ಮುಂಬೈ(ಜೂ.13): ಇತ್ತೀಚೆಗಷ್ಟೇ ಮುಂಬೈನಲ್ಲಿ ಒಬ್ಬ ಮಹಿಳಾ ಮುನ್ಸಿಪಲ್ ಆಫೀಸರ್ ಖುದ್ದಾಗಿ ಮ್ಯಾನ್ಹೋಲ್ಗೆ ಇಳಿದು ಚರಂಡಿ ಸ್ವಚ್ಛತಾ ಕಾರ್ಯವನ್ನು ಪರಿಶೀಲಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಮಹಿಳಾ ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಅದೇ ಮುಂಬೈನಲ್ಲಿ ಒಂದು ಘಟನೆ ನಡೆದಿದೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಿವಸೇನಾ ಶಾಸಕ ಕಂಟ್ರಾಕ್ಟರ್ನ್ನು ಮಳೆ ನೀರು ತುಂಬಿರುವ ರಸ್ತೆಯಲ್ಲಿ ಕೂರಿಸಿ, ಅವರ ಮೇಲೆ ಕಸ ಎಸೆಯುವಂತೆ ಜನರಿಗೆ ಹೇಳಿದ್ದಾರೆ. ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂದು ಶಾಸಕರು ಗುತ್ತಿಗೆದಾರರಿಗೆ ಈ ಶಿಕ್ಷೆ ನೀಡಿದ್ದಾರೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಉತ್ತರ ಮುಂಬೈನ ಕಂಡಿವಲಿ ಕ್ಷೇತ್ರದ ಶಿವಸೇನಾ ಶಾಸಕ ದಿಲೀಪ್ ಲ್ಯಾಂಡೆ ಕಂಟ್ರಾಕ್ಟರ್ ಜೊತೆ ಈ ರೀತಿ ನಡೆದುಕೊಂಡಿದ್ದಾರೆ. ಶಾಸಕ ದಿಲೀಪ್ ನೀರು ತುಂಬಿರುವ ರಸ್ತೆಯಲ್ಲಿ ಕುಳಿತುಕೊಳ್ಳಲು ಗುತ್ತಿಗೆದಾರರಿಗೆ ಹೇಳಿದ್ದಾರೆ. ಅವರು ಕುಳಿತುಕೊಂಡ ಬಳಿಕ ವ್ಯಕ್ತಿಯೊಬ್ಬ ಕಂಟ್ರಾಕ್ಟರ್ನ್ನು ತಳ್ಳಿ, ತುಳಿದಿದ್ದಾರೆ. ನಂತರ ಶಾಸಕ ದಿಲೀಪ್, ಇಬ್ಬರು ವ್ಯಕ್ತಿಗಳನ್ನು ಕರೆದು ಕಸವನ್ನು ಆ ಗುತ್ತಿಗೆದಾರನ ಮೇಲೆ ಸುರಿಯುವಂತೆ ಹೇಳಿದ್ದಾರೆ.
ಇದನ್ನೂ ಓದಿ:Chetan Marriage: ಸಪ್ತಪದಿ ತುಳಿದ ಬಹದ್ದೂರ್ ನಿರ್ದೇಶಕ ಚೇತನ್; ಹುಡುಗಿ ಯಾರು ಗೊತ್ತಾ?
ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಮುಂಗಾರು ಮಳೆಯಾಗುತ್ತಿದ್ದು, ರಸ್ತೆಗಳು ನದಿಯಂತಾಗುತ್ತಿವೆ. ಚರಂಡಿಗಳು ಬ್ಲಾಕ್ ಆಗಿರುವುದರಿಂದ ಮಳೆ ನೀರು ಸರಾಗವಾಗಿ ಹೋಗದೆ, ರಸ್ತೆಗಳು ಜಲಾವೃತಗೊಳ್ಳುತ್ತಿವೆ. ಪರಿಸ್ಥಿತಿ ಹೀಗಿದ್ದರೂ ಸಹ ಗುತ್ತಿಗೆದಾರ ಚರಂಡಿಗಳನ್ನು ಸ್ವಚ್ಛಗೊಳಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ದಿಲೀಪ್ ಲ್ಯಾಂಡೆ, ರಸ್ತೆಗಳು ಜಲಾವೃತಗೊಳ್ಳದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಆದರೆ ತಮ್ಮ ಕರ್ತವ್ಯ ನಿಭಾಯಿಸುವಲ್ಲಿ ಅವರು ವಿಫಲರಾಗಿದ್ದಾರೆ. ಜನರು ನನ್ನ ಮೇಲೆ ನಂಬಿಕೆ ಇಟ್ಟು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಹೀಗಾಗಿ ನಾನು ನನ್ನ ಕರ್ತವ್ಯಗಳನ್ನು ಮಾಡುತ್ತಿದ್ದೇನೆ. ನಾನು ಸ್ಥಳೀಯ ಪಕ್ಷದ ಘಟಕದ ಮುಖ್ಯಸ್ಥರು ಹಾಗೂ ಶಿವ ಸೈನಿಕರನ್ನು ಕರೆದುಕೊಂಡು ಬಂದು ಚರಂಡಿಗಳನ್ನು ಸ್ವಚ್ಛಗೊಳಿಸಿದ್ದೇನೆ ಎಂದರು.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ
ಚರಂಡಿಗಳ ಸ್ವಚ್ಛತೆ ಗುತ್ತಿಗೆದಾರರಿಗೆ ಸಂಬಂಧಿಸಿದ ಕೆಲಸವಾಗಿದೆ. ಆದರೆ ಅವರು ಅದನ್ನು ಮಾಡಿಲ್ಲ. ಹೀಗಾಗಿ ನಾನೇ ಖುದ್ದಾಗಿ ರಸ್ತೆಗಿಳಿದು ಚರಂಡಿಗಳನ್ನು ಸ್ವಚ್ಛಗೊಳಿಸಿದೆ. ಗುತ್ತಿಗೆದಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿಲ್ಲವೆಂದು ಆತನನ್ನು ಇಲ್ಲಿ ಕರೆದು ಶಿಕ್ಷೆ ನೀಡಲಾಯಿತು ಎಂದು ಶಾಸಕರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ