ಅಮಾನತುಗೊಂಡ ಸಂಸದರ ಪರ ನಿಂತ ವಿಪಕ್ಷಗಳು; ರಾಜ್ಯಸಭೆಗೆ ಬಹಿಷ್ಕಾರ, 3 ಬೇಡಿಕೆಗಳು
ಸಂಸದರನ್ನು ಅಮಾನತುಗೊಳಿಸಿದ ಕ್ರಮ ವಾಪಸ್ ಪಡೆಯಬೇಕು; ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರ ಬೆಳೆ ಖರೀದಿ ಆಗುವುದನ್ನು ಖಾತ್ರಿಪಡಿಸಬೇಕು ಎಂಬುದು ಸೇರಿದಂತೆ ರಾಜ್ಯಸಭಾ ವಿಪಕ್ಷ ಸದಸ್ಯರು ಬೇಡಿಕೆ ಮುಂದಿಟ್ಟು ವಾಕೌಟ್ ಮಾಡಿದ್ದಾರೆ.
ನವದೆಹಲಿ(ಸೆ. 22): ಎಂಟು ರಾಜ್ಯಸಭಾ ಸದಸ್ಯರ ಅಮಾನತು ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ತಿಕ್ಕಾಟ ಮುಂದುವರಿದಿದೆ. ಬಹುತೇಕ ವಿಪಕ್ಷಗಳು ಒಟ್ಟುಗೂಡಿ ರಾಜ್ಯಸಭೆಯನ್ನೇ ಬಹಿಷ್ಕರಿಸಿದ್ದಾರೆ. ಸಂಸದರ ಮೇಲಿನ ಅಮಾನತು ಕ್ರಮವನ್ನು ವಾಪಸ್ ಪಡೆಯುವವರೆಗೂ ರಾಜ್ಯಸಭೆಯ ಕಲಾಪವನ್ನು ವಿಪಕ್ಷಗಳು ಬಹಿಷ್ಕರಿಸುತ್ತವೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್. ಅಮಾನತು ಹಿಂಪಡೆಯುವಿಕೆ ಸೇರಿ ವಿಪಕ್ಷಗಳು ಒಟ್ಟು 3 ಬೇಡಿಕೆಗಳನ್ನ ಮುಂದಿಟ್ಟಿವೆ. ಈ ಮೂರು ವಿಚಾರಗಳ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟವಾಗುವವರೆಗೂ ವಿಪಕ್ಷಗಳು ರಾಜ್ಯಸಭಾ ಕಲಾಪದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ.
ಸಂಸದರ ಅಮಾನತು ಕ್ರಮವನ್ನು ಹಿಂಪಡೆಯಲು ಷರತ್ತಿನ ಮೇಲೆ ಕೇಂದ್ರ ಸರ್ಕಾರ ಒಪ್ಪಿದೆ. ಅಮಾನತುಗೊಂಡ ಸಂಸದರು ಭಾನುವಾರ ರಾಜ್ಯಸಭೆಯಲ್ಲಿ ತೋರಿದ ತಮ್ಮ ದುರ್ವರ್ತನೆ ಬಗ್ಗೆ ಕ್ಷಮೆ ಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಷರತ್ತು ಮುಂದಿಟ್ಟರು. ಆದರೆ, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್ ಅವರು ತಾನು ವಿಪಕ್ಷಗಳ ಪರವಾಗಿ ಕ್ಷಮೆ ಕೋರುವುದಾಗಿ ಹೇಳಿ ಸಂಸದರ ಅಮಾನತು ಕ್ರಮವನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಆದರೆ, ಆದರೆ ಬೇರೆ ವಿಪಕ್ಷ ನಾಯಕರು ಇದಕ್ಕೆ ಒಪ್ಪಲಿಲ್ಲ.
ಮೂರು ಬೇಡಿಕೆಗಳು: ಎಂಟು ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮ ವಾಪಸ್ ಪಡೆಯುವುದು; ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ದರದಲ್ಲಿ ಖಾಸಗಿ ಸಂಸ್ಥೆಗಳು ರೈತರಿಗೆ ಬೆಳೆ ಖರೀದಿಸುವುದನ್ನು ಖಾತ್ರಿಪಡಿಸಬೇಕು; ಹಾಗೂ ಎಂಎಸ್ಪಿ ಬೆಲೆಯನ್ನು ಎಂಎಸ್ ಸ್ವಾಮಿನಾಥನ್ ಸಮಿತಿಯ ವರದಿಯಲ್ಲಿ ತಿಳಿಸಿರುವ ಸೂತ್ರದ ಪ್ರಕಾರ ಕಾಲಕಾಲಕ್ಕೆ ಪರಿಷ್ಕರಿಸಬೇಕು. ಈ ಮೂರು ಬೇಡಿಕೆಗಳನ್ನ ವಿಪಕ್ಷಗಳು ಮುಂದಿಟ್ಟಿವೆ.
ಅಮಾನುತುಗೊಂಡ ಸಂಸದರು ಕ್ಷಮೆ ಕೋರಿದರೆ ಸರ್ಕಾರ ಅವರ ಅಮಾನತನ್ನು ಹಿಂಪಡೆಯುತ್ತದೆ. ಜೊತೆಗೆ, ಕೃಷಿ ಮಸೂದೆಗಳ ಮೇಲೆ ಚರ್ಚೆಗೆ ಹಾಗೂ ಮತಗಳ ವಿಭಜನೆಗೆ ಸರ್ಕಾರ ಸಿದ್ಧ ಇದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಷಿ ಸ್ಪಷ್ಟಪಡಿಸಿದರು. ಸಚಿವ ರವಿಶಂಕರ್ ಪ್ರಸಾದ್ ಹಾಗೂ ತಾವರ್ ಚಂದ್ ಗೆಹ್ಲೋಟ್ ಕೂಡ ಇದೇ ಅಭಿಪ್ರಾಯಪಟ್ಟರು. ಆದರೆ, ಸಂಸದರು ಯಾವುದೇ ಕಾರಣಕ್ಕೂ ಕ್ಷಮೆ ಕೋರುವ ಪ್ರಶ್ನೆಯೇ ಇ ಲ್ಲ. ಬದಲಾಗಿ ಸರ್ಕಾರವೇ ರೈತರಿಗೆ ಕ್ಷಮೆ ಕೋರಬೇಕು ಎಂದು ವಿಪಕ್ಷಗಳ ನಾಯಕರು ಆಡಳಿತ ಪಕ್ಷದ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದರು.
ಬಳಿಕ ಬಹುತೇಕ ವಿಪಕ್ಷಗಳ ಸದಸ್ಯರು ರಾಜ್ಯಸಭೆಯಿಂದ ವಾಕೌಟ್ ಮಾಡಿದರು. ಕಾಂಗ್ರೆಸ್, ಆಮ್ ಆದ್ಮಿ, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ರಾಜ್ಯಸಭೆಯಿಂದ ಹೊರನಡೆದರು. ವಿಪಕ್ಷಗಳ ಪೈಕಿ ಬಿಜು ಜನತಾ ದಳ ಮತ್ತು ಬಹುಜನ ಸಮಾಜ ಪಕ್ಷದ ಸದಸ್ಯರು ಮಾತ್ರ ರಾಜ್ಯಸಭೆ ಬಾಯ್ಕಾಟ್ ಮಾಡಿದ ಗುಂಪಿಗೆ ಸೇರಲಿಲ್ಲ.
ಇವೆಲ್ಲದರ ಮಧ್ಯೆ ಮೂರನೇ ಕೃಷಿ ಮಸೂದೆ ಇಂದು ಮಧ್ಯಾಹ್ನ ರಾಜ್ಯಸಭೆಯಲ್ಲಿ ಅಂಗೀಕಾರ ಪಡೆಯಿತು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ