ಅಮೃತ್ ಪ್ರಧಾನ್ ಎಂಬ 24 ವರ್ಷದ ಯುವಕ, ಯಾವ ಸೆಲೆಬ್ರಿಟಿಯೂ ಅಲ್ಲ, ಅಥವಾ ಒಡಿಶಾದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವನೂ ಅಲ್ಲ. ಆದರೂ ಚೆನ್ನೈನ ಅಪೋಲೋ ಆಸ್ಪತ್ರೆಯ ವೈದ್ಯರ ವಿಶೇಷ ತಂಡ, ಶ್ವಾಸಕೋಶದ ಕಸಿಗಾಗಿ ಅವನನ್ನು ಏರ್ ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲು ಒಡಿಸ್ಸಾಗೆ ಬಂದಿತ್ತು.ಇಡೀ ದೇಶದಲ್ಲಿ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ನಿರಾಶೆಯ ಛಾಯೆ ಕವಿದಿರುವಂತಹ ಈ ಸಂದರ್ಭದಲ್ಲಿ, ನಿರುದ್ಯೋಗಿ ಯುವಕನೊಬ್ಬನ ಏರ್ಲಿಫ್ಟಿಂಗ್ , ಸಮುದಾಯದ ನಂಟು ಮತ್ತು ಸೌಹಾರ್ದಕ್ಕೆ ಒಂದು ಉದಾಹರಣೆಯಾಗಿ ಕಂಡು ಬರುತ್ತಿದೆ. ಇದಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ
ಕುಟುಂಬದವರ ಮನವಿಯ ಮೇರೆಗೆ, ಆತನ ಚಿಕಿತ್ಸೆಗಾಗಿ ದೇಶದಾಂತ್ಯ ಜನರು ಒಟ್ಟು 60 ಲಕ್ಷ ರೂ.ಗಳನ್ನು ಸಂಗ್ರಹ ಮಾಡಿಕೊಟ್ಟಿದ್ದು, ಕೊರೋನಾ ವಿರುದ್ಧ ಹೋರಾಡಲು ಅವನಿಗೆ ಬೆಂಬಲವಾಗಿ ನಿಂತಿದ್ದಾರೆ. ಪ್ರಧಾನ ಸರ್ಕಾರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಿಜಿಯಿಂದ ಉತ್ತೀರ್ಣನಾಗಿ, ಕಾರ್ಪೋರೇಟ್ ಉದ್ಯೋಗ ಮಾಡುತ್ತಿದ್ದ ಆತ, ಈ ಕೋರೋನಾ ಸಂದರ್ಭದಲ್ಲಿ ಕೆಲಸ ತೊರೆದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ.
ಏಪ್ರಿಲ್ ಕೊನೆಯ ವಾರದಲ್ಲಿ, ಪ್ರಾಥಮಿಕ ಶಾಲಾ ಶಿಕ್ಷಕಿ ಆಗಿರುವ ಆತನ ತಾಯಿಗೆ ಕೊರೋನಾ ತಗಲುವವರೆಗೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಬಳಿಕ ಆತನ ತಂದೆಗೂ ಕೊರೋನಾ ಅಂಟಿಕೊಂಡಿತು. ಅವರಿಬ್ಬರ ಸೇವೆಯಲ್ಲಿ ನಿರತನಾಗಿದ್ದ ಅಮೃತ್ನಲ್ಲೂ ಕೊರೋನಾ ಲಕ್ಷಣಗಳು ಕಂಡು ಬರತೊಡಗಿದವು. ಅವನನ್ನು ಮೊದಲು ಅಲ್ಲಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಬಳಿಕ ಆತನ ಸ್ಥಿತಿ ಹದಗೆಟ್ಟಿದ್ದರಿಂದ, ಅವನನ್ನು ಭುವನೇಶ್ವರದ ಏಮ್ಸ್ಗೆ ಸ್ಥಳಾಂತರಿಸಲಾಯಿತು. ಕಳೆದ 20 ದಿನಗಳಿಂದ ಆತ ವೆಂಟಿಲೇಟರ್ ಆಸರೆಯಲ್ಲಿದ್ದಾನೆ.
ಕುಟುಂಬಸ್ಥರ ಪ್ರಕಾರ, ಕೋವಿಡ್ -19 ಸೋಂಕು ಉಲ್ಬಣಗೊಂಡು, ನ್ಯುಮೋನಿಯಾ, ಸೆಫ್ಟಿಮಿಯಾ ಮತ್ತು ಅಪಾಯಕಾರಿ ಶಿಲೀಂಧ್ರ ಸೋಂಕಿಗೆ ಅವನು ಗುರಿಯಾಗಿದ್ದಾನೆ.
“ಮೇ 24ರ ಸುಮಾರಿಗೆ, ಒಡಿಶಾದಲ್ಲಿ ಲಭ್ಯವಿಲ್ಲದ, ಇಸಿಎಂಓ ಬೆಂಬಲ ಮತ್ತು ಶ್ವಾಸಕೋಶ ಕಸಿ ಮಾಡುವ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ನನ್ನ ತಮ್ಮನನ್ನು ಸೇರಿಸಬೇಕೆಂದು ಇಲ್ಲಿನ ವೈದ್ಯರು ಹೇಳಿದರು” ಎಂದು ಯುವಕನ ಅಕ್ಕ ಮನೀಶಾ ಪ್ರಧಾನ್ ತಿಳಿಸಿದರು.
“ವೈದ್ಯರ ಸಲಹೆ ನಮ್ಮಲ್ಲಿ ಹೊಸ ಭರವಸೆ ಮೂಡಿಸಿದರೂ, ಚಿಕಿತ್ಸೆ ಆರಂಭಿಸಲು 1.2 ಕೋಟಿ ರೂ. ಬೇಕಿತ್ತು, ಅಷ್ಟೇ ಅಲ್ಲದೇ, ಸಂಪೂರ್ಣ ಚಿಕಿತ್ಸೆಗೆ ಎಷ್ಟು ಬೇಕಾಗಬಹುದು ಎಂಬುದರ ಅಂದಾಜು ಮಾಡಲಿಕ್ಕೆ ಸಾಧ್ಯವಿರಲಿಲ್ಲ. ಇಸಿಎಂಓ ಬೆಂಬಲ ಮತ್ತು ಶ್ವಾಸಕೋಶ ಕಸಿ ಮಾಡುವ ಸೌಲಭ್ಯ ಹೊಂದಿರುವ ಆಸ್ಪತ್ರೆಗೆ ಸ್ಥಳಾಂತರಿಸಲು ಅಗತ್ಯವಿದ್ದ ಇಸಿಎಂಓ ಏರ್ಲಿಫ್ಟ್ಗೆ 30-40 ಲಕ್ಷ ಬೇಕಿತ್ತು” ಎಂದು ಯುವಕನ ಭಾವ ಚಿದಾನಂದ ತರೈ ತಿಳಿಸಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಹಣಕಾಸಿನ ಕೊರತೆ ಇರುವುದರಿಂದ, ಬೇರೆ ದಾರಿಯಿಲ್ಲದೆ ದಾನಿಗಳಿಂದ ನೆರವು ಪಡೆಯುವ ದಾರಿ ಹಿಡಿಯಬೇಕಾಯಿತು. ಮಿಲಾಪ್ ಎಂಬ ಕ್ರೌಡ್ ಫಂಡಿಂಗ್ ಸಂಸ್ಥೆಯೊಂದರಿಂದಲೇ ಒಂದು ವಾರದೊಳಗೆ 57,24,750ರೂ. ನೆರವು ಸಿಕ್ಕಿತು. ಅಮೃತ್ಗೆ ಪರಿಚಯವೇ ಇಲ್ಲದ ಜನರು ವೈಯುಕ್ತಿಕವಾಗಿ ಆತನ ಚಿಕಿತ್ಸೆಗೆ ಅಗತ್ಯಗಳಿಗೆ ನೆರವು ನೀಡಲು ಮುಂದೆ ಬಂದರು. ಈ ಮೂಲಕ ಆತನ ಉಳಿವಿಗೆ ಆಸರೆಯಾದರು
ಗುರುವಾರ , ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬೆಡ್ ಲಭ್ಯವಿರುವ ಅಧಿಕೃತ ಮಾಹಿತಿ ಬಂದ ಕೂಡಲೇ, ಏರ್ ಲಿಫ್ಟ್ ಪ್ರಕ್ರಿಯೆ ಆರಂಭವಾಯಿತು. ಭುವನೇಶ್ವರ ಮತ್ತು ಕಟಕ್ನ ಆಯುಕ್ತರು, ವಿಶೇಷ ಆ್ಯಂಬುಲೆನ್ಸ್ಗೆ, ಏಮ್ಸ್ ಭುವನೇಶ್ವರದಿಂದ ಬಿಜು ಪಟ್ನಾಯಕ್ ವಿಮಾನ ನಿಲ್ದಾಣಕ್ಕೆ 10 ಕಿಮೀ ಪ್ರಯಾಣಿಸಲು, ಭುವನೇಶ್ವರ್-ಕಟಕ್ ಗ್ರೀನ್ ಕಾರಿಡಾರ್ಗೆ ಅವಕಾಶ ಮಾಡಿಕೊಟ್ಟರು. ಇದರಿಂದ ವಿಮಾನ ನಿಲ್ದಾಣ ಪ್ರವೇಶಿಸಲು ಆ್ಯಂಬುಲೆನ್ಸ್ಗೆ ಅತ್ಯಂತ ಕಡಿಮೆ ಸಮಯ ತೆಗೆದುಕೊಂಡಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ