ಭಾರತದ ಒಲಾ ಈಗ ಯೂರೋಪ್​ಗೂ ಲಗ್ಗೆ; ಊಬರ್​ಗೆ ಆಗದ್ದು ಒಲಾದಿಂದ ಸಾಧ್ಯವಾಗುವುದೇ?


Updated:August 8, 2018, 2:43 PM IST
ಭಾರತದ ಒಲಾ ಈಗ ಯೂರೋಪ್​ಗೂ ಲಗ್ಗೆ; ಊಬರ್​ಗೆ ಆಗದ್ದು ಒಲಾದಿಂದ ಸಾಧ್ಯವಾಗುವುದೇ?

Updated: August 8, 2018, 2:43 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 07): ಬೆಂಗಳೂರು ಮೂಲದ ಆನ್​ಲೈನ್ ಕ್ಯಾಬ್ ಸರ್ವಿಸ್ ಸಂಸ್ಥೆ ಒಲಾ ಈಗ ಐರೋಪ್ಯ ಮಾರುಕಟ್ಟೆ ಪ್ರವೇಶಿಸುತ್ತಿದೆ. ಬ್ರಿಟನ್ ದೇಶದಲ್ಲಿ ಒಲಾ ತನ್ನ ಆಪರೇಷನ್ ವಿಸ್ತರಿಸಲು ಪ್ಲಾನ್ ಮಾಡಿದೆ. ಕೆಲ ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾದಲ್ಲಿ ಸೇವೆ ಪ್ರಾರಂಭಿಸಿದ ಒಲಾ ಈಗ ಯೂರೋಪ್ ಖಂಡಕ್ಕೆ ಲಗ್ಗೆ ಇಡಲು ಅಣಿಯಾಗಿದೆ. ಸೌಥ್ ವೇಲ್ಸ್ ಮತ್ತು ಮ್ಯಾಂಚೆಸ್ಟರ್ ನಗರದಲ್ಲಿ ಮುಂದಿನ ತಿಂಗಳೊಳಗೆ ಒಲಾ ಸೇವೆ ಪ್ರಾರಂಭವಾಗಲಿದೆ. ಈ ವರ್ಷಾಂತ್ಯದೊಳಗೆ ಇಡೀ ಬ್ರಿಟನ್ ರಾಷ್ಟ್ರಕ್ಕೆ ಕ್ಯಾಬ್ ಸೇವೆ ವಿಸ್ತರಣೆಯಾಗುವ ನಿರೀಕ್ಷೆ ಇದೆ.

2010ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಒಲಾ, ಭಾರತದಲ್ಲಿ ಆನ್​ಲೈನ್ ಕ್ಯಾಬ್ ಸೇವೆ ಪ್ರಾರಂಭಿಸಿದ ಮೊದಲ ಕಂಪನಿ ಎನಿಸಿದೆ. 10 ಲಕ್ಷ ನೊಂದಾಯಿತ ಡ್ರೈವರ್​ಗಳಿರುವ ಒಲಾದ ಸೇವೆ ಈಗ ಭಾರತದ 110 ನಗರಗಳಲ್ಲಿ ಲಭ್ಯವಿದೆ. ಅಮೆರಿಕ ಮೂಲದ ಊಬರ್ ಬರುವವರೆಗೂ ಒಲಾ ಭಾರತದ ಒನ್ ಅಂಡ್ ಓನ್ಲಿ ಕ್ಯಾಬ್ ಸೇವೆಯಾಗಿತ್ತು. ಆದರೆ, ಊಬರ್ ಆಗಮನವು ಒಲಾಗೆ ತೀವ್ರ ಸ್ಪರ್ಧೆ ಒಡ್ಡಿತು. ಭಾರತದಲ್ಲಿ ಒಲಾವನ್ನೂ ಮೀರಿಸಿ ಊಬರ್ ಜನಪ್ರಿಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಬ್ರಿಟನ್​ನಲ್ಲಿ ಈಗಾಗಲೇ ಊಬರ್ ಮತ್ತು ಟ್ಯಾಕ್ಸಿಫೈ ಸಂಸ್ಥೆಗಳು ಆನ್​ಲೈನ್ ಕ್ಯಾಬ್ ಸೇವೆ ನೀಡುತ್ತಿವೆ. ಒಲಾ ಎಂಟ್ರಿಯಿಂದ ಅಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸಾಫ್ಟ್​ಬ್ಯಾಂಕ್, ಡಿಎಸ್​ಟಿ ಗ್ಲೋಬಲ್, ಚೀನಾದ ಟೆನ್​ಸೆಂಟ್ ಮತ್ತು ಡಿಡಿ ಚುಕ್ಸಿಂಗ್ ಸಂಸ್ಥೆಗಳಿಂದ 300 ಕೋಟಿ ಡಾಲರ್ ಹೊಸ ಬಂಡವಾಳ ಪಡೆದಿರುವ ಒಲಾಗೆ ಈಗ ಬ್ರಿಟನ್ ದೇಶದಲ್ಲಿ ಊಬರ್​ನ್ನು ಸೋಲಿಸುವ ಹುಮ್ಮಸ್ಸು ತುಂಬಿದೆ. ತವರಿನಲ್ಲೇ ಊಬರ್​ನ್ನು ಮೆಟ್ಟಿನಿಲ್ಲಲು ಸಾಧ್ಯವಾಗದ ಒಲಾಗೆ ಬ್ರಿಟನ್​ನಲ್ಲಿ ನೆಲೆ ಕಂಡುಕೊಂಡಿರುವ ಎದುರಾಳಿಯನ್ನು ಮಣಿಸಲು ಸಾಧ್ಯವೇ? ಸಾಧ್ಯ ಎನ್ನುತ್ತಾರೆ ತಜ್ಞರು.

ಬ್ರಿಟನ್ ದೇಶದ ಕಾನೂನುಗಳು ಸ್ವಲ್ಪ ಬಿಗಿಯಾಗಿರುತ್ತವೆ. ಈ ಕಾನೂನುಗಳನ್ನ ಸರಿಯಾಗಿ ಗಣನೆಗೆ ತೆಗೆದುಕೊಳ್ಳದೆಯೇ ಊಬರ್ ಸಂಸ್ಥೆ ಇಲ್ಲಿ ತನ್ನ ಸೇವೆ ಪ್ರಾರಂಭಿಸಿತು. ಇದರಿಂದ ಅಲ್ಲಿಯ ಆಡಳಿತ ಹಾಗೂ ಕಾನೂನು ಪಾಲನಾ ಸಂಸ್ಥೆಗಳೊಂದಿಗೆ ಊಬರ್ ತಿಕ್ಕಾಟ ನಿರಂತರವಾಗಿ ನಡೆದಿದೆ. ಹೀಗಾಗಿ ಊಬರ್ ಪೂರ್ಣ ಪ್ರಮಾಣದಲ್ಲಿ ಬ್ರಿಟನ್​ನಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ತನ್ನ ಸೇವಾ ಸ್ವರೂಪದಲ್ಲಿ ಬದಲಾವಣೆ ತರಲು ಊಬರ್​ಗೆ ಸಮಯದ ಅಗತ್ಯವಿದೆ. ಇದೆಲ್ಲದರ ಅರಿವಿರುವ ಒಲಾ ಸಂಸ್ಥೆ ಈಗಾಗಲೇ ಬ್ರಿಟನ್​ನ ಆಡಳಿತದೊಂದಿಗೆ ಈಗಾಗಲೇ ಸಮಾಲೋಚನೆ ನಡೆಸಿದೆ. ಬ್ರಿಟನ್ ಕಾನೂನಿಗೆ ತಕ್ಕಂತೆ ತನ್ನ ಕ್ಯಾಬ್ ಸೇವೆಯಲ್ಲಿ ಓಲಾ ಮಾರ್ಪಾಟು ತರುತ್ತಿದೆ. ಇದು ಊಬರ್ ಎದುರು ಗೆಲ್ಲಲು ಒಲಾಗೆ ಸಹಾಯಕವಾಗಬಹುದು. ಊಬರ್ ಚೇತರಿಸಿಕೊಳ್ಳುವಷ್ಟರಲ್ಲಿ ಬ್ರಿಟನ್ ಮಾರುಕಟ್ಟೆಯಲ್ಲಿ ಪಾರಮ್ಯ ಸಾಧಿಸುವ ಗುರಿ ಒಲಾದ್ದಾಗಿದೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ