• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಸಂವಿಧಾನದ ದಿನದಂದೇ ರೈತರ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾಧನೀಯ; ಅಮರೀಂದರ್​ ಸಿಂಗ್

ಸಂವಿಧಾನದ ದಿನದಂದೇ ರೈತರ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾಧನೀಯ; ಅಮರೀಂದರ್​ ಸಿಂಗ್

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

ಕ್ಯಾಪ್ಟನ್​ ಅಮರೀಂದರ್​ ಸಿಂಗ್.

2020ರ ಸಂವಿಧಾನದ ದಿನದಂದು ರೈತರ ಸಾಂವಿಧಾನಿಕ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್​ ಸಿಂಗ್​ ವಿಷಾಧ ವ್ಯಕ್ತಪಡಿಸಿದ್ದಾರೆ.

 • Share this:

  ಪಂಜಾಬ್ (ನವೆಂಬರ್​ 26); ಸಂವಿಧಾನ ದಿನದಂದೇ ತಮ್ಮ ಹಕ್ಕುಗಳಿಗಾಗಿ ಪಂಜಾಬ್​ನಿಂದ ದೆಹಲಿಗೆ ಆಗಮಿಸಿದ್ದ ರೈತರನ್ನು ಗಡಿಯಲ್ಲಿಯೇ ತಡೆದು ನಿಲ್ಲಿಸಿರುವ ಕೇಂದ್ರ ಮತ್ತು ಹರಿಯಾಣದ ಬಿಜೆಪಿ ಸರ್ಕಾರದ ನಡೆಯನ್ನು ಸಂವಿಧಾನ ವಿರೋಧಿ ನಡೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ಇಂದು ದೇಶದಾದ್ಯಂತ ರೈತರು "ದೆಹಲಿ ಚಲೋ" ಹೋರಾಟಕ್ಕೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಪಂಜಾಬ್ ರೈತರು ಇಂದು ದೆಹಲಿಗೆ ಹೊರಟಿದ್ದಾರೆ. ಆದರೆ, ಅವರನ್ನು ಮಾರ್ಗ ಮಧ್ಯೆಯೇ ಹರಿಯಾಣದ ಬಿಜೆಪಿ ಸರ್ಕಾರ ಪೊಲೀಸರ ಬಲದಿಂದ ತಡೆದು ನಿಲ್ಲಿಸಿದೆ. ಇದನ್ನು ವಿರೋಧಿಸಿರುವ ಪಂಜಾಬ್ ಸಿಎಂ ಅಮರೀಂದರ್ ಸಿಂಗ್, "ಹೀಗೆ ವಿವೇಚನಾರಹಿತ ಶಕ್ತಿ ಬಳಸುವುದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕವಾಗಿದೆ" ಎಂದು ಆಕ್ರೋಶ ಹೊರಹಾಕಿದ್ದಾರೆ.  ಈ ಕುರಿತು ಸರಣಿ ಟ್ವೀಟ್​ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿರುವ ಪಂಜಾಬ್ ಸಿಎಂ ಅಮರೀಂದರ್​ ಸಿಂಗ್, "ರೈತರು ದೆಹಲಿಗೆ ತೆರಳುತ್ತಿರುವುದನ್ನು ಹರಿಯಾಣ ಸರ್ಕಾರ ಏಕೆ ತಡೆಯುತ್ತಿದೆ? ಶಾಂತಿಯುತವಾಗಿ ಪ್ರತಿಭಟಿಸುವ ರೈತರ ವಿರುದ್ಧ ಕ್ರೂರ ಬಲವನ್ನು ಬಳಸುವುದು ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕವಾಗಿದೆ. ಕೃಷಿ ಕಾನೂನುಗಳ ವಿರುದ್ಧ ಎರಡು ತಿಂಗಳಿನಿಂದ ರೈತರು ಪಂಜಾಬ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ" ಎಂದು ಅಭಿಪ್ರಾಯಪಟ್ಟಿದ್ದಾರೆ.


  ಹರಿಯಾಣ ಬಿಜೆಪಿ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ಕ್ಯಾಪ್ಟನ್​ ಅಮರೀಂದರ್ ಸಿಂಗ್, "ಹರಿಯಾಣ ಸರ್ಕಾರವು ಬಲವಂತವಾಗಿ ರೈತರ ಮೇಲೆ ಆಶ್ರುವಾಯು ಪ್ರಯೋಗಿಸುವ ಮೂಲಕ ಅವರನ್ನು ಏಕೆ ಪ್ರಚೋದಿಸುತ್ತಿದೆ? ಸಾರ್ವಜನಿಕ ಹೆದ್ದಾರಿಯ ಮೂಲಕ ಶಾಂತಿಯುತವಾಗಿ ಹಾದುಹೋಗುವ ಹಕ್ಕು ರೈತರಿಗೆ ಇಲ್ಲವೇ? "ಎಂದು ಪ್ರಶ್ನಿಸಿದ್ದಾರೆ.


  "2020ರ ಸಂವಿಧಾನದ ದಿನದಂದು ರೈತರ ಸಾಂವಿಧಾನಿಕ ಹಕ್ಕುಗಳು ತುಳಿತಕ್ಕೆ ಒಳಗಾಗುತ್ತಿರುವುದು ವಿಷಾದಕರ ಸಂಗತಿಯಾಗಿದೆ. ಹೀಗಾಗಿ ಅವರನ್ನು ಶಾಂತಿಯುತವಾಗಿ ದೆಹಲಿಗೆ ನಡೆದು ಹೋಗಲು ಬಿಡಿ. ಅವರನ್ನು ಅಂಚಿಗೆ ತಳ್ಳುವ ಬದಲು ಅವರ ಧ್ವನಿಯನ್ನು ಕೇಂದ್ರ ಸರ್ಕಾರ ಶಾಂತಿಯುತವಾಗಿ ಕೇಳಲಿ" ಎಂದು ಸಲಹೆ ನೀಡಿದ್ದಾರೆ.


  ಇದನ್ನೂ ಓದಿ : ದೆಹಲಿ ಚಲೋ; ಗಡಿಯಲ್ಲಿಯೇ ರೈತರನ್ನು ತಡೆದು ಅಶ್ರುವಾಯು ಪ್ರಯೋಗ, ಬ್ಯಾರಿಕೇಡ್ ಮುರಿದು ರೈತರ ಆಕ್ರೋಶ


  "ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಸರ್ಕಾರವು ರೈತರ ವಿರುದ್ಧ ಬಲವಾದ ತೋಳಿನ ತಂತ್ರಗಳನ್ನು ಮಾಡದಂತೆ ಕೇಂದ್ರ ಬಿಜೆಪಿ ಸರ್ಕಾರ ನಿರ್ದೇಶಿಸಬೇಕು. ಇದಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳಿಗೂ ರೈತರ ಹೋರಾಟವನ್ನು ಧಮನಿಸದಂತೆ ಸೂಚನೆ ನೀಡಬೇಕು. ರಾಷ್ಟ್ರವನ್ನು ಪೋಷಿಸುವ ಕೈಗಳಿಗೆ ಅವರ ಹಕ್ಕನ್ನು ಕೇಳುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಡಬೇಕು" ಎಂದು ಕ್ಯಾಪ್ಟನ್ ಅಮರಿಂದರ್​ ಸಿಂಗ್ ಮನವಿ ಮಾಡಿದ್ದಾರೆ.


  ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಉದ್ದೇಶಿಸಿರುವ ಮೂರು ಕೃಷಿ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ. ಆದರೆ, ಈ ಕೃಷಿ ಕಾನೂನುಗಳು ರೈತರಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತವೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ರೈತರು ಪಡೆಯಲು ಅವಕಾಶ ಒದಗಿಸುತ್ತದೆ ಎಂಬುದು ಕೇಂದ್ರ ಸರ್ಕಾರದ ಅಂಬೋಣ. ಆದರೆ, ಇದನ್ನು ವಿರೋಧಿಸಿ ರೈತರು ಮಾತ್ರ ಕಳೆದ ನಾಲ್ಕು ತಿಂಗಳಿನಿಂದ ಸತತ ಹೋರಾಟವನ್ನು ನಡೆಸುತ್ತಲೇ ಇದ್ದಾರೆ.

  Published by:MAshok Kumar
  First published: