news18-kannada Updated:December 5, 2020, 3:49 PM IST
ರಾಹುಲ್ ಗಾಂಧಿ.
ನವ ದೆಹಲಿ (ಡಿಸೆಂಬರ್ 05); ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕೈಗೊಂಡಿರುವ ಹೋರಾಟ ಇದೀಗ 10 ದಿನಗಳನ್ನು ದಾಟಿದ್ದು, ರೈತರು ಮತ್ತು ಸರ್ಕಾರದ ನಡುವಿನ ಮಾತುಕತೆಯೂ ಮುರಿದು ಬಿದ್ದಿದೆ. ಇನ್ನೂ ಕೆನಡ, ಇಂಗ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳು ಭಾರತದ ರೈತ ಹೋರಾಟವನ್ನು ಬೆಂಬಲಿಸಿದೆ. ಇದರ ಬೆನ್ನಿಗೆ ಇಂದು ಟ್ವೀಟ್ ಮಾಡುವ ಮೂಲಕ ರೈತ ಹೋರಾಟವನ್ನು ಬೆಂಬಲಿಸಿರುವ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ, "ರೈತರು ಇಡೀ ದೇಶವನ್ನು ಪೋಷಿಸಿದ್ದಾರೆ. ಎಲ್ಲರಿಗೂ ತುತ್ತು ಅನ್ನ ನೀಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಯನ್ನು ಹಿಮ್ಮೆಟ್ಟಿಸಬೇಕು ಎಂಬ ರೈತರ ಬೇಡಿಕೆಗೆ ಇಡೀ ದೇಶ ಬೆಂಬಲಿಸಬೇಕು. ಅದು ನಮ್ಮ ಕರ್ತವ್ಯ" ಎಂದು ಒತ್ತಾಯಿಸಿದ್ದಾರೆ.
ಅಲ್ಲದೆ, ರಾಹುಲ್ ಗಾಂಧಿ ತಮ್ಮ ಟ್ವೀಟ್ನಲ್ಲಿ 2006 ರಲ್ಲಿ ಎಪಿಎಂಸಿಗಳು ಅಥವಾ ಸರ್ಕಾರಿ ಮಂಡಿಗಳನ್ನು ಸಂಪೂರ್ಣವಾಗಿ ರದ್ದುಪಡಿಸಿದಾಗ ಬಿಹಾರದ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಹ ಪಡೆದಿರಲಿಲ್ಲ ಎಂಬ ವರದಿಗಳ ಆಯ್ದ ಭಾಗಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ನೂತನ ರೈತ ಮಸೂದೆಗಳು ಎಷ್ಟು ಅನಾಹುತಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
"ಈಗಾಗಲೇ ಬಿಹಾರದ ರೈತ ಎಂಎಸ್ಪಿ (ಕನಿಷ್ಟ ಬೆಂಬಲ ಬೆಲೆ) ಮತ್ತು ಎಪಿಎಂಸಿ ಇಲ್ಲದೆ ಸಾಕಷ್ಟು ತೊಂದರೆಯಲ್ಲಿದ್ದಾನೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬದಲು ಇಡೀ ದೇಶದ ರೈತರನ್ನು ಇದೇ ಬಾವಿಗೆ ತಳ್ಳಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ದೇಶವನ್ನು ಪೋಷಿಸುವ ರೈತರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ .
ಈ ಹಿಂದೆ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಎಪಿಎಂಸಿ ಅನ್ನು ರದ್ದುಗೊಳಿಸಿದರೆ ರೈತರ ಮೇಲಾಗುವ ಪರಿಣಾಮಗಳೇನು? ಎಂದು ಮಾತನಾಡಿದ್ದರು. ಈ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಬಿಹಾರದಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿರವುದರಿಂದ ಬಿಹಾರದ ರೈತರಿಗೆ ಭಾರೀ ಅನಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಈ ಹಿಂದೆ ಹೇಳಿದ್ದಾರೆ.
ಎನ್ಡಿಟಿವಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಸಾಕಷ್ಟು ಸಂಖ್ಯೆಯಲ್ಲಿ ಗೋಧಿ ಬೆಳೆಯುವ ಬಿಹಾರದ ರೈತರು ಸಮರ್ಪಕ ಮಾರುಕಟ್ಟೆ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ ಇಲ್ಲದೆ ರೈತರ ಬೆಳೆಗಳು ಕೊಳೆಯುತ್ತಿವೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಆದರೆ, ಇದೇ ಮೋದಿ ಇದೀಗ ತನ್ನ ಮಾತಿಗೆ ವಿರುದ್ಧವಾದ ಕಾನೂನುಗಳ ಜಾರಿಗೆ ಮುಂದಾಗುವ ಮೂಲಕ ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಇದನ್ನೂ ಓದಿ : Farmers Protest; ದೆಹಲಿ ಚಲೋ; ಕೆನಡಾ ಬೆನ್ನಿಗೆ ಭಾರತದ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಲಂಡನ್ನ 36 ಸಂಸದರು!
"ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸುವುದರಿಂದ ದೇಶಕ್ಕೆ ಹೇಗೆ ಹಾನಿಯಾಗುತ್ತದೆ ಎಂಬುದು ನಿಶ್ಚಿತ. ಇಡೀ ದೇಶದ ರೈತ ಸಮುದಾಯವು ತೊಂದರೆ ಅನುಭವಿಸಬೇಕೆಂದು ನೀವು ಬಯಸದಿದ್ದರೆ, ದಯವಿಟ್ಟು ರೈತರ ಹೋರಾಟವನ್ನು ಬೆಂಬಲಿಸಿ" ಎಂದು ತಮ್ಮ ವಿಡಿಯೋ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಈಗಾಗಲೇ ರೈತರ ಹೋರಾಟ 10ನೇ ದಿನಕ್ಕೆ ಕಾಲಿಟ್ಟಿದ್ದು, ಕೇಂದ್ರ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದೆ. ಈ ನಡುವೆ ರೈತರು ಕೇಂದ್ರ ಸರ್ಕಾರದ ನೂತಕ ಕೃಷಿ ಮಸೂದೆಯನ್ನು ಖಂಡಿಸಿ ಡಿಸೆಂಬರ್ 8 ರಂದು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದ್ದಾರೆ.
Published by:
MAshok Kumar
First published:
December 5, 2020, 3:48 PM IST