ಬಿಹಾರದಲ್ಲಿ ನಿಗೂಢ ರೀತಿಯಲ್ಲಿ 16 ಮಂದಿ ಸಾವು; ಕಳ್ಳಬಟ್ಟಿ ಸಾರಾಯಿ ಕುಡಿದು ಸತ್ತಿರುವ ಶಂಕೆ

ಬಿಹಾರದ ಪಶ್ಚಿಮ ಚಂಪರಂ ಜಿಲ್ಲೆಯ ದೇವರಾವ ಗ್ರಾಮದಲ್ಲಿ ಕಳೆದ 2-3 ದಿನದಲ್ಲಿ 16 ಮಂದಿ ಅಸಹಜವಾಗಿ ಸಾವನ್ನಪ್ಪಿದ್ದಾರೆ. ಕಳ್ಳಬಟ್ಟಿ ಸಾರಾಯಿ ಕುಡಿದು ಇವರು ಸಾವನ್ನಪ್ಪಿರುವ ಶಂಕೆ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಟ್ನಾ(ಜುಲೈ 17): ಬಿಹಾರ ರಾಜ್ಯದ ವೆಸ್ಟ್ ಚಂಪರಂ ಜಿಲ್ಲೆಯ ಹಳ್ಳಿಯೊಂದರಲ್ಲಿ 16 ಮಂದಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಕಳೆದ 2-3 ದಿನದಲ್ಲಿ ಈ ದುರಂತ ಸಂಭವಿಸಿದ್ದು, ಇದಕ್ಕೆ ಕಾರಣ ಸ್ಪಷ್ಟವಾಗಿ ಗೊತ್ತಾಗಿಲ್ಲ. ಕಳ್ಳಬಟ್ಟಿ ಸಾರಾಯಿ ಕುಡಿದು ಜನರು ಸಾವನ್ನಪ್ಪಿದ್ದಾರೆ ಎಂಬುದು ಪೊಲೀಸರ ಶಂಕೆ. ಆದರೆ, ಸಾವನ್ನಪ್ಪಿದವರಲ್ಲಿ ಬಹುತೇಕ ಮಂದಿ ಯಾವುದೇ ಸಾರಾಯಿ ಕುಡಿದಿರಲಿಲ್ಲ ಎಂದು ಅವರ ಕುಟುಂಬದವರು ಹೇಳಿದ್ಧಾರೆ. ಚಂಪರಂನ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಂಡನ್ ಕುಮಾರ್ ಕೂಡ ಇದನ್ನು ಪುನರುಚ್ಚರಿಸಿದ್ದಾರೆ. ಸಾವನ್ನಪ್ಪಿದವರು ಸಾರಾಯಿ ಸೇವನೆ ಮಾಡಿದ ಬಗ್ಗೆ ಅವರ ಕುಟುಂಬದವರು ಏನೂ ಪ್ರಸ್ತಾಪಿಸಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, 16 ಮಂದಿಯ ಸಾವಿಗೆ ಕಾರಣ ಏನು ಎಂಬುದು ಸದ್ಯಕ್ಕಂತೂ ನಿಗೂಢವಾಗಿದೆ. ಆದರೆ, ಕಳ್ಳಬಟ್ಟಿ ಸಾರಾಯಿಯಿಂದ ಸಾವನ್ನಪ್ಪಿರುವ ಶಂಕೆ ಗಟ್ಟಿಯಾಗಿರುವುದರಿಂದ ರಾಜಕೀಯ ಕೆಸರೆರಚಾಟವೂ ನಡೆದಿದೆ.

ಇದೇ ವೇಳೆ, ಕಳ್ಳಬಟ್ಟಿ ಸಾರಾಯಿ ಶಂಕೆಯ ಮೇರೆಗೆ ಪೊಲೀಸರು ಐದು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ಮಾಡುತ್ತಿದ್ದಾರೆ. ಜಿಲ್ಲಾಡಳಿತವು ಇಬ್ಬರು ಗ್ರಾಮ ಚೌಕಿದಾರರನ್ನು ಅಮಾನತುಗೊಳಿಸಿದೆ. ಘಟನೆ ಸಂಬಂಧ ಎಫ್​ಐಆರ್ ದಾಖಲಾಗಿದೆ. ಸಾವನ್ನಪ್ಪಿದವರ ಶವಸಂಸ್ಕಾರ ನಡೆಸಿಯಾಗಿರುವುದರಿಂದ ಸಾವಿಗೆ ಕಾರಣ ಏನೆಂದು ವೈದ್ಯಕೀಯವಾಗಿ ದೃಢೀಕರಿಸಲು ಆಗಿಲ್ಲ. ಇದೇ ವೇಳೆ, ಬೇರೆ ಯಾವುದಾದರೂ ಕಾಯಿಲೆ ಇದ್ದಿರಬಹುದಾ ಎಂಬ ಸಂಶಯವೂ ಇರುವುದರಿಂದ ದೇವರಾವ ಮತ್ತು ಬಗಾಹಿ ಗ್ರಾಮಗಳಲ್ಲಿ ವೈದ್ಯಕೀಯ ತಂಡಗಳನ್ನ ನಿಯೋಜಿಸಲಾಗಿದ್ದು, ಯಾರಿಗಾದರೂ ಅನಾರೋಗ್ಯವಾದಲ್ಲಿ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆ ಮಾಡಲಾಗಿದೆ.

“ಸಾವನ್ನಪ್ಪಿದವರ ಕುಟುಂಬ ಸದಸ್ಯರನ್ನ ಒಳಗೊಂಡಂತೆ 40 ಜನರ ಹೇಳಿಕೆಗಳನ್ನ ಪಡೆದಿದ್ದೇವೆ. ಆದರೆ, ಸಾರಾಯಿ ಸೇವನೆಯಿಂದ ಸಾವಾಗಿರುವ ವಿಚಾರವನ್ನು ಅವರ್ಯಾರೂ ಒಪ್ಪುತ್ತಿಲ್ಲ. ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಮಾತ್ರ ತಾನು ಸಾರಾಯಿ ಕುಡಿದಿದ್ದೆ ಎಂದು ಒಪ್ಪಿಕೊಂಡಿದ್ದಾನೆ” ಎಂದು ಬಿಹಾರದ ಪೊಲೀಸ್ ಉಪ ಮಹಾನಿರ್ದೇಶಕ ಲಲನ್ ಮೋಹನ್ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆಯಲ್ಲಿ ಫೇಲ್ ಆದವ್ರಿಗೆ ಸವಿಯಲು ಬಿರಿಯಾನಿ, ಮಲಗಲು ರೂಂ ಉಚಿತ! ಬೇಸರ ಬಿಟ್ಟು ಡೀಟೆಲ್ಸ್ ನೋಡಿ

ಬಿಹಾರ ರಾಜ್ಯದಲ್ಲಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ಏರಿದ ಬಳಿಕ 2016ರಿಂದ ಸಾರಾಯಿ ನಿಷೇಧ ಮಾಡಲಾಗಿದೆ. ಆದರೆ, ಸರ್ಕಾರದ ಈ ಕ್ರಮದಿಂದ ಅಕ್ರಮ ಸಾರಾಯಿ ಮಾರಾಟ ಮತ್ತು ಕಳ್ಳಬಟ್ಟಿ ಸಾರಾಯಿ ಹೆಚ್ಚುತ್ತಿದೆ ಎಂಬುದು ವಿಪಕ್ಷಗಳ ಆಪಾದನೆ. ಚಂಪರಂನಲ್ಲಿ ಸಂಭವಿಸಿದರುವ ಸಾವು ಘಟನೆಗಳನ್ನ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಆಡಳಿತ ಪಕ್ಷದ ವಿರುದ್ಧ ಎರಗಿಬೀಳಲು ಬಳಸಿಕೊಂಡಿದ್ಧಾರೆ. ಒಳ್ಳೆಯ ಆಡಳಿತದ ಹೆಸರಿನಲ್ಲಿ ಬಿಹಾರದಲ್ಲಿ ಕಳ್ಳಬಟ್ಟಿ ಸಾರಾಯಿ ಕುಡಿದು ಪ್ರತೀ ವರ್ಷ ಸಾವಿರಾರು ಮಂದಿ ಸಾಯುತ್ತಿದ್ದಾರೆ ಎಂದು ಲಾಲೂ ವ್ಯಂಗ್ಯ ಮಾಡಿದ್ಧಾರೆ.

“…ನಿಷೇಧದ ನೆಪದಲ್ಲಿ ಆಡಳಿತ ಪಕ್ಷದ ಜನರು ಅಕ್ರಮವಾಗಿ ಪರ್ಯಾಯ ಆರ್ಥಿಕತೆ ಸೃಷ್ಟಿಸಿಕೊಂಡಿದ್ದಾರೆ. ಇದು 20 ಸಾವಿರ ಕೋಟಿ ಮೊತ್ತದ ಹಗರಣವಾಗಿದೆ. ನಿಷೇಧದ ಕಾರಣವೊಡ್ಡಿ ಲಕ್ಷಾಂತರ ಮಂದಿ ದಲಿತರು ಮತ್ತು ಬಡವರನ್ನ ಜೈಲಿಗೆ ತಳ್ಳಲಾಗಿದೆ. ಪೊಲೀಸರು ಭ್ರಷ್ಟರಾಗಿದ್ದಾರೆ” ಎಂದು ಮಾಜಿ ಬಿಹಾರ ಮುಖ್ಯಮಂತ್ರಿಯೂ ಆದ ಲಾಲೂ ಪ್ರಸಾದ್ ಯಾದವ್ ಟ್ವೀಟ್ ಮಾಡಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published: