news18-kannada Updated:November 26, 2020, 10:04 PM IST
ನರೇಂದ್ರ ಮೋದಿ.
ನವ ದೆಹಲಿ (ನವೆಂಬರ್ 26); ದೇಶದಲ್ಲಿ ಪ್ರತಿವರ್ಷ ಯಾವುದಾದರೊಂದು ರಾಜ್ಯದ ವಿಧಾನಸಭೆ ಚುನಾವಣೆ ನಡೆಯುತ್ತಲೇ ಇರುತ್ತದೆ. ಚುನಾವಣೆಗೆಂದೆ ಭಾರತೀಯ ಚುನಾವಣಾ ಆಯೋಗವೂ ಪ್ರತಿ ವರ್ಷ ಅಪಾರ ಪ್ರಮಾಣದ ಹಣವನ್ನು ಖರ್ಚು ಮಾಡುತ್ತದೆ. ಹೀಗಾಗಿ ಚುನಾವಣೆಗೆ ಖರ್ಚಾಗುವ ಹಣವನ್ನು ಉಳಿಸುವ ಸಲುವಾಗಿ ಒಂದು ದೇಶ ಒಂದು ಚುನಾವಣೆ ಎಂಬ ವಾದ ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಹ ಆಗಿಂದಾಗ್ಗೆ ಈ ಬಗ್ಗೆ ಉಲ್ಲೇಖಿಸಿದ ಉದಾಹರಣೆಗಳಿವೆ. ಇದೀಗ ಮತ್ತೆ ಈ ಕುರಿತು ತಮ್ಮ ಮನದ ಇಂಗಿತವನ್ನು ಹೊರಹಾಕಿರುವ ಪ್ರಧಾನಿ ಮೋದಿ, "ದೇಶದಾದ್ಯಂತ ಪ್ರತಿ ತಿಂಗಳು ಚುನಾವಣೆಗಳು ನಡೆಯುತ್ತಿರುವುದರಿಂದ ಸಮಯ ಮತ್ತು ಹಣ ಎರಡು ವ್ಯರ್ಥವಾಗಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗುತ್ತಿದೆ. ಹಾಗಾಗಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಭಾರತಕ್ಕೆ ಅಗತ್ಯತೆ ಇದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
80ನೇ ಅಖಿಲ ಭಾರತ ಅಧ್ಯಕ್ಷರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 26/11 ಮುಂಬೈ ದಾಳಿಯ ಸಂತ್ರಸ್ತರಿಗೆ ಗೌರವ ಸಲ್ಲಿಸಿದರು. ಜೊತೆಗೆ ಹೊಸ ನೀತಿ ಮತ್ತು ಹೊಸ ಪ್ರಕ್ರಿಯೆಯೊಂದಿಗೆ ಭಾರತ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಒಂದು ದೇಶ ಒಂದು ಚುನಾವಣೆ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, "ದೇಶದಲ್ಲಿ ಪ್ರತಿ ಕೆಲವು ತಿಂಗಳಿಗೊಮ್ಮೆ ವಿವಿಧ ಸ್ಥಳಗಳಲ್ಲಿ ವಿವಿಧ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಇದು ಅಭಿವೃದ್ಧಿ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಆಳವಾದ ಅಧ್ಯಯನ ಮತ್ತು ಚರ್ಚೆ ನಡೆಸುವುದು ಅತ್ಯಗತ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.
"ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತ್ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿ ಮಾಡುವುದು ಉತ್ತಮ, ಪ್ರತ್ಯೇಕ ಮತದಾರರ ಪಟ್ಟಿಗಳಿಂದ ಸಂಪನ್ಮೂಲಗಳು ವ್ಯರ್ಥವಾಗುತ್ತಿದೆ" ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಕೋಮು ಗಲಭೆ ಹರಡಲು ಇದು ಗುಜರಾತ್ ಅಲ್ಲ, ನಾವು ಅದಕ್ಕೆ ಅವಕಾಶವನ್ನೂ ನೀಡೊಲ್ಲ; ಮಮತಾ ಬ್ಯಾನರ್ಜಿ
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಂದು ಸಹ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಚಿಂತನೆ ಬಗ್ಗೆ ತಮ್ಮ ಮನದ ಇಂಗಿತವನ್ನು ಹೊರಹಾಕಿದ್ದರು.
ಆದರೆ, ವಿರೋಧ ಪಕ್ಷಗಳು ಬಿಜೆಪಿ ಮತ್ತು ಪ್ರಧಾನಿ ಮೋದಿಯ ಈ ಚಿಂತನೆಯನ್ನು ಕಟುವಾಗಿ ವಿಮರ್ಶಿಸಿವೆ. ಈ ಕುರಿತು ತಮ್ಮ ತಕರಾರನ್ನು ಮುಂದಿಟ್ಟಿರುವ ಪ್ರತಿಪಕ್ಷಗಳು, "
ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಮಾರಕ, ಇದು ಪ್ರಜಾಪ್ರಭುತ್ವ ವಿರೋಧಿ ಚಿಂತನೆ. ಸಂವಿಧಾನದ ವಿರುದ್ಧ ಮತ್ತು ಅಪ್ರಾಯೋಗಿಕ ಎಂದು ವಾದಿಸಿವೆ. ಈ ಯೋಜನೆ ಮೂಲಕ ಸಂಸತ್ತಿನ ಪ್ರಜಾಪ್ರಭುತ್ವವನ್ನು ಬದಲಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ" ಎಂದು ಸಿಪಿಎಂ ಆರೋಪಿಸಿದೆ.
Published by:
MAshok Kumar
First published:
November 26, 2020, 10:03 PM IST