದೆ. ಇದರಲ್ಲಿ 36 ಮಂದಿ ಬಲಿಯಾಗಿರುವುದು ದೃಢಪಟ್ಟಿದೆ. ಇನ್ನೂ 30ಕ್ಕೂ ಹೆಚ್ಚು ಜನರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಎನ್​ಡಿಆರ್​ಎಫ್ ತಂಡಗಳು ಈ ಮೂರು ದುರಂತ ಸ್ಥಳಗಳಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಪ್ರಯತ್ನಿಸಿವೆ. ಈ ವರದಿ ಬರೆಯುವ ವೇಳೆಗೆ 15 ಮಂದಿಯನ್ನು ರಕ್ಷಿಸಲಾಗಿರುವುದು ತಿಳಿದುಬಂದಿದೆ. ರಾಯಗಡದ ತಲಾಯ್ ಎಂಬ ಜಾಗವೊಂದರಲ್ಲೇ 32 ಶವಗಳನ್ನ ಹೊರತೆಗೆಯಲಾಗಿದೆ. ಸಖರ್​ಸುತರ್​ವಾಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ಕು ಶವಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  ಇನ್ನು, ವಾಣಿಜ್ಯ ನಗರಿ ಮುಂಬೈ ಮಹಾಮಳೆಯ ಆರ್ಭಟಕ್ಕೆ ಅಕ್ಷರಶಃ ನಲುಗಿಹೋಗಿದೆ. ಮುಂಬೈನ ಗೋವಾಂಡಿ ಪ್ರದೇಶದಲ್ಲಿ ಮನೆಯೊಂದು ಕುಸಿದುಬಿದ್ದಿದ್ದು ಮೂವರು ಸಾವನ್ನಪ್ಪಿದ್ದಾರೆ. ಏಳು ಮಂದಿಗೆ ಗಾಯಗೊಂಡಿದ್ಧಾರೆ. ಮುಂಬೈ ಗೋವಾ ಹೆದ್ದಾರಿ, ಮುಂಬೈ ನಾಶಿಕ್ ಹೆದ್ದಾರಿ, ಮುಂಬೈ ಬೆಂಗಳೂರು ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವಿಲ್ಲದಂಥ ಸ್ಥಿತಿ ಇದೆ.

  ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲೂ ಮಳೆಯ ಆರ್ಭಟ ತೀವ್ರವಾಗಿದೆ. ಇಲ್ಲಿಯೂ ಹಲವೆಡೆ ಭೂಕುಸಿತ ಘಟನೆಗಳು ನಡೆದಿವೆ. ಮಹಾಬಲೇಶ್ವರ ಬೆಟ್ಟ ಪ್ರದೇಶದ ಸತಾರ ಪ್ರದೇಶದಲ್ಲಿ ಭೂ ಕುಸಿತವಾಗಿದ್ದು ಅದರಲ್ಲಿ 12 ಮಂದಿ ಸಿಲುಕಿರುವುದು ಗೊತ್ತಾಗಿದೆ. ಎನ್​ಡಿಆರ್​ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಚಿಪ್ಲುನ್​ನಲ್ಲೂ ಹಲವೆಡೆ ಭೂ ಕುಸಿತಗಳಾಗಿವೆ.

  ಇದನ್ನೂ ಓದಿ: Wild Karnataka - ‘ವೈಲ್ಡ್ ಕರ್ನಾಟಕ’ ಸಿನಿಮಾ ನಿರ್ದೇಶಕರ ವಿರುದ್ಧ ತನಿಖೆಗೆ ಒತ್ತಾಯಿಸಿ ಸಿಎಂಗೆ ದೂರು

  ಇದೇ ವೇಳೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಪ್ರಧಾನಿ ಮೋದಿ ಅವರನ್ನ ಸಂಪರ್ಕಿಸಿ, ಎನ್​ಡಿಆರ್​ಎಫ್ ನೆರವನ್ನು ಕೋರಿದ್ದಾರೆ. ಇದಕ್ಕೆ ಪಿಎಂ ಕೂಡ ಒಪ್ಪಿಕೊಂಡಿದ್ದಾರೆ.

  ಮಹಾರಾಷ್ಟ್ರವಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಕರ್ನಾಟಕದಲ್ಲೂ ಹಲವೆಡೆ ಭಾರಿ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಮಹಾರಾಷ್ಟ್ರದಿಂದ ಹರಿದುಬರುತ್ತಿರುವ ನೀರು ಈ ಎರಡು ರಾಜ್ಯಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಂದಿದೆ. ಬೆಳಗಾವಿ ಜಿಲ್ಲೆಯಂತೂ ನಡುಗಡ್ಡೆಯಂತಾಗಿದೆ. ಕೃಷ್ಣಾ ನದಿ ಉಕ್ಕೇರುತ್ತಿದ್ದು ನದಿಪಾತ್ರದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ತೆಲಂಗಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರೂ ಕೂಡ ಹೈ ಅಲರ್ಟ್ ಘೋಷಿಸಿದ್ದು, ಎದುರಾಗಲಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: