news18-kannada Updated:February 9, 2021, 1:06 PM IST
ಅರವಿಂದ್ ಕೇಜ್ರಿವಾಲ್- ಹರ್ಷಿತಾ ಕೇಜ್ರಿವಾಲ್
ನವದೆಹಲಿ (ಫೆ. 9): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಗಳು ಹರ್ಷಿತಾ ಕೇಜ್ರಿವಾಲ್ ಆನ್ಲೈನ್ ವಂಚನೆಗೆ ಸಿಲುಕಿ 34 ಸಾವಿರ ರೂ. ಕಳೆದುಕೊಂಡಿದ್ದಾರೆ. ಆನ್ಲೈನ್ ವೆಬ್ಸೈಟ್ ಓಎಲ್ಎಕ್ಸ್ನಲ್ಲಿ ಸೆಕೆಂಡ್ ಹ್ಯಾಂಡ್ ಸೋಫಾ ಮಾರಲು ಮುಂದಾಗಿದ್ದರು ಹರ್ಷಿತಾ ಕೇಜ್ರಿವಾಲ್. ಆ ಸೋಫಾವನ್ನು ಕೊಳ್ಳುವುದಾಗಿ ನಂಬಿಸಿದ ಗ್ರಾಹಕನೊಬ್ಬ ಆಕೆಯ ಬ್ಯಾಂಕ್ ಖಾತೆಗೆ ಸ್ವಲ್ಪ ಹಣವನ್ನು ಹಾಕಿದ್ದ. ನಂತರ ಆಕೆಗೆ ಬಾರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಲು ಹೇಳಿದ್ದ.
ಹರ್ಷಿತಾ ಕೇಜ್ರಿವಾಲ್ ಆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ಆಕೆಯ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿತ್ತು. ಈ ಮೂಲಕ ಸೋಫಾ ಖರೀದಿಸುವ ನೆಪದಲ್ಲಿ ವ್ಯಕ್ತಿಯೋರ್ವ ಅರವಿಂದ್ ಕೇಜ್ರಿವಾಲ್ ಮಗಳಿಗೆ 34,000 ರೂ. ಪಂಗನಾಮ ಹಾಕಿದ್ದಾರೆ.
ಓಎಲ್ಎಕ್ಸ್ನಲ್ಲಿ ಹರ್ಷಿತಾ ಬಳಸಿದ್ದ ಸೋಫಾವನ್ನು ಮಾರಾಟಕ್ಕೆ ನಿರ್ಧರಿಸಿದ್ದರು. ಸೋಫಾ ಖರೀದಿಗೆ ಒಪ್ಪಿಕೊಂಡ ವ್ಯಕ್ತಿಯೋರ್ವ ಹರ್ಷಿತಾರ ಬ್ಯಾಂಕ್ ಖಾತೆಯಿಂದ ಹಣ ದೋಚಿದ್ದಾನೆ. ಹೊಸ ತಂತ್ರಜ್ಞಾನದ ಕ್ಯೂಆರ್ ಕೋಡ್ ಮೂಲಕ ವಂಚಕ 34 ಸಾವಿರ ರೂ. ದೋಚಿದ್ದಾನೆ. ಈ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಅಧಿಕೃತ ನಿವಾಸದ ಬಳಿಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.
ಮೊದಲು ಕಳುಹಿಸಿದ ಕ್ಯೂಆರ್ ಸ್ಕ್ಯಾನ್ ಮಾಡಿದಾಗ 20 ಸಾವಿರ ರೂ. ಹಣ ಡ್ರಾ ಆಗಿತ್ತು. ಈ ಬಗ್ಗೆ ಹರ್ಷಿತಾ ಆತನನ್ನು ಪ್ರಶ್ನೆ ಮಾಡಿದಾಗ ಮಿಸ್ಟೇಕ್ ಆಗಿ ಬೇರಾವುದೋ ಕ್ಯೂ ಆರ್ ಕಳಿಸಿದ್ದೇನೆ. ಈಗ ಕಳುಹಿಸುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ನಿಮಗೆ ಸೋಫಾದ ಹಣ ಬರುತ್ತದೆ ಎಂದು ಹೇಳಿದ್ದಾನೆ. ಆತ ಹೇಳಿದಂತೆ ಎರಡನೇ ಬಾರಿ ಕಳುಹಿಸಿದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದಾಗ ಮತ್ತೆ 14 ಸಾವಿರ ರೂ. ಕಟ್ ಆಗಿತ್ತು. ಆಮೇಲೆ ತಾನು ಮೋಸ ಹೋಗಿದ್ದೇನೆಂಬುದು ಹರ್ಷಿತಾಗೆ ಗೊತ್ತಾಗಿದೆ.
ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದ ಆಕೆ ದೂರು ದಾಖಲಿಸಿದ್ದಾರೆ. ಪೊಲೀಸರು ಆ ಅಪರಿಚಿತ ವ್ಯಕ್ತಿಯನ್ನು ಪತ್ತೆ ಹಚ್ಚಲು ಹುಡುಕಾಟ ನಡೆಸಿದ್ದಾರೆ.
Published by:
Sushma Chakre
First published:
February 9, 2021, 1:06 PM IST