ಹಸುಗೂಸಿನಿಂದ ನಮ್ಮನ್ನು ಸಾಕಿ, ಸಲುಹಿ ನಮ್ಮ ಕಾಲ ಮೇಲೆ ನಾವು ನಿಲ್ಲುವವರೆಗೂ ಪೋಷಕರು ಅತ್ಯಂತ ಕಾಳಜಿಯಿಂದ ನಮ್ಮನ್ನು ನೋಡಿಕೊಂಡು ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸುತ್ತಾರೆ. ಜವಾಬ್ದಾರಿ ಮುಗಿದಮೇಲೂ ಮಕ್ಕಳ ಒಳಿತಿಗಾಗಿ, ಖುಷಿಗಾಗಿ (Happy) ಏನನ್ನಾದರೂ ಮಾಡುತ್ತಲೇ ಇರುತ್ತಾರೆ. ಇದಾದ ನಂತರ ಮಕ್ಕಳು ಅವರನ್ನು ಕಡೆಗಾಲದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಕೂರಿಸದಿದ್ದರು ಒಂದಿಷ್ಟು ಪ್ರೀತಿ (Love) ಜೊತೆ ಕೊನೆವರೆಗೂ ಅವರ ಜೊತೆ ಇರಲು ಬಯಸುತ್ತಾರೆ. ತಂದೆ-ತಾಯಿಯನ್ನು ಅವರು ವಯಸ್ಸಾದ (Age) ನಂತರ ನೋಡಿಕೊಳ್ಳೋದು ಪ್ರತಿ ಮಕ್ಕಳ (Children) ಕರ್ತವ್ಯ ಕೂಡ ಹೌದು. ಆದರೆ ಇದಕ್ಕೆ ವಿರುದ್ಧವಾಗಿ ಹಲವರು ಅಪ್ಪ-ಅಮ್ಮನಿಗೆ ವಯಸ್ಸಾದಂತೆ ನಿರ್ಲಕ್ಷ್ಯ ಮಾಡಿಬಿಡುತ್ತಾರೆ.
ಇಂತಹ ಸಾವಿರಾರು ಪ್ರಕರಣಗಳು ನಮ್ಮ ನಡುವೆಯೇ ಇದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಸಮಾಜದಲ್ಲಿ ವೃದ್ಧಾಶ್ರಮಗಳಿವೆ. ಮಕ್ಕಳ ವರ್ತನೆಗೆ ಬೇಸತ್ತು ಹೆತ್ತವರೇ ಅಲ್ಲಿ ಸೇರಿಕೊಳ್ಳುತ್ತಾರೆ, ಇಲ್ಲಾ ಮಕ್ಕಳೇ ಸಾಕು ಇವರ ಸಹವಾಸ ಅಂತಾ ಬಿಟ್ಟು ಬಂದುಬಿಡುತ್ತಾರೆ.
ವಯಸ್ಸಾದ ತಂದೆಯನ್ನು ದೂರ ಮಾಡಿದ ಮಕ್ಕಳು
ಉತ್ತರಪ್ರದೇಶದಲ್ಲೂ ಇಂತದ್ದೇ ಘಟನೆ ನಡೆದಿದ್ದು, ಮಕ್ಕಳ ವರ್ತನೆಗೆ ಬೇಸತ್ತ ಹಿರಿಯ ವ್ಯಕ್ತಿ ವೃದ್ಧಾಶ್ರಮ ಸೇರಿದ್ದಲ್ಲದೇ ಕೊನೆಗಾಲದಲ್ಲಿ ತನ್ನನ್ನು ನೋಡಿಕೊಳ್ಳದ ಮಕ್ಕಳಿಗೆ ತನ್ನ ಆಸ್ತಿಯಲ್ಲಿ ಬಿಡಿಗಾಸು ಕೂಡ ಸಿಗದಂತೆ ಮಾಡಿದ್ದಾರೆ.
₹ 1.5 ಕೋಟಿ ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ಬರೆದ ನಾಥುಸಿಂಗ್
ಹೌದು, 85ರ ಹರೆಯದ ನಾಥು ಸಿಂಗ್ ಅವರಿಗೆ ಓರ್ವ ಪುತ್ರ ಮತ್ತು ನಾಲ್ಕು ಜನ ಹೆಣ್ಣು ಮಕ್ಕಳಿದ್ದಾರೆ. ಇವರಲ್ಲಿ ಒಬ್ಬರೂ ಸಹ ಅವರನ್ನೂ ನೋಡಿಕೊಳ್ಳದೇ ಬೀದಿಪಾಲು ಮಾಡಿಬಿಟ್ಟಿದ್ದಾರೆ. ತಮ್ಮ ಮಕ್ಕಳು ತಮ್ಮನ್ನು ತಾತ್ಸಾರ ಮಾಡಿ ಕೈಬಿಟ್ಟಿದ್ದಕ್ಕೆ ಮನನೊಂದು ಬರೋಬ್ಬರಿ ₹ 1.5 ಕೋಟಿ ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ಕೇವಲ ಆಸ್ತಿಯನ್ನು ಸರ್ಕಾರಕ್ಕೆ ಬರೆದಿದ್ದಲ್ಲದೇ ನಾಥು ಸಿಂಗ್ ಅವರ ದೇಹವನ್ನೂ ಸಹ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದಾರೆ. ಕೊನೆಗಾಲದಲ್ಲಿ ಆಶ್ರಯ ನೀಡದ, ಪ್ರೀತಿ ತೋರದ ಮಕ್ಕಳನ್ನು ಅವರ ಅಂತಿಮ ವಿಧಿಗಳಲ್ಲಿ ಪಾಲ್ಗೊಳ್ಳಲು ಬಿಡಬಾರದು ಎಂದು ವಿಲ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Emergency Exit: ವಿಮಾನದ ಎಮರ್ಜೆನ್ಸಿ ಡೋರ್ ತೆಗೆಯಲು ಯತ್ನ; ತಡೆಯಲು ಬಂದ ಸಿಬ್ಬಂದಿಗೆ ಚಾಕು ಇರಿತ!
ಮುಜಾಫರ್‌ನಗರದ ನಿವಾಸಿ ನಾಥು ಸಿಂಗ್ ₹ 1.5 ಕೋಟಿ ಮೌಲ್ಯದ ಮನೆ ಮತ್ತು ಜಮೀನು ಹೊಂದಿದ್ದಾರೆ. ನಾಥು ಸಿಂಗ್ ಮಗ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, ಸಹರಾನ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಇತರೆ ನಾಲ್ಕು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ.
ವೃದ್ಧಾಶ್ರಮ ಸೇರಿದ್ದ ನಾಥುಸಿಂಗ್
ನಾಥುಸಿಂಗ್, ಪತ್ನಿಯ ಸಾವಿನ ನಂತರ ಒಂಟಿ ಜೀವನ ನಡೆಸುತ್ತಿದ್ದರು. ಮಕ್ಕಳೂ ಯಾರೂ ಅವರನ್ನು ನೋಡಿಕೊಳ್ಳದ ಕಾರಣ ಆಶ್ರಯಕ್ಕಾಗಿ ಸುಮಾರು ಏಳು ತಿಂಗಳ ಹಿಂದೆ ಅವರು ತಮ್ಮ ಗ್ರಾಮದ ವೃದ್ಧಾಶ್ರಮವನ್ನು ಸೇರಿಕೊಂಡರು. ವೃದ್ಧಾಶ್ರಮಕ್ಕೆ ತೆರಳಿದ ನಂತರ ಯಾರೊಬ್ಬರೂ ತನ್ನನ್ನು ವಿಚಾರಿಸಲು, ನೋಡಲು ಬಂದಿಲ್ಲ ಎಂದು ಮನನೊಂದು ತಮ್ಮ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಿಲ್ ಮಾಡಿದ್ದಾರೆ. ತನ್ನ ಮರಣದ ನಂತರ ಅಲ್ಲಿ ಆಸ್ಪತ್ರೆ ಅಥವಾ ಶಾಲೆಯನ್ನು ನಿರ್ಮಿಸುವಂತೆ ವಿನಂತಿಸಿಕೊಂಡಿದ್ದಾರೆ.
ಈ ಇಳಿವಯಸ್ಸಿನಲ್ಲಿ ನಾನು ನನ್ನ ಮಗ ಮತ್ತು ಸೊಸೆ ಜೊತೆ ವಾಸಿಸಬೇಕಿತ್ತು. ಆದರೆ ಅವರು ನನ್ನನ್ನು ಕಡೆಗಣಿಸಿ ಬಿಟ್ಟಿದ್ದಾರೆ. ಆದ್ದರಿಂದ ಅವರಿಗೆ ನನ್ನ ಆಸ್ತಿ ವರ್ಗಾಯಿಸುವ ಮನಸ್ಸು ಬರಲಿಲ್ಲ ಎಂದು ನಾಥು ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾಥುಸಿಂಗ್ ಮರಣದ ನಂತರ ವಿಲ್ ಜಾರಿ
ಈ ಬಗ್ಗೆ ಮಾತನಾಡಿದ ಅಲ್ಲಿನ ಸಬ್-ರಿಜಿಸ್ಟ್ರಾರ್ ಅಧಿಕಾರಿ ನಾಥುಸಿಂಗ್ ಅವರ ಅಫಿಡವಿಟ್ ಅನ್ನು ಸ್ವೀಕರಿಸಲಾಗಿದೆ ಮತ್ತು ಅವರ ಮರಣದ ನಂತರ ಇದು ಜಾರಿಗೆ ಬರಲಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ