ಏಕಕಾಲಕ್ಕೆ ಚುನಾವಣೆ ಬದಲು ಒಂದು ವರ್ಷ ಒಂದು ಚುನಾವಣೆ ಸೂತ್ರ ಉತ್ತಮ: ಚುನಾವಣಾ ಆಯೋಗ ಸಲಹೆ


Updated:August 10, 2018, 7:37 PM IST
ಏಕಕಾಲಕ್ಕೆ ಚುನಾವಣೆ ಬದಲು ಒಂದು ವರ್ಷ ಒಂದು ಚುನಾವಣೆ ಸೂತ್ರ ಉತ್ತಮ: ಚುನಾವಣಾ ಆಯೋಗ ಸಲಹೆ
ಮುಖ್ಯ ಚುನಾವಣಾ ಆಯುಕ್ತ ಓ.ಪಿ. ರಾವತ್

Updated: August 10, 2018, 7:37 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 10): ಐದು ವರ್ಷದಲ್ಲಿ ಒಂದೇ ಬಾರಿಗೆ ಎಲ್ಲಾ ಚುನಾವಣೆ ನಡೆಯಬೇಕೆಂಬ ಅಭಿಪ್ರಾಯಗಳು ಇತ್ತೀಚೆಗೆ ಸಾಕಷ್ಟು ಕೇಳಿಬರುತ್ತಿವೆ. ಕೇಂದ್ರ ಸರಕಾರ ಕೂಡ ಈ ವಾದವನ್ನು ಒಪ್ಪಿಕೊಂಡಿದೆ. ಆದರೆ, ಚುನಾವಣಾ ಆಯೋಗ ಈ ಸಲಹೆಗಳನ್ನು ನಯವಾಗಿ ತಿರಸ್ಕರಿಸಿದ್ದು, ಒಮ್ಮೆಗೇ ಚುನಾವಣೆ ನಡೆಸುವ ಬದಲು ಒಂದು ವರ್ಷದಲ್ಲಿ ಒಂದು ಚುನಾವಣೆ ನಡೆಸುವ ಕ್ರಮ ಉತ್ತಮವಾಗಿರುತ್ತದೆ ಎಂದು ಹೇಳಿದೆ.

ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಮ್ಮೆಲೇ ಚುನಾವಣೆಗಳನ್ನ ಕೈಗೊಂಡರೆ ಹೆಚ್ಚು ಸಿಬ್ಬಂದಿ ಮತ್ತು ಭದ್ರತಾ ಪಡೆಗಳ ಅಗತ್ಯ ಬೀಳುತ್ತದೆ. ಹಾಗೂ ಕಾನೂನು ರೂಪುರೇಷೆ ರಚಿಸುವುದು ಕಷ್ಟವಾಗಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್ ಅಭಿಪ್ರಾಯಪಟ್ಟಿದ್ದಾರೆ.

“ಎತ್ತಿಗಿಂತ ಮುಂದೆ ಗಾಡಿ ಇರಲು ಸಾಧ್ಯವಿಲ್ಲ. ಹಾಗೆಯೇ ಚುನಾವಣೆಗೆ ಬೇಕಾದ ಸಾಧನಗಳ ವ್ಯವಸ್ಥೆಗಿಂತ ಕಾನೂನು ರೂಪುರೇಷೆ ರಚಿಸುವುದು ಹೆಚ್ಚು ಮುಖ್ಯವಾಗಿರುತ್ತದೆ. ಈ ಕಾನೂನು ಚೌಕಟ್ಟು ಸಿದ್ಧವಿಲ್ಲದಿದ್ದರೆ ಮಿಕ್ಕೆಲ್ಲವೂ ವ್ಯರ್ಥವಾಗುತ್ತದೆ. ಸಂವಿಧಾನದಲ್ಲಿ ತಿದ್ದುಪಡಿ ತರುವುದು ಸೇರಿದಂತೆ ಕಾನೂನು ರೂಪುರೇಷೆ ರಚನೆಗೆ ಸಾಕಷ್ಟು ಕಾಲ  ಹಿಡಿಯುತ್ತದೆ. ಹೀಗಾಗಿ, ಒಮ್ಮೆಗೇ ಚುನಾವಣೆ ನಡೆಸುವುದು ಸದ್ಯಕ್ಕೆ ಕಾರ್ಯಸಾಧುವಲ್ಲ,” ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.

ವಿವಿಪ್ಯಾಟ್ ವಿಚಾರದಲ್ಲಿ ಸುಳ್ಳುಗಳನ್ನು ನಂಬಬೇಡಿ:

ವೋಟಿಂಗ್ ಮೆಷೀನ್ ಹಾಗೂ ವಿವಿಪ್ಯಾಟ್ ಮೆಷೀನ್​ಗಳನ್ನು ಹ್ಯಾಕ್ ಮಾಡಬಹುದೆಂಬ ವಾದವನ್ನು ರಾವತ್ ಇದೇ ವೇಳೆ ತಳ್ಳಿಹಾಕಿದ್ದಾರೆ. ವಿವಿಪ್ಯಾಟ್​ಗಳು ಬಹಳ ಸುರಕ್ಷಿತವಾಗಿವೆ. ವಿವಿಪ್ಯಾಟ್​ಗಳಿಂದಾಗಿ ಇವಿಎಂ ಮೆಷೀನ್​​ಗಳ ಮೇಲಿನ ಅಪನಂಬಿಕೆ ದೂರವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ಧಾರೆ.

ಇದೇ ವೇಳೆ, ವಿವಿಪ್ಯಾಟ್​ಗಳಲ್ಲಿ ಕ್ಯಾಮೆರಾ ಇದ್ದು ಮತ ಚಲಾಯಿಸುವವರ ಫೋಟೋ ಕ್ಲಿಕ್ಕಿಸುತ್ತದೆ ಎಂದು ಹರಿದಾಡುತ್ತಿರುವ ಸುದ್ದಿಯನ್ನೂ ರಾವತ್ ಬಲವಾಗಿ ನಿರಾಕರಿಸಿದ್ದಾರೆ. ಮತದಾರನ ಕೈಗೆ ದುಡ್ಡು ಕೊಡುವ ರಾಜಕೀಯ ಜನರು ಇಂತಹ ಸುಳ್ಳುಗಳನ್ನು ಹೇಳಿ ಹೆದರಿಸಿ ವೋಟ್ ಹಾಕಲು ಕಳುಹಿಸಿರುತ್ತಾರೆ. ಇಂತಹ ಮಾತುಗಳನ್ನ ಯಾರೂ ನಂಬಬೇಡಿ. ವಿವಿಪ್ಯಾಟ್​ಗಳಿಂದ ಯಾವ ಫೋಟೋ ಕ್ಲಿಕ್ಕಾಗುವುದಿಲ್ಲ. ಮತದಾರನ ಗೌಪ್ಯತೆಯನ್ನು ಶತಾಯಗತಾಯ ಕಾಪಾಡಲಾಗುತ್ತದೆ ಎಂದು ಸಿಇಸಿ ಅವರು ಭರವಸೆ ನೀಡಿದ್ದಾರೆ.
Loading...

ಇನ್ನು, ರಾಷ್ಟ್ರಾದ್ಯಂತ ವಿವಾದಕ್ಕೆ ಕಾರಣವಾಗಿರುವ ರಾಷ್ಟ್ರೀಯ ನಾಗರಿಕರ ನೊಂದಣಿಯ ವಿಚಾರದಲ್ಲಿ ಹಬ್ಬಿರುವ ಸುಳ್ಳಿನ ಬಗ್ಗೆಯೂ ಸಿಇಸಿ ಸ್ಪಷ್ಟನೆ ನೀಡಿದ್ದಾರೆ. ಅಸ್ಸಾಮ್​ನ ಎನ್​ಆರ್​ಸಿ ಪಟ್ಟಿಯಲ್ಲಿಲ್ಲದ ಜನರಿಗೆ ವೋಟ್ ಹಾಕುವ ಹಕ್ಕು ಇರುವುದಿಲ್ಲ ಎಂಬುದು ಸುಳ್ಳು ಸುದ್ದಿ ಎಂದು ಓಂ ಪ್ರಕಾಶ್ ರಾವತ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಪೌರತ್ವ ಸಾಬೀತು ಮಾಡದ ಜನರಿಗೆ ಮತದಾನದಲ್ಲಿ ಪಾಲ್ಗೊಳ್ಳುವ ಹಕ್ಕು ಇಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

“40 ಲಕ್ಷ ಜನರು ಅಕ್ರಮವಾಗಿ ನಮ್ಮ ದೇಶದೊಳಗೆ ನುಸುಳಿದ್ದಾರೆ. ಅವರು ಈ ದೇಶದಲ್ಲಿರುವ ಯಾವ ಹಕ್ಕೂ ಹೊಂದಿಲ್ಲ. ಅವರು ಭಾರತದ ಪೌರತ್ವವನ್ನು ಸಾಬೀತುಪಡಿಸುವ ಎಲ್ಲಾ ಅವಕಾಶ ನೀಡುತ್ತೇವೆ. ಆದರೂ ಸಾಬೀತು ಮಾಡಲು ಸಾಧ್ಯವಾಗದ ಜನರಿಗೆ ಈ ದೇಶದ ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಕ್ಕಿರುವುದಿಲ್ಲ,” ಎಂದು ಅಮಿತ್ ಶಾ ಅವರು ನ್ಯೂಸ್18 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದರು.

ಅಸ್ಸಾಮ್​ನಲ್ಲಿ ನಡೆದಿರುವ ಪೌರತ್ವ ಗಣತಿ (ಎನ್​ಆರ್​ಸಿ)ಯ ವಿರುದ್ಧ ಹಲವು ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮಮತಾ ಬ್ಯಾನರ್ಜಿ ಅವರಂತೂ ಮೊದಲಿಂದಲೂ ಎನ್​ಆರ್​ಸಿ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ನಿನ್ನೆ ಹೆಚ್.ಡಿ. ದೇವೇಗೌಡರೂ ವಿಪಕ್ಷಗಳ ಆಕ್ಷೇಪಕ್ಕೆ ಧ್ವನಿಗೂಡಿಸಿದ್ದಾರೆ.
First published:August 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ