ಈಗಂತೂ ಈ ಸಾಮಾಜಿಕ ಮಾಧ್ಯಮಗಳು (Social Media) ಮತ್ತು ಆನ್ಲೈನ್ (Online) ನಲ್ಲಿರುವ ಅನೇಕ ರೀತಿಯ ಆಟಗಳಿಂದ ಜನರಿಗೆ ಎಷ್ಟು ಮನೋರಂಜನೆ ಸಿಗುತ್ತಿದಿಯೋ, ಅಷ್ಟೇ ಎಡವಟ್ಟುಗಳು ಸಹ ನಡೆಯುತ್ತಿವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈ ಹೈಸ್ಕೂಲ್ ಮತ್ತು ಕಾಲೇಜು ಓದುವ ಕೆಲವು ಹುಡುಗ ಮತ್ತು ಹುಡುಗಿಯರು ಯಾವಾಗ ನೋಡಿದರೂ ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಆನ್ಲೈನ್ ನಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಬ್ರೌಸ್ (Browse) ಮಾಡುತ್ತಾ ಅಥವಾ ಅನೇಕ ರೀತಿಯ ಆಟಗಳನ್ನು ಆಡುತ್ತಾ ಕುಳಿತು ಗಂಟೆಗಟ್ಟಲೆ ಸಮಯವನ್ನು ಹಾಗೆಯೇ ವ್ಯರ್ಥ ಮಾಡುವುದನ್ನು ನಾವೆಲ್ಲಾ ನೋಡುತ್ತಿರುತ್ತೇವೆ ಅಂತ ಹೇಳಬಹುದು.
ಅದರಲ್ಲೂ ಕೆಲವು ಆನ್ಲೈನ್ ಗೇಮ್ ಗಳಲ್ಲಿ ನಾವು ನೋಡಿರುವ ಪ್ರಕಾರ ಯಾವ ದೇಶದ ಜನರು ಬೇರೆ ಯಾವ ದೇಶದವರ ಜೊತೆಗಾದರೂ ಈ ಗೇಮ್ ಗಳನ್ನು ಆನ್ಲೈನ್ ನಲ್ಲಿ ಆಡಬಹುದಾಗಿದೆ. ಹೀಗಾಗಿ ಬೇರೆ ದೇಶದ ಜನರ ಜೊತೆಗೆ ಪರಿಚಯವಾಗುವುದು ಸಹಜ ಮತ್ತು ಕೆಲವು ಪರಿಚಯಗಳು ಸ್ನೇಹಕ್ಕೆ ತಿರುಗಿ ನಂತರ ಅದು ಪ್ರೇಮವಾಗಿ ಬೆಳೆಯುವ ಸಾಧ್ಯತೆಗಳು ಸಹ ಇರುತ್ತವೆ. ಇಲ್ಲಿಯೂ ಸಹ ಇಂತಹದೇ ಒಂದು ಘಟನೆ ನಡೆದಿದೆ ನೋಡಿ.
ಆನ್ಲೈನ್ ನಲ್ಲಿ ಲುಡೋ ಆಡುತ್ತಾ ಬೆಳೆದಿದೆ ಪ್ರೀತಿ
ಭಾರತದ ಹುಡುಗ ಮತ್ತು ಪಾಕಿಸ್ತಾನದ ಹುಡುಗಿ ಇಬ್ಬರು ಆನ್ಲೈನ್ ನಲ್ಲಿ ಲುಡೋ ಎಂಬ ಆಟವನ್ನು ಆಡುತ್ತಿದ್ದಾಗ ಭಾರತೀಯ ಹುಡುಗ ಮುಲಾಯಂ ಸಿಂಗ್ ಅವರನ್ನು ಪ್ರೀತಿಸಿದ್ದಾರೆ, ನಂತರ ಅವರನ್ನು ಮದುವೆಯಾಗಲು ಕಠ್ಮಂಡು ಮೂಲಕ ಭಾರತಕ್ಕೆ ಬಂದ ಪಾಕ್ ಹುಡುಗಿ ಬೆಂಗಳೂರಿನಲ್ಲಿ ಅಕ್ರಮವಾಗಿ ಉಳಿಯಲು ಶುರು ಮಾಡಿದ್ದರು. 19 ವರ್ಷ ವಯಸ್ಸಿನ ಪಾಕಿಸ್ತಾನಿ ಹುಡುಗಿ ಇಕ್ರಾ ಜೀವಾನಿಯನ್ನು ಈಗ ಪೊಲೀಸರು ವಶಕ್ಕೆ ತೆಗೆದುಕೊಂಡು ಭಾನುವಾರ ಅಟ್ಟಾರಿ ಭೂ ಗಡಿಯಿಂದ ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಿದ್ದಾರೆ.
ಮೂಲಗಳ ಪ್ರಕಾರ, ಆನ್ಲೈನ್ ಅಪ್ಲಿಕೇಶನ್ ನಲ್ಲಿ ಲುಡೋ ಆಡುತ್ತಿದ್ದಾಗ, ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಉತ್ತರ ಪ್ರದೇಶದ ನಿವಾಸಿ 26 ವರ್ಷದ ಮುಲಾಯಂ ಸಿಂಗ್ ಅವರೊಂದಿಗೆ ಇಕ್ರಾ ಪ್ರೀತಿಯಲ್ಲಿ ಬಿದ್ದಿದ್ದಾಳೆ.
ವೀಸಾ ಪಡೆಯಲು ಸಮಸ್ಯೆ ಇದ್ದುದ್ದರಿಂದ ಎಂತಹ ಪ್ಲ್ಯಾನ್ ಮಾಡಿದ್ರು ನೋಡಿ ಈ ಪ್ರೇಮಿಗಳು
ಭಾರತಕ್ಕೆ ಬಂದು ಮುಲಾಯಂ ಅವರನ್ನು ಭೇಟಿ ಮಾಡಲು "ವೀಸಾ ಪಡೆಯುವಲ್ಲಿ ಇಕ್ರಾಗೆ ಸಮಸ್ಯೆ ಇತ್ತು, ಆದ್ದರಿಂದ ಮುಲಾಯಂ ಅವರು ಮೊದಲು ನೇಪಾಳಕ್ಕೆ ಹೋಗಿ ನಂತರ ಸನೋಲಿ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವಂತೆ ಆಕೆಗೆ ಸಲಹೆ ನೀಡಿದ್ದರು" ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಾಲದ ಜೊತೆ ಹುಟ್ಟಿದ ಮಗು! ವೈದ್ಯಲೋಕಕ್ಕೇ ಚಾಲೆಂಜ್ ನೀಡಿದ ಆಪರೇಷನ್
ಸೆಪ್ಟಂಬರ್ 19ರಂದು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಕ್ರಾ ಅವರನ್ನು ಮುಲಾಯಂ ಪ್ರೀತಿಯಿಂದ ಬರಮಾಡಿಕೊಂಡರಂತೆ. ನಂತರ ಈ ಇಬ್ಬರೂ ಆನ್ಲೈನ್ ಪ್ರೇಮಿಗಳು ಕಠ್ಮಂಡುವಿನಲ್ಲಿ ವಿವಾಹವಾದರು ಮತ್ತು ಸನೋಲಿ ಇಂಡೋ-ಪಾಕ್ ಗಡಿಯ ಮೂಲಕ ಭಾರತವನ್ನು ಪ್ರವೇಶಿಸುವ ಮೊದಲು ಸುಮಾರು ಒಂದು ವಾರ ಅಲ್ಲಿಯೇ ಇದ್ದರಂತೆ. ನಂತರ ಅವರಿಬ್ಬರು ಬೆಂಗಳೂರಿಗೆ ಬಂದು ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ವಾಸಿಸಲು ಶುರು ಮಾಡಿದರು. ಅಲ್ಲಿ ಇಕ್ರಾ ಯಾರಿಗೂ ತಾನು ಪಾಕಿಸ್ತಾನದಿಂದ ಬಂದವಳು ಅಂತ ಗೊತ್ತಾಗಬಾರದು ಅಂತ ಆಕೆಯ ಹೆಸರನ್ನು ರಾವಾ ಎಂದು ಹಿಂದೂ ಹೆಸರಿನಂತೆ ಬದಲಾಯಿಸಿಕೊಂಡಳು.
ನಮಾಜ್ ಮಾಡುತ್ತಿರುವುದನ್ನು ನೋಡಿ ಪೊಲೀಸರಿಗೆ ಸುದ್ದಿ ತಿಳಿಸಿದ ನೆರೆಹೊರೆಯವರು
ಮುಲಾಯಂ ಅವರ ಮನೆಯಲ್ಲಿರುವ ಹಿಂದೂ ಯುವತಿಯೊಬ್ಬಳು ನಮಾಜ್ ಮಾಡುತ್ತಿರುವುದನ್ನು ನೋಡಿದ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಪೊಲೀಸರು ಮುಲಾಯಂ ಅವರ ಮನೆಯ ಮೇಲೆ ದಾಳಿ ನಡೆಸಿ ಇಕ್ರಾ ಮತ್ತು ಆಕೆಯ ಪಾಕಿಸ್ತಾನಿ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇಕ್ರಾನನ್ನು ಬೆಂಗಳೂರು ಪೊಲೀಸರು ಬಂಧಿಸಿ ಅಟ್ಟಾರಿ ಭೂ ಗಡಿಯ ಮೂಲಕ ಪಾಕಿಸ್ತಾನಕ್ಕೆ ಹಿಂತಿರುಗಿಸಲು ಅಮೃತಸರಕ್ಕೆ ಕರೆ ತಂದರು ಎಂದು ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ