OBC Bill- ಓಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಲು ವಿಪಕ್ಷಗಳ ನಿರ್ಧಾರ
ರೈತರ ಪ್ರತಿಭಟನೆ, ಪೆಗಾಸಸ್ ಸ್ಪೈವೇರ್ ಪ್ರಕರಣ ವಿಚಾರವಾಗಿ ಸರ್ಕಾರದ ನಿಲುವನ್ನು ವಿರೋಧಿಸುತ್ತಾ ಬಂದಿರುವ ಕೇಂದ್ರ ವಿಪಕ್ಷಗಳು ಇದೀಗ ಕೇಂದ್ರ ಹೊರತಂದಿರುವ ಒಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲಿಸಲು ನಿರ್ಧರಿಸಿವೆ.
ನವದೆಹಲಿ, ಆ. 09: ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮದೇ ಇತರ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿ ತಯಾರಿಸಲು ಅಧಿಕಾರ ನೀಡುವ ಬಹಳ ಮಹತ್ವದ ಓಬಿಸಿ ತಿದ್ದುಪಡಿ ಮಸೂದೆಗೆ ವಿಪಕ್ಷಗಳು ಒಪ್ಪಿಗೆ ನೀಡಸಲು ನಿರ್ಧರಿಸಿವೆ. ರೈತರ ಮುಂದುವರಿದ ಪ್ರತಿಭಟನೆ ಹಾಗೂ ಪೆಗಾಸಸ್ ಗೂಢಚರ್ಯೆ ವಿಷಯಗಳಲ್ಲಿ ಸರ್ಕಾರದ ನಿಲುವನ್ನು ವಿರೋಧಿಸುತ್ತಾ ಬಂದಿರುವ ವಿಪಕ್ಷಗಳು ಇಂದು ಒಬಿಸಿ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿರುವುದು ಗಮನಾರ್ಹ. ಈ ಮಸೂದೆ ವಿಚಾರವನ್ನು ಬಹಳ ಗಂಭೀರವಾಗಿ ಪರಿಗಣಿಸಿರುವ ವಿಪಕ್ಷಗಳು ಈ ಮಸೂದೆ ಮೇಲಿನ ಚರ್ಚೆ, ವೋಟಿಂಗ್ ಹಾಗೂ ಅನುಮೋದನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಸದನದಲ್ಲಿ ತಾವು ನಡೆಸುತ್ತಿರುವ ಪ್ರತಿಭಟನೆಯನ್ನ ತಾತ್ಕಾಲಿಕವಾಗಿ ಕೈಬಿಡುವ ತಂತ್ರಕ್ಕೂ ಮೊರೆ ಹೋಗಿವೆ ಎಂದು ವರದಿಗಳು ಹೇಳುತ್ತಿವೆ.
“ಇದು (ಒಬಿಸಿ ಪಟ್ಟಿ) ದೊಡ್ಡ ವಿಷಯ. ಈ ವಿಚಾರದಲ್ಲಿ ನಾವು ಕೇಂದ್ರವನ್ನು ಬೆಂಬಲಿಸುತ್ತೇವೆ” ಎಂದು ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಸಿನ್ಹಾ ಹೇಳಿದ್ಧಾರೆ. ಇದೇ ವೇಳೆ, ಅವರು ದೇಶವ್ಯಾಪಿ ಜಾತಿ ಆಧಾರಿತ ಜನಗಣತಿ ನಡೆಬೇಕೆಂದು ಕೇಂದ್ರದ ಮೇಲೆ ಒತ್ತಡ ಹಾಕುವುದಾಗಿ ತಿಳಿಸಿದ್ದಾರೆ.
2018ರಲ್ಲಿ ರಚಿಸಲಾಗಿದ್ದ ಕಾನೂನು ಪ್ರಕಾರ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ. ಪಟ್ಟಿಯಲ್ಲಿ ತಮ್ಮ ರಾಜ್ಯಕ್ಕೆ ಬದಲಾವಣೆ ಅಗತ್ಯ ಇದ್ದಲ್ಲಿ ಆಯಾ ರಾಜ್ಯ ಸರ್ಕಾರಗಳು ಕೇಂದ್ರದ ಬಳಿ ಮನವಿ ಮಾಡಿಕೊಳ್ಳಬಹುದಷ್ಟೇ. ಮರಾಠ ಸಮುದಾಯದ ಮೀಸಲಾತಿ ವಿಚಾರ ಇದೇ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಬಂದಾಗ ಈ ಕಾನೂನು ಪ್ರಮುಖ ತೊಡಕಾಗಿ ಕಂಡಿತ್ತು. ಈ ಹಿನ್ನೆಲೆಯಲ್ಲಿ ಈ ಕಾನೂನಿಗೆ ಈಗ ತಿದ್ದುಪಡಿ ತರಲಾಗಿದೆ. ಅದರಂತೆ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಓಬಿಸಿ ಪಟ್ಟಿ ತಯಾರಿಸುವ ಅಧಿಕಾರ ಹೊಂದಿರುತ್ತವೆ. ಈಗ ವಿಪಕ್ಷಗಳು ಈ ತಿದ್ದುಪಡಿ ಮಸೂದೆಗೆ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲದೇ ತಿದ್ದುಪಡಿ ಮಸೂದೆಗೆ ಎರಡೂ ಸದನಗಳಲ್ಲಿ ಅನುಮೋದನೆ ಸಿಗುವುದು ಖಚಿತವಾಗಿದೆ.
ಒಬಿಸಿ ತಿದ್ದುಪಡಿ ಮಸೂದೆಗೆ ಅನುಮೋದನೆ ದೊರೆತ ಬಳಿಕ ವಿಪಕ್ಷಗಳು ತಮ್ಮ ಪ್ರತಿಭಟನೆಗಳನ್ನ ಮುಂದುವರಿಸುವ ಸಾಧ್ಯತೆ ಇದೆ. ದೆಹಲಿಯ ಸಮೀಪ ಹಲವು ತಿಂಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಮತ್ತಿತರ ವಿಪಕ್ಷಗಳು ಬೆಂಬಲ ನೀಡಿವೆ. ಹಾಗೆಯೇ, ಸರ್ಕಾರದಿಂದ ಪೆಗಾಸಸ್ ಎಂಬ ಗೂಢಚಾರಿಕೆ ಸ್ಪೈವೇರ್ ಬಳಸಿ ಅನೇಕರ ಫೋನ್ ಸಂದೇಶಗಳನ್ನ ಕದ್ದು ನೋಡಲಾಗಿದೆ ಎಂಬಂತಹ ಆರೋಪಗಳು ಕೇಳಿಬಂದಿದ್ದವು. ಈ ಎರಡು ವಿಚಾರಗಳ ವಿರುದ್ಧ ವಿಪಕ್ಷಗಳು ಸಂಸತ್ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಮುಂಗಾರು ಅಧಿವೇಶನದ ವೇಳೆ ಪ್ರತಿಭಟನೆಗಳನ್ನ ನಡೆಸುತ್ತಿದೆ. ಈಗ ಒಬಿಸಿ ತಿದ್ದುಪಡಿ ಮಸೂದೆಗೆ ಅನುಮೋದನೆ ಕೊಟ್ಟ ಬಳಿಕ ತಮ್ಮ ಹೋರಾಟವನ್ನು ವಿಪಕ್ಷಗಳು ಮುಂದುವರಿಸಲಿವೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ