ಲೋಕಸಭೆ, ವಿಧಾನಸಭೆ ಏಕಕಾಲ ಚುನಾವಣೆ: ವಾಸ್ತವದಲ್ಲಿ ಅಸಾಧ್ಯವೆಂದ ಆಯೋಗದ ಮುಖ್ಯಸ್ಥ ರಾವತ್​

ಒಂದೆಡೆ ಬಿಜೆಪಿ ಏಕಕಾಲಕ್ಕೆ ಲೋಕಸಭೆ ಮತ್ತ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದೆ. ಮತ್ತೊಂದೆಡೆ ವಾಸ್ತವದಲ್ಲಿ ಇದು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.

news18
Updated:August 14, 2018, 12:44 PM IST
ಲೋಕಸಭೆ, ವಿಧಾನಸಭೆ ಏಕಕಾಲ ಚುನಾವಣೆ: ವಾಸ್ತವದಲ್ಲಿ ಅಸಾಧ್ಯವೆಂದ ಆಯೋಗದ ಮುಖ್ಯಸ್ಥ ರಾವತ್​
ಒಂದೆಡೆ ಬಿಜೆಪಿ ಏಕಕಾಲಕ್ಕೆ ಲೋಕಸಭೆ ಮತ್ತ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವಂತೆ ಪಟ್ಟು ಹಿಡಿದಿದೆ. ಮತ್ತೊಂದೆಡೆ ವಾಸ್ತವದಲ್ಲಿ ಇದು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ.
news18
Updated: August 14, 2018, 12:44 PM IST
- ನೀರಜ್​ ಕುಮಾರ್​, ನ್ಯೂಸ್​ 18 ಕನ್ನಡ

ನವದೆಹಲಿ (ಆಗಸ್ಟ್​ 14): 2019ರ ಲೋಕಸಭಾ ಚುನಾವಣೆಯ ಜತೆಗೆ 11 ರಾಜ್ಯಗಳ ಚುನಾವಣೆ ಮಾಡುವ ಚಿಂತನೆಯನ್ನು ಬಿಜೆಪಿ ಹೊರಹಾಕಿದೆ. ಇದರ ಬೆನ್ನಲ್ಲೇ ಕೇಂದ್ರ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಓಂ ಪ್ರಕಾಶ್​ ರಾವತ್​ ವಿವಿಪ್ಯಾಟ್​ ಕೊರತೆ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಚುನಾವಣೆ ಅಸಾಧ್ಯ ಎಂದಿದ್ದಾರೆ.

ನ್ಯೂಸ್​ 18 ಜತೆ ಮಾತನಾಡಿದ ಓಂ ಪ್ರಕಾಶ್​ ರಾವತ್​, 2019ರ ಲೋಕಸಭೆ ಚುನಾವಣೆ ಜತೆಗೆ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವ ಯೋಚನೆಯಿದ್ದರೆ ಎರಡು ತಿಂಗಳೊಳಗಾಗಿ ವಿವಿಪ್ಯಾಟ್​ಗಳನ್ನು ಖರೀದಿಸಲು ಆದೇಶ ಹೊರಡಿಸಬೇಕು. ಸದ್ಯ ಚುನಾವಣಾ ಆಯೋಗದ ಬಳಿಯಿರುವ ವಿವಿಪ್ಯಾಟ್​ ಮತ್ತು ಇವಿಎಂಗಳಿಂದ ಏಕ ಕಾಲಕ್ಕೆ ಚುನಾವಣೆ ನಡೆಸುವುದು ಅಸಾಧ್ಯ ಎಂದಿದ್ದಾರೆ.

ನ್ಯೂಸ್​ 18 ಜತೆ ಮಾತನಾಡಿದ ಚುನಾವಣಾ ಆಯೋಗದ ಕಾನೂನು ವಿಭಾಗದ ಹಿರಿಯ ಸದಸ್ಯ ಎಸ್​.ಕೆ. ಮೆಂದಿರತ್ತಾ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಇರುವ ಇವಿಎಂ ಮತ್ತು ವಿವಿಪ್ಯಾಟ್​ಗಳಿಂದ ಏಕಕಾಲ ಚುನಾವಣೆ ಅಸಾಧ್ಯ, ಏಕಕಾಲಕ್ಕೆ ಚುನಾವಣೆ ಮಾಡಲು ಕನಿಷ್ಟ ಮೂರು ವರ್ಷಗಳು ಬೇಕಾಗಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಮಹಾರಾಷ್ಟ್ರ, ಹರಿಯಾಣ, ಜಾರ್​ಖಂಡ್​ ರಾಜ್ಯಗಳಲ್ಲಿ 2019ರ ಅಂತ್ಯಕ್ಕೆ ಚುನಾವಣೆ ನಡೆಯಲಿದೆ. ಬಿಹಾರದಲ್ಲಿ 2020ರಲ್ಲಿ ಚುನಾವಣೆ ನಡೆಯಲಿದೆ. ಏಕಕಾಲಕ್ಕೆ ಚುನಾವಣೆ ನಡೆಸುವ ಬಿಜೆಪಿ ಚಿಂತನೆಗೆ ನಿತೀಶ್​ ಕುಮಾರ್​ ನೇತೃತ್ವದ ಬಿಹಾರ್​ ಕೂಡ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಲ್ಲಿ ರಾಜ್ಯಗಳನ್ನು ಏಕ ಕಾಲ ಚುನಾವಣೆಗೆ ಒಪ್ಪಿಸುವುದು ಕಷ್ಟಕರವಲ್ಲ. ಹೀಗಿದ್ದರೂ ಚುನಾವಣಾ ಆಯೋಗಕ್ಕೆ ಏಕಕಾಲ ಚುನಾವಣೆ ನಡೆಸುವುದು ಕಷ್ಟಸಾಧ್ಯವಾಗಿದೆ.

ಬಿಜೆಪಿ ಚಿಂತನೆಯ ಪ್ರಕಾರ ಮಧ್ಯ ಪ್ರದೇಶ, ಚತ್ತೀಸ್​ಗಢ, ರಾಜಸ್ಥಾನದಲ್ಲಿ 2018ರ ಅಂತ್ಯಕ್ಕೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳನ್ನು ಒರಿಸ್ಸಾ, ತೆಲಂಗಾಣ, ಆಂದ್ರ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಜತೆ ಸೇರಿಸಿ 2019ರಲ್ಲಿ ಲೋಕಸಭೆ ಚುನಾವಣೆ ಜತೆಜತೆಗೆ ಚುನಾವಣೆ ನಡೆಸುವ ಯೋಜನೆ ಬಿಜೆಪಿ ಹೊಂದಿದೆ. ಈ ಕಾರಣಕ್ಕೆ ಈ ಎಲ್ಲಾ ರಾಜ್ಯಗಳ ಜತೆ ಮಾತುಕತೆಗಾಗಿ ಕೇಂದ್ರ ಶೀಘ್ರದಲ್ಲೇ ಸಭೆ ಏರ್ಪಡಿಸುವ ಸಾಧ್ಯತೆಯಿದೆ.

ಲೋಕಸಭೆ ಮತ್ತು ರಾಜ್ಯಗಳ ಚುನಾವಣೆಗಳನ್ನು ಒಟ್ಟಿಗೆ ನಡೆಸುವುದರಿಂದ ನರೇಂದ್ರ ಮೋದಿಯವರು ಮೊದಲಿನಿಂದ ಹೇಳಿಕೊಂಡು ಬಂದಂತೆಯೇ ಆಗುತ್ತದೆ ಎಂಬ ನಿಲುವು ಬಿಜೆಪಿಯೊಳಗಿದೆ. ಜತೆಗೆ ನರೇಂದ್ರ ಮೋದಿಯವರ ಬ್ರಾಂಡ್​ ಎಲ್ಲಾ ಚುನಾವಣೆಗಳ ಮೇಲೂ ಪ್ರಭಾವ ಬೀರಲಿದೆ ಎಂಬ ಅಭಿಪ್ರಾಯವಿದೆ. ಏಕಕಾಲಕ್ಕೆ ಚುನಾವಣೆ ಮಾಡುವುದರಿಂದ ಕೇಂದ್ರದ ಬೊಕ್ಕಸದಿಂದ ಕಡಿಮೆ ಹಣ ಖರ್ಚಾಗಲಿದೆ ಎಂಬ ವಾದವನ್ನೂ ಬಿಜೆಪಿ ಹೂಡುತ್ತಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಪಶ್ಚಿಮ ಬಂಗಾಳದಲ್ಲಿ ಮಾತನಾಡುವಾಗ ಇದೇ ತಂತ್ರವನ್ನು ಹೂಡಿದ್ದರು. ಒಂದೇ ದೇಶ ಒಂದೇ ಮತದಾನ ಎಂಬ ವಾದವನ್ನು ಮಾಡಿದ್ದರು. ಬೇರೆ ಬೇರೆ ಸಮಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇಶದ ಬೊಕ್ಕಸದಿಂದ ಹೆಚ್ಚು ಹಣ ಖರ್ಚಾಗುತ್ತಿದೆ ಎಂಬುದನ್ನೂ ಹೇಳಿದ್ದರು.
Loading...

ಈ ಹಿಂದೆ ಚುನಾವಣಾ ಆಯೋಗ ವರ್ಷಕ್ಕೊಂದೇ ಚುನಾವಣೆ ನಡೆಸುವ ಚಿಂತನೆಯ ಬಗ್ಗೆ ತಿಳಿಸಿತ್ತು. ಇದಕ್ಕೆ ಕೇಂದ್ರ ಮೊದಲಿಗೆ ಒಪ್ಪಿಕೊಂಡರೂ ನಂತರ ಇಡೀ ದೇಶದಲ್ಲಿ ಒಂದೇ ಬಾರಿ ಚುನಾವಣೆಯಾಗಬೇಕು ಎಂಬ ನಿಲುವು ತಾಳಿತು. ಜತೆಗೆ ಒಕ್ಕೂಟ ವ್ಯವಸ್ಥೆಯ ಅನ್ವಯ ಒಂದೇ ಕಾಲಕ್ಕೆ ಎಲ್ಲಾ ಚುನಾವಣೆಯೂ ನಡೆಯಬೇಕು ಎಂಬ ಬೇಡಿಕೆಯೊಡ್ಡುತ್ತಿದೆ. ಅಮಿತ್​ ಶಾ ಕೇಂದ್ರ ಚುನಾವಣಾ ಆಯೋಗಕ್ಕೆ ಬರೆದ ಪತ್ರದಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ವರ್ಷವಿಡೀ ದೇಶದ ಒಂದಲ್ಲಾ ಒಂದು ಭಾಗದಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಇದರಿಂದ ಜನ ಚುನಾವಣೆಯ ಗುಂಗಿನಲ್ಲೇ ಸದಾ ಇರುವಂತಾಗಿದೆ. ಹೀಗಾಗಿ ಏಕಕಾಲಕ್ಕೆ ಚುನಾವಣೆ ನಡೆಸಿ ಎಂದು ಚುನಾವಣಾ ಆಯೋಗಕ್ಕೆ ಶಾ ಮನವಿ ಮಾಡಿದ್ದರು.

ಸದ್ಯ ಕೇಂದ್ರ ಮತ್ತು ಬಹುತೇಕ ರಾಜ್ಯ ಸರ್ಕಾರಗಳು ಏಕಕಾಲಕ್ಕೆ ಚುನಾವಣೆ ನಡೆಸಲು ಒಪ್ಪಿಗೆ ಸೂಚಿಸಿದರೂ ವಾಸ್ತವದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲದ ಸ್ಥಿತಿಯಿದೆ. ಕೇಂದ್ರ ಈ ಚಿಂತನೆಯ ಹಿಂದೆ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅಗತ್ಯವಿರುವ ವಿವಿಪ್ಯಾಟ್​ ಮತ್ತು ಇವಿಎಂಗಳ ಖರೀದಿ ಸಂಬಂಧ ನಿರ್ಧಾರ ತೆಗೆದುಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕು.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...