ನವದೆಹಲಿ (ಮಾ.02): ಮೂರು ವಾರಗಳ ವಿರಾಮದ ಬಳಿಕ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಿದ್ದು, ಸಿಎಎ ಗದ್ದಲದಲ್ಲಿ ಉಭಯ ಕಲಾಪದ ಸಮಯ ವ್ಯರ್ಥವಾಗಿದೆ.
ದೇಶದಲ್ಲಿ ಪೌರತ್ವ ಪರ ವಿರೋಧಗಳ ಹೋರಾಟಕ್ಕೆ 46 ಜನ ಸಾವನ್ನಪ್ಪಿದ್ದು, ಈ ಘಟನೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದವು.
ದೆಹಲಿ ಸಿಎಎ ಹಿಂಸಾಚಾರ ಕುರಿತು ಚರ್ಚಿಸಲು ನಾಲ್ಕು ದಿನಗಳ ಕಾಲಾವಕಾಶ ನೀಡಬೇಕು ಎಂದು ಆಗ್ರಹಿಸಿ ಎರಡು ಸದನದ ಸದಸ್ಯರು ಸ್ಪೀಕರ್ಗೆ ಮನವಿ ಮಾಡಿದರು. ಆದರೆ, ಇದಕ್ಕೆ ಅವಕಾಶ ನೀಡದ ಸ್ಪೀಕರ್ ಓಂ ಬಿರ್ಲಾ, ಬಜೆಟ್ ಮೇಲಿನ ಚರ್ಚೆ ಬಿಟ್ಟು ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ವಾದ ವಿವಾದಗಳು ಸರಿಯಲ್ಲ. ಪರಿಸ್ಥಿತಿ ಕೊಂಚ ಸುಧಾರಿಸಲಿ. ಇದಾದ ಬಳಿಕ ಈ ಕುರಿತು ಚರ್ಚೆ ನಡೆಸೋಣ ಎಂದರು.
ಈ ವೇಳೆ ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ ಕೊಂಚ ಕಾಲ ಸದನವನ್ನು ಮುಂದೂಡಲಾಯಿತಾದರೂ, ಮತ್ತೆ ಸದನದಲ್ಲಿ ಇದೇ ಹೇಳಿಕೆಗಳು ಪ್ರತಿಧ್ವನಿಸಿದವು. ಈ ಹಿನ್ನೆಲೆ ಲೋಕಸಭೆಯನ್ನು ಸಂಜೆ ನಾಲ್ಕು ಗಂಟೆವರೆಗೆ ಮುಂದೂಡಲಾಯಿತು. ಇನ್ನು ರಾಜ್ಯಸಭೆಯಲ್ಲಿ ಕೂಡ ಕಾಂಗ್ರೆಸ್, ಟಿಎಂಸಿ, ಎಸ್ಪಿ, ಬಿಎಸ್ಪಿ ಮತ್ತು ಡಿಎಂಕೆ ಈ ವಿಷಯ ಕುರಿತು ಚರ್ಚೆಗೆ ಆಗ್ರಹಿಸಿದರು. ಪ್ರತಿಪಕ್ಷಗಳನ್ನು ಸಮಾಧಾನಿಸುವಲ್ಲಿ ರಾಜ್ಯಸಭೆ ಚೇರ್ಮನ್ ವೆಂಕಯ್ಯ ನಾಯ್ಡು ವಿಫಲವಾದ ಹಿನ್ನೆಲೆ ನಾಳೆಗೆ ಕಲಾಪವನ್ನು ಮುಂದೂಡಲಾಗಿದೆ.
ಇದನ್ನು ಓದಿ: ಅಮಿತ್ ಶಾ ಕೋಲ್ಕತ್ತಾ ರ್ಯಾಲಿಯಲ್ಲಿ ವಿವಾದಾತ್ಮಕ ‘ಗೋಲಿ ಮಾರೊ..’ ಘೋಷಣೆ; 3 ಜನ ಆರೋಪಿಗಳ ಬಂಧನ
ದೆಹಲಿಯಲ್ಲಿ ಸಿಎಎ ಕಿಚ್ಚು ಹೊತ್ತು ಉರಿಯುತ್ತಿದೆ. ಆದರೆ, ಕೇಂದ್ರ ಸರ್ಕಾರ ಮಲಗಿದೆ. ಇದರ ಹೊಣೆ ಹೊತ್ತು ಮೋದಿ, ಶಾ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಮಧ್ಯಪ್ರವೇಶಿದ ರಾಜ್ಯ ಸಭಾ ಚೇರ್ಮನ್ ವೆಂಕಯ್ಯ ನಾಯ್ಡು, ಖಂಡಿತವಾಗಿ ಇದು ಚರ್ಚೆ ಮಾಡಲು ಪ್ರಮುಖ ವಿಷಯ. ಇದನ್ನು ಚರ್ಚಿಸಲೇಬೇಕು. ಇದಕ್ಕೆ ಚರ್ಚಿಸಲು ಸಮಯ ನೀಡುತ್ತೇವೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ