• Home
 • »
 • News
 • »
 • national-international
 • »
 • ನಾಳೆ ಬಿಜೆಪಿ ಸೇರಬೇಕಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇಂದೇ ಬಿಜೆಪಿಗೆ ಸೇರ್ಪಡೆ

ನಾಳೆ ಬಿಜೆಪಿ ಸೇರಬೇಕಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇಂದೇ ಬಿಜೆಪಿಗೆ ಸೇರ್ಪಡೆ

ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜ್ಯೋತಿರಾಧಿತ್ಯ ಸಿಂಧಿಯಾ

ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜ್ಯೋತಿರಾಧಿತ್ಯ ಸಿಂಧಿಯಾ

ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡ ಮತ್ತು ರಾಹುಲ್ ಗಾಂಧಿಯವರ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ನಿನ್ನೆಯೇ ಕಾಂಗ್ರೆಸ್ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದರ ಪರಿಣಾಮ ಕಮಲ್​ನಾಥ್​ ನೇತೃತ್ವದ ಕಾಂಗ್ರೆಸ್​ ಸರ್ಕಾರ ಅಳಿವು ಉಳಿವಿನ ನಡುವೆ ತೂಗುತ್ತಿದೆ.

 • Share this:

  ಬೆಂಗಳೂರು: ಕಾಂಗ್ರೆಸ್ ತೊರೆದಿರುವ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ರಾಹುಲ್ ಗಾಂಧಿ ಆಪ್ತ ಜ್ಯೋತಿರಾದಿತ್ಯ ಸಿಂಧಿಯಾ ಸಧ್ಯದಲ್ಲಿಯೇ ಬಿಜೆಪಿ ಸೇರಲಿದ್ದಾರೆ ಎಂಬುದು ಅವರ ರಾಜೀನಾಮೆ ಬೆನ್ನಲ್ಲೇ ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಇದೇ ಗುರುವಾರ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಅವರು ಕಮಲದ ಕೈ ಹಿಡಿಯಲಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ನಡೆದ ಬಿರುಸಿನ ಬೆಳವಣಿಗೆಯಲ್ಲಿ ಸಿಂಧಿಯಾ ಇಂದೇ, ಅಂದರೆ ಬುಧವಾರ ಮಧ್ಯಾಹ್ನದ ನಂತರ ಬಿಜೆಪಿ ಸೇರುತ್ತಿದ್ದಾರೆ.


  ಕಾಂಗ್ರೆಸ್ ತೊರೆದಿರುವ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಗೊಳ್ಳುವುದು ಖಚಿತವಾಗಿದೆ. ಮಂಗಳವಾರ ಬೆಳಗ್ಗೆಯೇ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ಸಿಂಧಿಯಾ ಕಾಂಗ್ರೆಸ್ ತೊರೆಯುವ ಕುರಿತು ಮಾತುಕತೆಯನ್ನು ನಡೆಸಿದ್ದರು. ಹಾಗೆಯೇ ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


  ರಾಹುಲ್ ಗಾಂಧಿ ಆಪ್ತರಾಗಿದ್ದ ಸಿಂಧಿಯಾ ಮದ್ಯಪ್ರದೇಶ ಕಾಂಗ್ರೆಸ್​ನಲ್ಲಿ ತಮ್ಮನ್ನು ಮೂಲೆ ಗುಂಪು ಮಾಡಿದ್ದಾರೆ ಎಂದು ಆರೋಪಿಸಿದ್ದರು. ಕಾಂಗ್ರೆಸ್​ಗೆ ಸಿಂಧಿಯಾ ರಾಜೀನಾಮೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ 22 ಕಾಂಗ್ರೆಸ್ ಶಾಸಕರು ಸಹ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಮಧ್ಯಪ್ರದೆಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಪರೇಷನ್ ಕಮಲಕ್ಕೆ ಬಲಿಯಾಗುವ ಸಾದ್ಯತೆ ದಟ್ಟವಾಗಿದೆ. ಎರಡು ದಿನಗಳಿಂದ ನಡೆಯುತ್ತಿರುವ ಹಠಾತ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸರ್ಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.


  ರಾಜೀನಾಮೆ ಪತ್ರದಲ್ಲಿ ಬೇಸರ ಹೊರಹಾಕಿದ್ದ ಸಿಂಧಿಯಾ:


  ಮೋದಿ - ಶಾ ಭೇಟಿಯ ನಂತರ ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದ ಸಿಂಧಿಯಾ ಪಕ್ಷದ ವಿರುದ್ಧ ಬೇಸರ ಹೊರಹಾಕಿದ್ದರು.


  ಪತ್ರದಲ್ಲಿ ಸಿಂಧಿಯಾ, "18 ವರ್ಷಗಳಿಂದ ಕಾಂಗ್ರೆಸ್​ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಇದು ಬದುಕಿನ ಬೇರೆ ಅಧ್ಯಾಯ ಆರಂಭಿಸುವ ಕಾಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಳೆದೊಂದು ವರ್ಷದಿಂದ ಈ ಸಮಯ ಬಂದೇಬರುತ್ತದೆ ಎಂಬುದು ತಮಗೂ ತಿಳಿದಿದೆ," ಎಂದು ಹೇಳಿದ್ದರು.


  ಇದನ್ನೂ ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮತ್ತೆ 5 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​


  ಮುಂದುವರೆದ ಅವರು "ನನ್ನ ರಾಜಕೀಯದ ಆರಂಭದ ದಿನಗಳಿಂದಲೂ ನನ್ನ ರಾಜ್ಯದ ಜನರಿಗೆ ಮತ್ತು ದೇಶದ ಜನರ ಸೇವೆ ಮಾಡಬೇಕು ಎಂಬುದೇ ನನ್ನ ಧ್ಯೇಯ. ಆದರೆ ಕಾಂಗ್ರೆಸ್​ ಪಕ್ಷದಲ್ಲಿದ್ದು ನನಗೆ ಜನರ ಸೇವೆ ಮಾಡಲು ಸಾಧ್ಯವಾಗುತ್ತಿಲ್ಲ," ಎಂದಿದ್ದರು.


  ಇದನ್ನೂ ಓದಿ: ಲೋಕಸಭೆಯಲ್ಲಿ ಇಂದು ದೆಹಲಿ ಹಿಂಸಾಚಾರದ ಚರ್ಚೆ; ವಿಪಕ್ಷಗಳ ಟೀಕೆಗೆ ಉತ್ತರಿಸ್ತಾರಾ ಅಮಿತ್​ ಶಾ?


  "ಜನತೆ ಮತ್ತು ಕಾರ್ಯಕರ್ತರ ಆಶಯಗಳನ್ನು ಈಡೇರಿಸಲು ನಾನು ಹೊಸ ಆರಂಭವನ್ನು ಮಾಡಲೇಬೇಕಾದ ಅನಿವಾರ್ಯತೆಯಿದೆ. ಇಷ್ಟು ದಿನಗಳ ಕಾಲ ಜನರ ಸೇವೆಗೆ ತಾವು ಮತ್ತು ಪಕ್ಷದ ಎಲ್ಲಾ ನಾಯಕರು ಸಹಕರಿಸಿದ್ದಕ್ಕೆ ಭಾವಪೂರ್ಣ ಅಭಿನಂದನೆಗಳು," ಎನ್ನುವ ಮೂಲಕ ಸಿಂಧಿಯಾ ಕಾಂಗ್ರೆಸ್​ ವಿರುದ್ಧ ಬೇಸರ ಹೊರಹಾಕುವ ಮೂಲಕ ಅಧಿಕೃತವಾಗಿ ತೊರೆದಿದ್ದರು.


  ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಕುಸಿತ: ಪೆಟ್ರೋಲ್​ ರೂ. 2.69, ಡಿಸೇಲ್​ ರೂ. 2.33 ಇಳಿಕೆ


  ಇನ್ನು ಕೆಲವೇ ಕ್ಷಣಗಳಲ್ಲಿ ಸಿಂಧಿಯಾ ಬಿಜೆಪಿ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಇರುವ ಒಂದೇ ಕುತೂಹಲವೆಂದರೆ, ಕಾಂಗ್ರೆಸ್​ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಸಿಂಧಿಯಾಗೆ ಯಾವ ಸ್ಥಾನ ಸಿಗಲಿದೆ ಎಂಬುದು. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಮತ್ತು ಎರಡು ಬಾರಿ ಸಿಎಂ ಆಗಿರುವ ಶಿವರಾಜ್​ ಸಿಂಗ್​ ಚವ್ಹಾಣ್​ ಈಗಾಗಲೇ ಬಿಜೆಪಿಯ ಫೇವರೇಟ್​ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣಾ ರಾಜವಂಶಸ್ಥ ಸಿಂಧಿಯಾಗೆ ಉಪ ಮುಖ್ಯಮಂತ್ರಿ ಸ್ಥಾನವಾದರೂ ಸಿಗಲಿದೆ ಎನ್ನಲಾಗುತ್ತಿದೆ.


  (ವರದಿ: ಸಂಧ್ಯಾ ಎಂ)

  Published by:Sharath Sharma Kalagaru
  First published: