ಕೊರೋನಾ ಮೊದಲನೆ ಅಲೆಯ ವೇಳೆ ಪೂರಿ ಜಗನ್ನಾಥ ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ ಅವರನ್ನು ಬೂಟಿನಲ್ಲಿ ಹೊಡೆಯಲು ನೆರವಾಗುವಂತೆ ವಾಟ್ಸಪ್ ಮೆಸೇಜ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದ ವ್ಯಕ್ತಿಗೆ ಒರಿಸ್ಸಾ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕಳೆದ ವರ್ಷ ರಥಯಾತ್ರೆ ನಡೆಸಲು ನಿವೃತ್ತ ಸಿಜೆಐ ಬೊಬ್ಡೆ ನೇತೃತ್ವದ ಪೀಠವು ಅನುಮತಿ ನಿರಾಕರಿಸಿದ್ದಕ್ಕೆ ಧರ್ಮ ರಕ್ಷಕ್ ಶ್ರೀ ದಾರಾ ಸೇನಾ ರಾಷ್ಟ್ರೀಯ ಅಧ್ಯಕ್ಷ ಆಕ್ಷೇಪಿಸಿದ್ದರು. ರಥಯಾತ್ರೆ ನಿರ್ಬಂಧಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದಕ್ಕೆ ನಿವೃತ್ತ ಸಿಜೆಐ ಕಾರಣ ಎಂದು ಅರ್ಜಿದಾರರು ಆಪಾದಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬೊಬ್ಡೆ ಅವರ ಮೇಲೆ ಬೂಟಿನ ದಾಳಿ ನಡೆಸಲು ತಮಗೆ ಬೆಂಬಲ ನೀಡುವಂತೆ ಕೋರಿದ್ದ ಸಂದೇಶವನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಇದೇ ಸಂದೇಶದಲ್ಲಿ ನಿವೃತ್ತ ಸಿಜೆಐ ಬೊಬ್ಡೆ ಅವರನ್ನು ನಕ್ಸಲ್ ಮತ್ತು ಕ್ರಿಶ್ಚಿಯನ್ ಭಯೋತ್ಪಾದಕ ಎಂದು ಬಿಂಬಿಸಿದ್ದರು.
ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿ ಗಲಭೆಗೆ ಪ್ರಚೋದನೆ, ಧರ್ಮ ಮತ್ತು ಭಾಷೆ ಇತ್ಯಾದಿ ವಿಚಾರಗಳ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು, ಪೂರ್ವಾಗ್ರಹಪೀಡಿತವಾಗಿ ರಾಷ್ಟ್ರೀಯ ಐಕ್ಯತೆ, ಆಪಾದನೆ ಮಾಡುವುದು ಧಾರ್ಮಿಕ ಭಾವನೆ ಕೆರಳಿಸುವುದು, ಶಾಂತಿ ಭಂಗ ಉಂಟು ಮಾಡುವುದು, ಸಾರ್ವಜನಿಕರಿಗೆ ಕೇಡುಂಟು ಮಾಡುವುದು ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ಎಫ್ ಅಡಿ (ಸೈಬರ್ ಭಯೋತ್ಪಾದನೆ) ದೂರು ದಾಖಲಿಸಲಾಗಿತ್ತು.
ಆರೋಪಿಯ ಬಂಧನದ ಅವಧಿ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧನ ಮುಕ್ತಗೊಳಿಸಲು ನ್ಯಾಯಾಲಯ ಆದೇಶಿಸಿರುವುದನ್ನು ನ್ಯಾಯಮೂರ್ತಿ ಎಸ್ ಕೆ ಪಾಣಿಗ್ರಹಿ ನೇತೃತ್ವದ ಏಕಸದಸ್ಯ ಪೀಠವು ಗಣನೆಗೆ ತೆಗೆದುಕೊಂಡು ಜಾಮೀನು ನೀಡಿ ಆದೇಶ ಹೊರಡಿಸಿದೆ.