ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಸೋನಿಯಾ ರಣತಂತ್ರ: 20 ವಿಪಕ್ಷಗಳ ಮುಖಂಡರಿಗೆ ಔತಣಕೂಟ


Updated:March 13, 2018, 11:07 PM IST
ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಸೋನಿಯಾ ರಣತಂತ್ರ: 20 ವಿಪಕ್ಷಗಳ ಮುಖಂಡರಿಗೆ ಔತಣಕೂಟ

Updated: March 13, 2018, 11:07 PM IST
-ನ್ಯೂಸ್ 18

ನವದೆಹಲಿ(ಮಾ.13): ರಾಹುಲ್ ಗಾಂಧಿಗೆ ಪಕ್ಷದ ನಾಯಕತ್ವ ವಹಿಸಿದ ಬಳಿಕ ಬಹುತೇಕ ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದಿದ್ದ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ 2019ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿಯೇತರ ಪಕ್ಷಗಳನ್ನ ಒಂದುಗೂಡಿಸಲು ಮುಂದಾಗಿದ್ದಾರೆ.

ನವದೆಹಲಿಯ ತಮ್ಮ ನಿವಾಸ 10 ಜನಪಥ್​ನಲ್ಲಿ ವಿಪಕ್ಷಗಳ ಮುಖಂಡರಿಗೆ ರಾತ್ರಿ ಭೋಜನಕೂಟ ಏರ್ಪಡಿಸಿದ್ದರು. ಔಪಚಾರಿಕ ಭೋಜನಕೂಟದಲ್ಲಿ ಡಿಎಂಕೆ, ಜೆಡಿಎಸ್, ಸಿಪಿಎಂ, ಸಿಪಿಐ, ಎನ್​ಸಿಪಿ, ಬಿಎಸ್​ಪಿ, ಆರ್​ಜೆಡಿ, ಆರ್​ಎಲ್​ಡಿ ಸೇರಿದಂತೆ 20ಕ್ಕೂ ಹೆಚ್ಚು ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಜೆಡಿಎಸ್​ನಿಂದ ಸಂಸದರಾದ ಪುಟ್ಟರಾಜು, ಕುಪೇಂದ್ರ ರೆಡ್ಡಿ ಭಾಗಿಯಾಗಿದ್ದರು.

ಲೋಕಸಭಾ ಚುನಾವಣೆಯಲ್ಲಿ ಎನ್​ಡಿಎ ಮಣಿಸಲು ಪ್ರಬಲ ಮೈತ್ರಿಕೂಟ ರಚಿಸುವುದು ಈ ಸಭೆಯ ಪ್ರಮುಖ ಉದ್ದೇಶ ಎನ್ನಲಾಗಿದೆ. ಸೋನಿಯಾ ಗಾಂಧಿ ಕರೆದಿದ್ದ ಕಾರಣಕ್ಕೆ ಈ ಸಭೆ ಮತ್ತಷ್ಟು ಮಹತ್ವ ಪಡೆದುಕೊಂಡಿತ್ತು. ಸಭೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ ರೂಪಿಸುವ ಕುರಿತು ಚರ್ಚೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸಂಸತ್ತಿನ ಒಳಗೂ-ಹೊರಗೂ ಬಿಜೆಪಿ ವಿರುದ್ಧ ಹೋರಾಟದ ರೂಪುರೇಷೆ, ಪ್ರಮುಖ ಸಂದರ್ಭಗಳಲ್ಲಿ ಒಗ್ಗಟ್ಟಿನ ಹೋರಾಟ ನಡೆಸುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ.

ಸಭೆಯಲ್ಲಿ ದೇಶದ ದೊಡ್ಡ ಪ್ರಾದೇಶಿಕ ಪಕ್ಷಗಳಲ್ಲೊಂದಾದ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ಸತೀಶ್ ಮಿಶ್ರಾ ಭಾಗವಹಿಸಿದ್ದು ಸಭೆಯ ಗಮನಾರ್ಹ ಅಂಶಗಳಲ್ಲೊಂದಾಗಿದೆ. ಡಿಎಂಕೆಯಿಂದ ಕನಿಮೋಳಿ, ಎನ್​ಸಿಪಿಯ ಶರತ್ ಪವಾರ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಆರ್​ಎಲ್​ಡಿಯ ಅಜಿತ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರು.

ಕಾಂಗ್ರೆಸ್ನಿಂದ ಲೋಕಸಭೆಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅಹ್ಮದ್ ಪಟೇಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಗುಲಾಮ್ ನಬಿ ಆಜಾದ್, ಎ.ಕೆ. ಆಂಟೋನಿ, ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸಿದ್ದರು.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ