ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ 300ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆ: ಭದ್ರತಾ ಪಡೆ ವರದಿ

ಕಳೆದ ಎರಡು ತಿಂಗಳಲ್ಲಿ ನಡೆದಿರುವ ಕಲ್ಲು ತೂರಾಟ ಘಟನೆಗಳ ಪ್ರಮಾಣ 306 ಇದೆ. ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾಶ್ಮೀರಿಗರು ನಡೆಸಿದ ಕಲ್ಲು ತೂರಾಟದಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿಯವರಿಗೆ ಗಾಯಗಳಾಗಿವೆಯಂತೆ.

news18
Updated:October 10, 2019, 3:51 PM IST
ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ 300ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆ: ಭದ್ರತಾ ಪಡೆ ವರದಿ
ಕಾಶ್ಮೀರದಲ್ಲಿ ಕಲ್ಲು ತೂರಾಟದಲ್ಲಿ ತೊಡಗಿರುವ ಯುವಕರು
  • News18
  • Last Updated: October 10, 2019, 3:51 PM IST
  • Share this:
ನವದೆಹಲಿ(ಅ. 10): ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿಯನ್ನು ಸಂವಿಧಾನದಿಂದ ರದ್ದು ಮಾಡಿದ ಬಳಿಕ ಕಣಿವೆ ರಾಜ್ಯದಲ್ಲಿ 300ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆಗಳು ನಡೆದಿರುವುದು ತಿಳಿದುಬಂದಿದೆ. ಇದು ಯಾವುದೋ ಖಾಸಗಿ ವ್ಯಕ್ತಿ ಅಥವಾ ಸಂಸ್ಥೆ ನೀಡಿದ ಮಾಹಿತಿಯಲ್ಲ. ಭದ್ರತಾ ಪಡೆಗಳ ಆಂತರಿಕ ದಾಖಲೆಯಲ್ಲಿ ಕಂಡುಬಂದಿರುವ ಮಾಹಿತಿಯಾಗಿದೆ. 370ನೇ ವಿಧಿ ರದ್ದಾದ ಬಳಿಕ ಕಾಶ್ಮೀರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನಿಗಾ ವಹಿಸಿದ್ದೇವೆ. ಬೆರಳೆಣಿಕೆಯಷ್ಟು ಮಾತ್ರ ಕಲ್ಲು ತೂರಾಟವಾಗಿರಬಹುದು ಎಂದು ಕೇಂದ್ರ ಸರ್ಕಾರ ನೀಡುತ್ತಿದ್ದ ಹೇಳಿಕೆಗೆ ತದ್ವಿರುದ್ಧವಾದ ಮಾಹಿತಿ ಭದ್ರತಾ ಪಡೆಯ ದಾಖಲೆಗಳಲ್ಲಿದೆ.

ಆಗಸ್ಟ್ 5ರಂದು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿತ್ತು. ಈ ಕ್ರಮವನ್ನು ಪ್ರಕಟಿಸುವ ಮುಂಚೆಯೇ ಕೇಂದ್ರ ಸರ್ಕಾರ ಬಹಳಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡಿತು. ಸಾವಿರಾರು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ಕಣಿವೆ ರಾಜ್ಯಕ್ಕೆ ನಿಯೋಜಿಸಿತು. ಮುಖ್ಯವಾಹಿನಿಯ ರಾಜಕೀಯ ಮುಖಂಡರೆಲ್ಲರನ್ನೂ ಹಾಗೂ ಪ್ರತ್ಯೇಕತಾವಾದಿ ಹೋರಾಟಗಾರರೆಲ್ಲರನ್ನೂ ಗೃಹ ಬಂಧನದಲ್ಲಿರಿಸಿತ್ತು. ಹೆಚ್ಚೂಕಡಿಮೆ 4 ಸಾವಿರ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿಡಲಾಗಿತ್ತು. ಇಡೀ ಕಾಶ್ಮೀರದಲ್ಲಿ ಮೊಬೈಲ್ ಮತ್ತು ಲ್ಯಾಂಡ್​ಲೈನ್ ಫೋನ್ ನೆಟ್ವರ್ಕ್ ಅನ್ನು ಕಡಿತಗೊಳಿಸಿತು. ಇಷ್ಟಾದರೂ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೇಳುವುದನ್ನು ತಡೆಯಲು ಸರ್ಕಾರಕ್ಕೆ ಸಂಪೂರ್ಣ ಸಾಧ್ಯವಾಗಿಲ್ಲ ಎಂಬುದು ಈ ಭದ್ರತಾ ಪಡೆಯ ದಾಖಲೆಗಳಲ್ಲಿರುವ ಅಂಕಿ ಅಂಶಗಳಿಂದ ವೇದ್ಯವಾಗಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿದ್ದ ಮೂವರು ರಾಜಕಾರಣಿಗಳ ಬಿಡುಗಡೆ; ಮುಫ್ತಿಗಿಲ್ಲ ಬಿಡುಗಡೆ ಭಾಗ್ಯ

ಈ ದಾಖಲೆಗಳ ಪ್ರಕಾರ, ಈ ಎರಡು ತಿಂಗಳಲ್ಲಿ ನಡೆದಿರುವ ಕಲ್ಲು ತೂರಾಟ ಘಟನೆಗಳ ಪ್ರಮಾಣ 306 ಇದೆ. ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಕಾಶ್ಮೀರಿಗರು ನಡೆಸಿದ ಕಲ್ಲು ತೂರಾಟದಲ್ಲಿ ಸುಮಾರು 100 ಭದ್ರತಾ ಸಿಬ್ಬಂದಿಯವರಿಗೆ ಗಾಯಗಳಾಗಿವೆಯಂತೆ.

ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಈ ಎರಡು ತಿಂಗಳಲ್ಲಿ ಉಗ್ರರೊಂದಿಗೆ ಐದು ಎನ್​ಕೌಂಟರ್​ಗಳಾಗಿದ್ದು ಇಬ್ಬರು ಯೋಧರು ಬಲಿಯಾಗಿದ್ದಾರೆ. 9 ಮಂದಿಗೆ ಗಾಯವಾಗಿದೆ. ಇದಕ್ಕೆ ಪ್ರತಿಯಾಗಿ 10 ಉಗ್ರರನ್ನು ಸಂಹಾರ ಮಾಡಲಾಗಿದೆ. ಆದರೆ, ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಒಬ್ಬರೇ ಒಬ್ಬರು ನಾಗರಿಕರಿಗೂ ಪ್ರಾಣಹಾನಿಯಾಗಿಲ್ಲ ಎನ್ನಲಾಗಿದೆ.

ಕೇಂದ್ರ ಸರ್ಕಾರವು 370ನೇ ವಿಧಿಯನ್ನು ರದ್ದು ಮಾಡಿತಲ್ಲದೇ, ಜಮ್ಮು-ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಇಬ್ಭಾಗ ಮಾಡಿತು. ಈ ಹೊಸ ಕಾನೂನಿಗೆ ಆಗಸ್ಟ್ 6ರಂದು ಸಂಸತ್​ನ ಅನುಮೋದನೆ ಕೂಡ ಸಿಕ್ಕಿತು. ಈ ಬೆಳವಣಿಗೆ ಬಗ್ಗೆ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಪಸ್ವರ ಎತ್ತಲು ಪ್ರಯತ್ನಿಸುತ್ತಲೇ ಇದೆ. ಕೇಂದ್ರ ಸರ್ಕಾರ ಯಾರೊಂದಿಗೂ ಸಮಾಲೋಚನೆ ಮಾಡದೇ ಏಕಪಕ್ಷೀಯ ನಿರ್ಧಾರ ಕೈಗೊಂಡು ದೇಶದ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ವಿಪಕ್ಷಗಳೂ ಕೂಡ ಖಂಡನೆ ಮಾಡಿವೆ.

(ವರದಿ: ಅರುಣಿಮಾ)ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 10, 2019, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading