Lakhimpur Kheri Violence| ಸರ್ವಾಧಿಕಾರಿ ಸರ್ಕಾರ ಮಾತ್ರ ಹೀಗೆ ವರ್ತಿಸಲು ಸಾಧ್ಯ; ಯೋಗಿ ವಿರುದ್ದ ರಾಜಸ್ತಾನ ಸಿಎಂ ಗೆಹ್ಲೋಟ್​ ಕಿಡಿ

ಸರ್ವಾಧಿಕಾರಿ ಸರ್ಕಾರ ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ. ಉತ್ತರ ಪ್ರದೇಶ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತಿದೆಯೇ? ಈ ರೀತಿಯಾದ ನಾಗರಿಕ ಹಕ್ಕುಗಳ ಉಲ್ಲಂಘನೆ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಅಶೋಕ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.

ಅಶೋಕ್ ಗೆಹ್ಲೋಟ್.

ಅಶೋಕ್ ಗೆಹ್ಲೋಟ್.

 • Share this:
  ಜೈಪುರ (ಅಕ್ಟೋಬರ್​ 04); ಭಾನುವಾರ ಉತ್ತರಪ್ರದೇಶದ (Uttara Pradesh) ಲಖೀಮ್​ಪುರ್​ (Lakhimpur Kheri Violence) ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಜನ ರೈತರು, ಓರ್ವ ಪತ್ರಕರ್ತ ಸೇರಿದಂತೆ ಒಟ್ಟು 9 ಜನ ಮೃತಪಟ್ಟಿದ್ದಾರೆ. ಹೀಗಾಗಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಾಗಿ ಕಾಂಗ್ರೆಸ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಇಂದು ಮುಂಜಾನೆ ಲಖೀಮ್​ಪುರ್​ಗೆ ಆಗಮಿಸಿದ್ದರು. ಆದರೆ, ಪೊಲೀಸರು ವಾರೆಂಟ್​ ನೀಡದೆ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರದ ಈ ನಡೆ ಸಾಮಾನ್ಯವಾಗಿ ಕಾಂಗ್ರೆಸ್​ ನಾಯಕರ ಕಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಕಿಡಿಕಾರಿರುವ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೋಟ್​, "ವಿರೋಧ ಪಕ್ಷದ ನಾಯಕರನ್ನು ಕಾನೂನುಬಾಹಿರವಾಗಿ ಬಂಧಿಸುವುದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ. ಹಿಟ್ಲರ್​ನಂತಹ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಇಂತಹ ಕೆಲಸಗಳು ನಡೆಯಲು ಸಾಧ್ಯ" ಎಂದು ಆಕ್ರೋಶ ಹೊರಹಾಕಿದ್ದಾರೆ.

  ಇದಲ್ಲದೆ, ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ಮತ್ತು ಪಂಜಾಬ್‌ ಉಪ ಮುಖ್ಯಮಂತ್ರಿ ಎಸ್. ಎಸ್. ರಾಂಧವಾ ಅವರನ್ನು ಸಹ ಉತ್ತರಪ್ರದೇಶ ಪ್ರವೇಶಿಸದಂತೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತಡೆ ಹೇರಿದೆ. ಅಶೋಕ್ ಗೆಹ್ಲೋಟ್ ಇದನ್ನೂ ಸಹ ವಿರೋಧಿಸಿದ್ದಾರೆ.  ಯೋಗಿ ಆದಿತ್ಯನಾಥ್ ಸರ್ಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ ಹೊರಹಾಕಿರುವ ಅಶೋಕ್ ಗೆಹ್ಲೋಟ್, "ಸರ್ವಾಧಿಕಾರಿ ಸರ್ಕಾರ ಮಾತ್ರ ಇಂತಹ ಕೆಲಸಗಳನ್ನು ಮಾಡಲು ಸಾಧ್ಯ. ಉತ್ತರ ಪ್ರದೇಶ ಆಡಳಿತಾರೂಢ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊನೆಗೊಳಿಸಲು ಬಯಸುತ್ತಿದೆಯೇ? ಈ ರೀತಿಯಾದ ನಾಗರಿಕ ಹಕ್ಕುಗಳ ಉಲ್ಲಂಘನೆ ಸಂವಿಧಾನದ ಮನೋಭಾವಕ್ಕೆ ವಿರುದ್ಧವಾಗಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  "ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತ್ತು ಇತರ ನಾಯಕರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿರುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ದೇಶದ ಪ್ರಮುಖ ವಿರೋಧ ಪಕ್ಷದ ನಾಯಕಿಯಾಗಿದ್ದು, ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಿನ್ನೆ ಹತ್ಯೆಗೀಡಾದ ರೈತರ ಕುಟುಂಬಗಳನ್ನು ಭೇಟಿ ಮಾಡಲು ಹೋಗುತ್ತಿದ್ದರು…ವಿರೋಧ ಪಕ್ಷಗಳ ನಾಯಕರನ್ನು ಕಾನೂನುಬಾಹಿರವಾಗಿ ಬಂಧಿಸುವುದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ವಿರುದ್ಧವಾಗಿದೆ" ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

  ಪ್ರಿಯಾಂಕಾ ಗಾಂಧಿಯವರ ಬೆಂಗಾವಲನ್ನು ಲಖನೌದಲ್ಲಿ ಉತ್ತರ ಪ್ರದೇಶದ ಪೊಲೀಸರು ತಡೆದಿದ್ದರು. "ನಿನ್ನೆ ಹಿಂಸಾಚಾರದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಪ್ರಿಯಾಂಕಾ ಅವರು ನಿಲ್ಲಲಿದ್ದಾರೆ. ಕರ್ತವ್ಯ ನಿರ್ವಹಿಸುವುದಕ್ಕಾಗಿ ಅವರನ್ನು ತಡೆದಿರುವುದು ಅನ್ಯಾಯ" ಎಂದು ಗೆಹ್ಲೋಟ್ ಹೇಳಿದ್ದಾರೆ.

  ಇದನ್ನೂ ಓದಿ: Lakhimpur Kheri Violence| ನಿನ್ನೆ ಕಾಣೆಯಾಗಿದ್ದ ಪತ್ರಕರ್ತ ಇಂದು ಸಾವು, 9ಕ್ಕೇರಿದ ಸಾವಿನ ಸಂಖ್ಯೆ, ಅಖಿಲೇಶ್ ಯಾದವ್ ಧರಣಿ!

  ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಅಲ್ಲದೆ, ಇನ್ನೂ ಇತರ 13 ಜನರ ವಿರುದ್ಧ ಎಫ್‌ಐಆರ್‌‌ ದಾಖಲಿಸಲಾಗಿದೆ. ಹತ್ಯೆಗೀಡಾದ ಎಂಟು ಜನರಲ್ಲಿ ನಾಲ್ಕು ರೈತರಾಗಿದ್ದು, ನಂತರ ಉಂಟಾದ ಗಲಭೆಯಲ್ಲಿ ನಾಲ್ಕು ಜನರು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಅವರು ಬೆಂಗಾವಲಿನಲ್ಲಿ ಸಚಿವರನ್ನು ಸ್ವಾಗತಿಸಲು ಬಂದಿದ್ದರು ಎಂದು ತಿಳಿದುಬಂದಿದೆ. ಓರ್ವ 1 ಪ್ರತಕರ್ತನೂ ಮೃತಪಟ್ಟಿದ್ದು ಕಾರಣ ಇನ್ನೂ ತಿಳಿದುಬಂದಿಲ್ಲ.
  Published by:MAshok Kumar
  First published: