ನವದೆಹಲಿ(ಮಾ.02): ರಾಜ್ಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುವ ಮೂಲಕ ಇಲ್ಲಿನ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದ ಕಾರಣ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾರನ್ನು ಸಾರ್ವಜನಿಕ ಸುರಕ್ಷಾ ಕಾಯ್ದೆಯಡಿ((ಪಬ್ಲಿಕ್ ಸೇಫ್ಟಿ ಆಕ್ಟ್) ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತಾಧಿಕಾರಿಗಳು ಸುಪ್ರೀಂಕೋರ್ಟ್ಗೆ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ನಿರ್ಧಾರದಿಂದ ಕಾಶ್ಮೀರದ ಜನತೆ ಭಾರೀ ಸಿಟ್ಟಿಗೆದ್ದಿದ್ದಾರೆ. ಈ ಮಧ್ಯೆ ಗೃಹಬಂಧನದಲ್ಲಿರುವ ಓಮರ್ ಅಬ್ದುಲ್ಲಾರನ್ನು ಬಿಡುಗಡೆಗೊಳಿಸಿದರೆ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಇವರ ಬಿಡುಗಡೆ ಬಳಿಕ ರಾಜಕೀಯ ಸಭೆಗಳನ್ನು ನಡೆಸಿದರೆ ಗಲಭೆಗಳು ಸೃಷ್ಟಿಯಾಗುತ್ತವೆ. ಜನ ಕೂಡ ರಾಜಕೀಯ ನಾಯಕರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಹಾಗಾಗಿ ಜನ ಯಾರ ಮಾತುಗಳನ್ನು ಕೇಳಲು ಸಿದ್ಧವಿಲ್ಲ. ಹಾಗಾಗಿ ಓಮರ್ ಬಂಧನ ಮಾನ್ಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಆಡಳಿತಾಧಿಕಾರಿಗಳು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಇನ್ನು, ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಗೆ ಸಹಕರಿಸುವಂತೆ ಒಮರ್ ಬಳಿ ಮನವಿ ಮಾಡಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಕಾಶ್ಮೀರ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕೇಂದ್ರ ಸರ್ಕಾರದ ವಿರುದ್ಧದ ತಮ್ಮ ನಿಲುವು ಬದಲಿಸಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಆಡಳಿತಾಧಿಕಾರಿಗಳು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿದ್ದಾರೆ.
ಈ ಹಿಂದೆಯೇ ಓಮರ್ ಅಬ್ದುಲ್ಲಾ ಗೃಹಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಉತ್ತರಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರ ಜತೆಜತೆಗೆ, ಅರ್ಜಿ ಸಲ್ಲಿಸಲು ಇಷ್ಟು ಸಮಯ ಕಳೆದಿರುವಾಗ ಇನ್ನೂ 15 ದಿನ ಕಾಯುವುದರಲ್ಲಿ ಸಮಸ್ಯೆ ಏನು ಎಂದು ಅರ್ಜಿ ಸಲ್ಲಿಸಿದ್ದ ಓಮರ್ ಅಬ್ದುಲ್ಲಾ ತಂಗಿ ಸಾರಾ ಅಬ್ದುಲ್ಲಾ ಪೈಲಟ್ಗೆ ಕೊರ್ಟ್ ಪ್ರಶ್ನಿಸಿತ್ತು.
ಇದನ್ನೂ ಓದಿ: ವರ್ಷವೇ ಕಾದಿದ್ದೀರಿ, ಇನ್ನೂ 15 ದಿನದಲ್ಲಿ ಏನೂ ಆಗಲ್ಲ: ಓಮರ್ ಅಬ್ದುಲ್ಲಾ ಬಂಧನ ಪ್ರಶ್ನಿಸಿದ ಅರ್ಜಿಗೆ ಸುಪ್ರೀಂ ಕೋರ್ಟ್
ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಅರುಣ್ ಮಿಶ್ರಾ ಪೀಠ ವಿಚಾರಣೆ ನಡೆಸಿತ್ತು. ಓಮರ್ ತಂಗಿ ಸಾರಾ ಪರ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಅರ್ಜಿ ವಿಚಾರಣೆ ವೇಳೆ ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳಿಗೆ, ಓಮರ್ ಮುನ್ನಚ್ಚರಿಕಾ ಬಂಧನದ ಬಗ್ಗೆ ಉತ್ತರಿಸುವಂತೆ ಸೂಚಿಸಿತ್ತು.
ಕಪಿಲ್ ಸಿಬಲ್ ಅರ್ಜಿ ಸಂಬಂಧ ತುರ್ತು ಆದೇಶ ನೀಡುವಂತೆ ಕೋರಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿಗಳು, ಅರ್ಜಿ ಸಲ್ಲಿಸಲು ಒಂದು ವರ್ಷವೇ ಕಾದಿದ್ದೀರಿ, ಇನ್ನೊಂದು ಹದಿನೈದು ಕಾದರೆ ಏನಾಗಲಿದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್ ಅರ್ಜಿ ಸಲ್ಲಿಕೆಗೆ ಒಂದು ವರ್ಷ ಕಾದಿಲ್ಲ. ಇದು ವ್ಯಕ್ತಿಯೊಬ್ಬರ ವೈಯಕ್ತಿಕ ಸ್ವಾತಂತ್ರ್ಯದ ಕುರಿತಾದ ಅರ್ಜಿ, ಅವರ ಹಕ್ಕನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಪ್ರಕರಣ ಸಂಬಂಧ ಶೀಘ್ರ ತೀರ್ಪು ನೀಡಬೇಕು ಎಂದು ಮನವಿ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ