HOME » NEWS » National-international » OPPOSING THE FARM LAWS IS DETRIMENTAL FOR REFORMING AGRICULTURE SNVS

ಕೃಷಿ ಕ್ಷೇತ್ರದ ಸುಧಾರಣೆಗೆ ಯಾಕೆ ತಡೆ? ಜಾಗತೀಕರಣದ ಹೆಜ್ಜೆ ಇಟ್ಟವರಿಂದಲೇ ಅಡ್ಡಿಯಾಗುತ್ತಿರುವುದು ಆಶ್ಚರ್ಯ

ಕೇಂದ್ರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳು ರೈತರ ಜೀವನ ಬದಲಿಸಬಹುದು. ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರಲು ಇವು ನೆರವಾಗುತ್ತವೆ. ಆದರೂ ಕೂಡ ವಿಪಕ್ಷಗಳು ಈ ಪ್ರಯತ್ನಕ್ಕೆ ಅಡ್ಡಿಪಡಿಸುತ್ತಿರುವುದು ಅಚ್ಚರಿ ಮೂಡಿಸಿದೆ.

news18-kannada
Updated:December 13, 2020, 12:57 PM IST
ಕೃಷಿ ಕ್ಷೇತ್ರದ ಸುಧಾರಣೆಗೆ ಯಾಕೆ ತಡೆ? ಜಾಗತೀಕರಣದ ಹೆಜ್ಜೆ ಇಟ್ಟವರಿಂದಲೇ ಅಡ್ಡಿಯಾಗುತ್ತಿರುವುದು ಆಶ್ಚರ್ಯ
ಪಂಜಾಬ್ ರೈತರ ಪ್ರತಿಭಟನೆ
  • Share this:
ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕಾಯ್ದೆಗಳ ವಿರುದ್ಧ ರೈತರು ನಿರಂತರವಾಗಿ ಬೃಹತ್ ಪ್ರತಿಭಟನೆಗಳನ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರೈತರ ಪ್ರತಿಭಟನೆಗೆ ಜೊತೆಯಾಗಿ ನಿಂತಿವೆ. ವಿಪಕ್ಷಗಳು ರೈತರ ಬೆನ್ನಿಗೆ ನಿಂತಿದ್ದಾವಾ ಅಥವಾ ರೈತರ ಆಕ್ರೋಶದ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿವೆಯಾ ಎಂಬುದನ್ನು ಕಾಲವೇ ಉತ್ತರಿಸುತ್ತದೆ. ಭಾರತದಲ್ಲಿ ಸುಧಾರಣೆಯ ಪ್ರಕ್ರಿಯೆ ಯಾವತ್ತೂ ನಿರಂತರವಾಗಿ ನಡೆದಿಲ್ಲ. ಪ್ರತಿ ಬಾರಿ ಸುಧಾರಣಾ ಕ್ರಮ ಕೈಗೊಂಡಾಗಲೂ ಪ್ರತಿರೋಧ, ಅಡೆತಡೆ, ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ಆಗಿರುವ ಸುಧಾರಣಾ ಪ್ರಯತ್ನಗಳು. ಅದರಲ್ಲೂ ಗ್ರಾಮೀಣ ಭಾಗದ ಆರ್ಥಿಕತೆಯನ್ನು ಸುಧಾರಿಸಲು ನಡೆದಿರುವ ಪ್ರಯತ್ನಗಳಿಗೆ ಇನ್ನಿಲ್ಲದ ಪ್ರತಿರೋಧಗಳು ಬರುತ್ತಿವೆ.

ಭಾರತದ ಕೃಷಿ ಕ್ಷೇತ್ರದ ಸಂಕುಚಿತ ಆಯಾಮಗಳಿಂದಾಗಿ ರೈತರ ಪರವಾದ ವ್ಯಾವಹಾರಿಕ ವಾತಾವರಣ ನಿರ್ಮಾಣ ಸಾಧ್ಯವಾಗಿಲ್ಲ. ಭಾರತದಲ್ಲಿರುವ ಬಹುತೇಕ ರೈತರು ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರಾಗಿದ್ದಾರೆ. ಈಗಿರುವ ಮಾರುಕಟ್ಟೆ ವ್ಯವಸ್ಥೆ ಇಂಥ ರೈತರಿಗೆ ಅನನುಕೂಲತೆ ಇದೆ. ತಮ್ಮ ಬೆಳೆಯನ್ನು ಮಾರಿದಾಗ ಸಿಗುವ ಹಣವು ಇವರ ಸಂಸಾರದ ನೊಗ ಎಳೆಯುವಷ್ಟು ಸಾಕಾಗುವುದೇ ಇಲ್ಲ. ಅಂದರೆ, ಅವರು ಗಳಿಸುವ ಆದಾಯಕ್ಕಿಂತ ಖರ್ಚೇ ಹೆಚ್ಚಿರುತ್ತದೆ. ಬಟ್ಟೆಬರೆ, ಆಸ್ಪತ್ರೆ ಇತ್ಯಾದಿ ಮೂಲಭೂತ ಖರ್ಚುಗಳಿಗೂ ಇವರಿಗೆ ಹಣ ಸಾಕಾಗುವುದಿಲ್ಲ. ಕೃಷಿ ಕ್ಷೇತ್ರದಲ್ಲಿನ ವ್ಯವಹಾರದ ನಿಯಮಗಳು ರೈತರಿಗೆ ಮಾರಕವಾಗಿವೆ.

ಈ ವ್ಯಾವಹಾರಿಕ ಅಸಮತೋಲನವನ್ನು ಸರಿದೂಗಿಸಬೇಕೆಂದರೆ ರೈತರಿಗೆ ಅವರ ಬೆಳೆಗಳಿಗೆ ಅತ್ಯುತ್ತಮ ಬೆಲೆ ಒದಗಿಸುವ ಮಾರುಕಟ್ಟೆಯ ವ್ಯವಸ್ಥೆ ಆಗಬೇಕಿದೆ. ಕೇಂದ್ರ ಸರ್ಕಾರ ಹೇಳಿಕೊಂಡಿರುವ ಪ್ರಕಾರ ಅದರ ಮೂರು ಕೃಷಿ ಕಾಯ್ದೆಗಳು ಈ ನಿಟ್ಟಿನಲ್ಲಿ ಸಮರ್ಪಕ ಮಾರುಕಟ್ಟೆ ವ್ಯವಸ್ಥೆಯನ್ನ ರೂಪಿಸುತ್ತದೆ. ಹಾಗಿದ್ದ ಮೇಲೆ, ಈ ಸುಧಾರಣೆಗೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ? ವಿಪಕ್ಷಗಳು ಇದನ್ನು ಯಾಕೆ ಒಪ್ಪಿಕೊಳ್ಳುತ್ತಿಲ್ಲ? ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಈ ಪ್ರಶ್ನೆ ಸೂಕ್ತವೆನಿಸುತ್ತದೆ.

ಇದನ್ನೂ ಓದಿ: ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವವರಿಂದ ರೈತ ಹೋರಾಟಗಾರರು ದೂರ ಇರಿ; ನಿರ್ಮಲಾ ಸೀತಾರಾಮನ್

1991ರಲ್ಲಿ ಪ್ರಪಾತಕ್ಕೆ ಬೀಳುವಂತಿದ್ದ ಭಾರತದ ಆರ್ಥಿಕತೆಯನ್ನು ಸುಧಾರಣೆ ಮೂಲಕ ಮೇಲೆತ್ತಿದ್ದು ಇದೇ ಕಾಂಗ್ರೆಸ್​ನವರು. 1991ರ ಆ ತಿರುವಿನ ಬಳಿಕ ಭಾರತದಲ್ಲಿ ಆರ್ಥಿಕತೆ ಹೊಸ ಹಾದಿ ತುಳಿಯಿತು. ಆಗ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕತೆಯನ್ನು ಜಾಗತೀಕರಣಕ್ಕೆ ತೆರೆದಿದ್ದರು. ಲೈಸೆನ್ಸ್ ರಾಜ್ ವ್ಯವಸ್ಥೆಯನ್ನು ಕಸದ ಬುಟ್ಟಿಗೆ ಹಾಕಿದ್ದರು. ಅವರ ತಂಡದಲ್ಲಿ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರಂಥ ನುರಿತ ಹಣಕಾಸು ತಜ್ಞರಿದ್ದರು. ಇವರ ಸುಧಾರಣಾ ಕ್ರಮಗಳು ಮುಂದೆ ನೀತಿ ರೂಪಿಸುವವರಿಗೆ ದಾರಿದೀಪವೇ ಆದವು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಲೀ ನೀತಿ ರೂಪಿಸುವುದೇ ಆಗಲಿ ಅದು ಒಂದು ರಾಜಕೀಯ ಪ್ರಕ್ರಿಯೆಯೇ ಆಗಿರುತ್ತದೆ. ಸಂಸತ್​ನೊಳಗೆ ಮತ್ತು ಹೊರಗೆ ನಡೆಯುವ ರಾಜಕೀಯ ಚರ್ಚೆಯು ಈ ಪ್ರಜಾತಂತ್ರದ ಆಯಾಮವೇ ಆಗಿದೆ. ವಿಸ್ತೃತ ಸಮಾಲೋಚನೆಗಳು ಹೆಚ್ಚು ಸಾಧ್ಯತೆಗಳನ್ನ ಪೋಷಿಸುತ್ತವೆ. ಹಾಗೆಯೇ, ಉಭಯ ರಾಜಕೀಯ ಪಕ್ಷಗಳು, ಅಂದರೆ ಆಡಳಿತ ಮತ್ತು ವಿಪಕ್ಷಗಳು ಸುಧಾರಣಾ ಕ್ರಮಗಳ ವಿಚಾರದಲ್ಲಿ ಒಂದು ಸಮ್ಮತಕ್ಕೆ ಬರುವುದು ಬಹಳ ಮುಖ್ಯ. ಆ ಸುಧಾರಣೆ ನಿರೀಕ್ಷಿತ ಫಲಿತಾಂಶ ನೀಡಲು ಇದರಿಂದ ಸಾಧ್ಯವಾಗುತ್ತದೆ.

ಇದನ್ನೂ ಓದಿ: ಕೃಷಿ ಕಾಯ್ದೆಗಳಿಂದ ಹೊಸ ಮಾರುಕಟ್ಟೆ ಸೃಷ್ಟಿ; ರೈತರಿಗೆ ಅನುಕೂಲ: ಪ್ರಧಾನಿ ಮೋದಿಉದಾಹರಣೆಗೆ, 2012ರಲ್ಲಿ ಯುಪಿಎ ಸರ್ಕಾರ ಆರ್ಥಿಕತೆಗೆ ಪುಷ್ಟಿ ನೀಡಲು ಡೀಸೆಲ್ ದರಗಳನ್ನ ಹೆಚ್ಚಿಸಿತು. ಇದರಿಂದ ದೇಶವ್ಯಾಪಿ ಪ್ರತಿಭಟನೆಗಳು ನಡೆದವು. ಆದರೆ, ಆರ್ಥಿಕತೆ ದೃಷ್ಟಿಯಿಂದ ಬೆಲೆ ಹೆಚ್ಚಳವಾದ ಸತ್ಯ ಅರಿವಾಗುತ್ತಲೇ ಈ ಆಕ್ರೋಶ, ಪ್ರತಿಭಟನೆಗಳು ಬೇಗ ನಿಂತುಹೋದವು.

1991ರಲ್ಲಿ ಸುಧಾರಣೆಗಳನ್ನ ತಂದ ಹರಿಕಾರರ ತಂಡವೇ ಈಗ ಕೃಷಿ ಕ್ಷೇತ್ರದ ಸುಧಾರಣೆಗಳಿಗೆ ಅಡ್ಡಿಪಡಿಸುತ್ತಿರುವುದು ಸೋಜಿಗವೇ ಸರಿ. ಭಾರತದಲ್ಲಿ ರಾಜಕೀಯ ಪಕ್ಷಗಳ ಮಧ್ಯೆ ತಾಳಮೇಳ ಇಲ್ಲದ ಕಾರಣ ಅನೇಕ ಸುಧಾರಣಾ ಕ್ರಮಗಳು ನಿರಂತರ ಚರ್ಚೆಯ ಹಂತದಲ್ಲೇ ಕಣ್ಮರೆಯಾಗುತ್ತಿವೆ. ಒಂದು ವಿಚಾರವನ್ನು ಇಲ್ಲಿ ಉಲ್ಲೇಖಿಸಬೇಕು. ಕ್ರಿಕೆಟ್ ಆಟದಲ್ಲಿ ಬ್ಯಾಟಿಂಗ್ ಮಾಡುವಾಗ ಟೈಮಿಂಗ್ ಪದ ಕೇಳಿರುತ್ತವೆ. ಅದೇ ರೀತಿ ಆರ್ಥಿಕ ಸುಧಾರಣೆ ಹಾಗೂ ನೀತಿ ಕೂಡ ನಿರೀಕ್ಷಿತ ಫಲ ಕೊಡಬೇಕಾದರೆ ಟೈಮಿಂಗ್ ಸರಿ ಇರಬೇಕು. ತ್ವರಿತ ನಿರ್ಧಾರ ಮತ್ತು ಶೀಘ್ರ ಅನುಷ್ಠಾನದಿಂದ ಭಾರತೀಯ ಆರ್ಥಿಕತೆಗೆ ಪುಷ್ಟಿ ನೀಡಬಹುದು. ಈ ಸುಧಾರಣೆಗಳು ರಾಜಕೀಯ ಭೇದವಿಲ್ಲದೆ ಸರ್ವಸಮ್ಮತವಾಗಿರಬೇಕು. ಆಗ ಪಾಸಿಟಿವ್ ಬದಲಾವಣೆ ಸಾಧ್ಯ.

- Gaurav Choudhury, First Post
Published by: Vijayasarthy SN
First published: December 13, 2020, 12:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories