ಲಕ್ನೋ: ಪೋಷಕರು (Parents) ತಮ್ಮ ಮಕ್ಕಳನ್ನು ಎಷ್ಟೋ ಕಷ್ಟಪಟ್ಟು ಸಾಕಿ ಸಲಹುತ್ತಾರೆ. ಅವರ ಭವಿಷ್ಯ (Future) ರೂಪಿಸಲು ಎಂತಹ ತ್ಯಾಗಕ್ಕಾದರೂ ಮುಂದಾಗುತ್ತಾರೆ. ಮಕ್ಕಳು (Children) ಒಂದು ಹಂತಕ್ಕೆ ಬರಬೇಕು ಎನ್ನುವುದು ಅವರ ಬಯಕೆಯಾಗಿರುತ್ತದೆ. ಜೊತೆಗೆ ತಮ್ಮ ಮಕ್ಕಳು ಭವಿಷ್ಯದಲ್ಲಿ ತಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿಟ್ಟುಕೊಂಡಿರುತ್ತಾರೆ. ಆದರೆ ಪ್ರಸ್ತುತ ಅಂತಹ ಆಸೆ ಹೊಂದಿರುವ ಬಹುತೇಕರಿಗೆ ಮಕ್ಕಳಿಂದ ತಾವು ನಿರೀಕ್ಷಿಸಿದ ಪ್ರೀತಿ ಸಿಗುತ್ತಿಲ್ಲ. ಕೆಲವು ಮಕ್ಕಳು ತಂದೆ-ತಾಯಿಯನ್ನು ಅನಾಥಾಶ್ರಮ (Orphanage), ವೃದ್ಧಾಶ್ರಮಕ್ಕೆ (Old Age Home) ಸೇರಿಸುವ ಹಲವು ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಉತ್ತರ ಪ್ರದೇಶದಲ್ಲೂ (Uttar Pradesh) ಇದೇ ರೀತಿಯ ಘಟನೆ ನಡೆದಿದ್ದು, 5 ಮಕ್ಕಳಿದ್ದರೂ ಇಳಿ ವಯಸ್ಸಿನಲ್ಲಿ ಯಾರೂ ನೋಡಿಕೊಳ್ಳದ ಕಾರಣ ಬೇಸತ್ತ ವೃದ್ಧರೊಬ್ಬರು ತಮ್ಮೆಲ್ಲಾ ಆಸ್ತಿಯನ್ನು ಸರ್ಕಾರಕ್ಕೆ ವಿಲ್ ಮಾಡಿದ್ದಾರೆ.
ಆಸ್ತಿಯನ್ನೆಲ್ಲಾ ಸರ್ಕಾರಕ್ಕೆ ಬರೆದ ವೃದ್ಧ
ಐದು ಮಕ್ಕಳಿದ್ದರು ಸರಿಯಾಗಿ ನೋಡಿಕೊಳ್ಳದ ಕಾರಣ ಮನನೊಂದಿದ್ದ 85 ವರ್ಷದ ವ್ಯಕ್ತಿಯೊಬ್ಬ ತನ್ನ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಮಾಡಿರುವ ಘಟನೆ ಬೆಳಕಿಗೆಬಂದಿದೆ. ನಾಥು ಸಿಂಗ್ ಎಂಬ ವೃದ್ಧ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಐದು ಮಕ್ಕಳಿದ್ದರೂ ಒಬ್ಬರೂ ತಮ್ಮನ್ನು ನೋಡಿಕೊಳ್ಳದ ಕಾರಣ ಬೇಸತ್ತು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆಸ್ತಿಯನ್ನು ಸರ್ಕಾರಕ್ಕೆ ವಿಲ್ ಮಾಡಿರುವ ಅವರು, ತಮ್ಮ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ವಿಲ್ನಲ್ಲಿ ತಮ್ಮ ಏಕೈಕ ಮಗ ಹಾಗೂ ನಾಲ್ವರು ಪುತ್ರಿಯರು ತಮ್ಮ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂದು ಅವರು ವಿಲ್ ಮಾಡಿದ್ದಾರೆ.
ಶಿಕ್ಷಕನಾಗಿರುವ ಮಗ
ಮುಜಾಫರ್‌ನಗರದ ನಿವಾಸಿ ನಾಥು ಸಿಂಗ್ ಎಂಬ ವೃದ್ಧ 1.5 ಕೋಟಿ ಮೌಲ್ಯದ ಮನೆ ಮತ್ತು ಜಮೀನನ್ನು ಹೊಂದಿದ್ದಾರೆ. ಅವರಿಗೆ ಒಬ್ಬ ಮಗನಿದ್ದಾನೆ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಮಗ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಸಹರಾನ್‌ಪುರದಲ್ಲಿ ವಾಸಿಸುತ್ತಿದ್ದಾರೆ ಮತ್ತು ನಾಲ್ಕು ಹೆಣ್ಣುಮಕ್ಕಳು ವಿವಾಹವಾಗಿ ತಮ್ಮ ಗಂಡಂದಿರ ಮನೆ ಸೇರಿದ್ದಾರೆ. ಪತ್ನಿಯ ಸಾವಿನ ನಂತರ ನಾಥುಸಿಂಗ್ ಒಬ್ಬಂಟಿಯಾಗಿ ಕೆಲಕಾಲ ಜೀವನ ನಡೆಸಿದ್ದಾರೆ. ಈ ವೇಳೆ ದೊಡ್ಡ ಕುಟುಂಬವಾದರೂ ಒಬ್ಬರೂ ತಮ್ಮನ್ನು ನೋಡಲು ಬಾರದ ಹಿನ್ನಲೆ ಕೆಲವು ದಿನಗಳ ಹಿಂದೆ ವೃದ್ಧಾಶ್ರಮಕ್ಕೆ ಸೇರಿದ್ದಾರೆ.
ಶಾಲೆ ಅಥವಾ ಆಸ್ಪತ್ರೆ ನಿರ್ಮಿಸಲು ಮನವಿ
ಒಬ್ಬಂಟಿ ಜೀವನ ಸಾಕಾಗಿ ವೃದ್ಧಾಶ್ರಮ ಸೇರಿರುವ ವೃದ್ಧ ಕುಟುಂಬದ ಯಾರೂ ತಮ್ಮನ್ನು ಭೇಟಿಯಾಗಲು ಬಾರದ ಕಾರಣ ನೊಂದು ತನ್ನ ಆಸ್ತಿಯನ್ನು ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ಅದರಂತೆ ಅವರ ಮರಣದ ನಂತರ ಆ ಜಾಗದಲ್ಲಿ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ಕೇಳಿಕೊಂಡಿದ್ದಾರೆ. " ಈ ವಯಸ್ಸಿನಲ್ಲಿ ನಾನು ಮಗ ಹಾಗೂ ಸೊಸೆಯೊಂದಿಗೆ ವಾಸಿಸಬೇಕಿತ್ತು. ಆದರೆ ಅವರು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳಲಿಲ್ಲ, ಹಾಗಾಗಿ ನನ್ನ ಆಸ್ತಿಯನ್ನು ಸರ್ಕಾರಕ್ಕೆ ನೀಡುವ ನಿರ್ಧಾರ ಮಾಡಿದೆ " ಎಂದು ತಿಳಿಸಿದ್ದಾರೆ. ವಿಲ್ನಲ್ಲಿ ದೇಹವನ್ನೂ ಕೂಡ ಮೆಡಿಕಲ್ ಕಾಲೇಜಿಗೆ ದಾನ ನೀಡಲು ನಿರ್ಧರಿಸಿದ್ದಾರೆ.
ವೃದ್ಧಾಶ್ರಮಕ್ಕೂ ಬಾರದ ಮಕ್ಕಳು
ನಾಥು ಸಿಂಗ್ ವೃದ್ಧಾಶ್ರಮಕ್ಕೆ ಬಂದು 6-7 ತಿಂಗಳು ಕಳೆದರೂ ಕುಟುಂಬದ ಒಬ್ಬ ಸದಸ್ಯ ಕೂಡ ಅವರನ್ನು ಕಾಣಲು ಬಂದಿಲ್ಲಎಂದು ಮ್ಯಾನೇಜರ್ ರೇಖಾ ಸಿಂಗ್ ತಿಳಿಸಿದ್ದಾರೆ. ಇದರಿಂದ ಅವರು ತುಂಬಾ ಅಸಮಾಧಾನಗೊಂಡಿದ್ದರು, ಹಾಗಾಗಿ ರಾಜ್ಯ ಸರ್ಕಾರಕ್ಕೆ ತನ್ನ ಆಸ್ತಿಯನ್ನು ನೀಡಲು ತೀರ್ಮಾನಿಸಿದರು ಎಂದು ಮಾಹಿತಿ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ