ಒಡಿಶಾ: ವೈದ್ಯೋ ನಾರಾಯಣೋ ಹರಿಃ ಎಂದು ವೈದ್ಯರನ್ನು (Doctor) ದೇವರ ಸಮಾನ ಎಂದು ಭಾವಿಸಲಾಗುತ್ತದೆ. ರೋಗಿಗಳು ವೈದ್ಯರ ಬಳಿಗೆ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಬರುತ್ತಾರೆ, ಆದರೆ ಇಲ್ಲೊಂದು ಪ್ರಕರಣದಲ್ಲಿ ಮಹಿಳೆಯೊಬ್ಬರು ವೈದ್ಯರಿಂದಲೇ ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ. ಹೊಟ್ಟೆ ನೋವೆಂದು ಬಂದ ಮಹಿಳೆಗೆ ವೈದ್ಯರು ಸರಿಯಾಗಿ ಪರಿಶೀಲಿಸದೆ ಗರ್ಭಿಣಿ (Pregnant) ಎಂದು ಹೇಳಿದ್ದಾರೆ. ಇದನ್ನ ನಂಬಿದ ಮಹಿಳೆಯ ಕುಟುಂಬಸ್ಥರು ಗರ್ಭಿಣಿಗೆ ನೀಡಬೇಕಾದ ಎಲ್ಲಾ ರೀತಿಯ ಪಥ್ಯಗಳನ್ನು (Pregnancy Diet) ನೀಡಿ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ 8 ತಿಂಗಳ ಬಳಿಕ ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿದಾಗ ಹೊಟ್ಟೆಯಲ್ಲಿರುವುದು ಮಗುವಲ್ಲ ಗಡ್ಡೆ ಎಂಬುದು ತಿಳಿದುಬಂದಿದ್ದು, ಇದು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಅಲ್ಲದೆ ಈ ಸುದ್ದಿಯಿಂದ ಒಡಿಶಾದ (Odisha) ಆರೋಗ್ಯ ಇಲಾಖೆಯ (Health Department) ಲೋಪವನ್ನು ಜಗಜ್ಜಾಹಿರಾಗಿದೆ.
8 ತಿಂಗಳು ಮಗುವೆಂದು ಗಡ್ಡೆ ಬೆಳೆಸಿದ್ದ ಮಹಿಳೆ
ಖೋರ್ಧಾದ ಜಟ್ನಿಯ ಸ್ವರ್ಣಲತಾ ಸಾಹು ಎಂಬ ದಿವ್ಯಾಂಗ ಮಹಿಳೆಗೆ ಎಂಟು ತಿಂಗಳಿಂದ ಗರ್ಭಾವಸ್ಥೆಯ ಆರೈಕೆಯನ್ನು ಮಾಡಲಾಗಿದೆ. ಆದರೆ ದುರಂತವೆಂದರೆ ಅವರು ಹೊಟ್ಟೆಯಲ್ಲಿ ಇಷ್ಟುದಿನ ಬೆಳೆದಿದ್ದು ಮಗುವಲ್ಲ, ಗಡ್ಡೆ ಎಂಬುದು ಬೆಳಕಿಗೆ ಬಂದಿದೆ. ಸಾಹು ಎಂಟು ತಿಂಗಳ ಹಿಂದೆ ಹೊಟ್ಟೆ ನೋವಿನಿಂದಾಗಿ ಜಟ್ನಿ ಆಸ್ಪತ್ರೆಗೆ ಹೋಗಿದ್ದಾರೆ. ಕೆಲವು ಪರೀಕ್ಷೆಗಳನ್ನು ನಡೆಸಿದ ನಂತರ, ವೈದ್ಯರು ಆಕೆಯನ್ನು ಒಂದು ತಿಂಗಳ ಗರ್ಭಿಣಿ ಎಂದು ನಿರ್ಣಯಿಸಿದ್ದಾರೆ.
ಇದನ್ನೂ ಓದಿ: Shocking News: ಅಣ್ಣನ ಜೊತೆ ಜಗಳ, ಚೈನೀಸ್ ಮೊಬೈಲ್ ನುಂಗಿದ ಯುವತಿ! ಮುಂದೆ ಆಗಿದ್ದೇನು?
ಗರ್ಭಿಣಿ ಪಥ್ಯ ಪಾಲಿಸಿದ್ದರಿಂದ ಉಲ್ಬಣವಾದ ಸಮಸ್ಯೆ
ಪರೀಕ್ಷೆ ನಂತರ ಸಾಹುಗೆ ಜಟ್ನಿ ಆಸ್ಪತ್ರೆಯ ವೈದ್ಯರು ಗರ್ಭಾವಸ್ಥೆಯಲ್ಲಿ ಆಹಾರವನ್ನು ನಿಯಮಿತವಾಗಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ಸಂಬಂಧಿತ ಗರ್ಭಧಾರಣೆಯ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ಸಾಹು ಕೂಡ ಸ್ಥಳೀಯ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಎಂಟು ತಿಂಗಳ ಕಾಲ ತನ್ನ ಗರ್ಭಾವಸ್ಥೆಯ ಆರೈಕೆಯನ್ನು ಮುಂದುವರಿಸಿದ್ದಾರೆ.
ಆದರೂ ಸಾಹು ಅವರ ನೋವು ದಿನದಿಂದ ದಿನಕ್ಕೆ ಉಲ್ಬಣಗೊಂಡಿತ್ತು. ಇದರಿಂದ ಆಕೆಯ ಪತಿ ಅನುಮಾನದಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಆಕೆಯ ಮೇಲೆ ಅಲ್ಟ್ರಾಸೌಂಡ್ ಇಮೇಜಿಂಗ್ ನಡೆಸಲಾಗಿದ್ದು, ಸಾಹು ಕಳೆದ ಎಂಟು ತಿಂಗಳಿನಿಂದ ಹೊಟ್ಟೆಯಲ್ಲಿ ಬೆಳೆದಿರುವುದು ಮಗು ಅಲ್ಲ, ಗಡ್ಡೆಯನ್ನು ಎಂಬುದು ಖಚಿತವಾಗಿದೆ.
ಚಿಕಿತ್ಸೆಗೆ ಹಣವಿಲ್ಲದ ಪರದಾಟ
ನನ್ನ ಪತ್ನಿ ವೈದ್ಯರ ಭೇಟಿಯ ನಂತರ ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು. ಆದರೆ ಇಷ್ಟು ದಿನ ಅವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು ತುಂಬಾ ಬಡವ. ನನ್ನ ಹೆಂಡತಿಯ ಗಡ್ಡೆ ತೆಗೆಸಲು ನನ್ನ ಬಳಿ ಹಣವಿಲ್ಲ ಎಂದು ಸ್ವರ್ಣಲತಾ ಪತಿ ಕಬೀಂದ್ರ ಸಾಹು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ವಿಚಿತ್ರವೆಂದರೆ ಜಟ್ನಿಯಲ್ಲಿರುವ ಸರ್ಕಾರಿ ಆಸ್ಪತ್ರೆಯು ಸ್ವರ್ಣಲತಾ ಅವರಿಗೆ ಹೆರಿಗೆ ಕಾರ್ಡ್ ನೀಡಿದ್ದು, ಅದರಲ್ಲಿ ನಿರೀಕ್ಷಿತ ಹೆರಿಗೆ ದಿನಾಂಕ ಸೇರಿದಂತೆ ಆಕೆಯ ಎಲ್ಲಾ ವಿವರಗಳನ್ನು ನೋಂದಾಯಿಸಲಾಗಿದೆ. ಮೇ 28ರಂದು ಹೆರಿಗೆ ಆಗುವ ನಿರೀಕ್ಷೆ ಇದೆ ಎಂದು ಕಾರ್ಡ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Love: ಮುನಿಸಿಕೊಂಡ ಗೆಳತಿಯ ಮನವೊಲಿಸಲು ಯುವಕನ 21 ಗಂಟೆಯ ಹೋರಾಟ; ಅಯ್ಯೋ ಪಾಪ ಎಂದ ನೆಟ್ಟಿಗರು
ಉಚಿತ ಚಿಕಿತ್ಸೆಗೆ ಆಗ್ರಹ
ವೈದ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ನಿರ್ಲಕ್ಷ್ಯದ ಆರೋಪ ಮಾಡಿರುವ ಸ್ವರ್ಣಲತಾ ತಾಯಿ ಮತ್ತು ಪತಿ ಸರ್ಕಾರದಿಂದಲೇ ಉಚಿತ ಚಿಕಿತ್ಸೆಗೆ ಆಗ್ರಹಿಸಿದ್ದಾರೆ. " ಎಂಟು ತಿಂಗಳ ಹಿಂದೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ನನ್ನ ಮಗಳು ಗರ್ಭಿಣಿಯಾಗಿಲ್ಲ ಎಂಬುದು ಆಗಲಾದರೂ ವೈದ್ಯರಿಗೆ ತಿಳಿಯಲಿಲ್ಲವೇ? ಆಕೆಗೆ ಸೂಚಿಸಿದ ಔಷಧಿಗಳು ಹೊಟ್ಟೆಯಲ್ಲಿನ ಗಡ್ಡೆಯನ್ನು ಮತ್ತಷ್ಟು ದೊಡ್ಡದಾಗಿಸಿದೆ '' ಎಂದು ಸ್ವರ್ಣಲತಾ ತಾಯಿ ಟಿಕಿನಾ ಸಾಹು ಆರೋಪಿಸಿದ್ದಾರೆ.
ಸೂಕ್ತ ಕ್ರಮದ ಭರವಸೆ
ಸ್ವರ್ಣಲತಾ ಅವರಿಗೆ ಮೊಟ್ಟೆ, ಕ್ಯಾಲ್ಸಿಯಂ ಮಾತ್ರೆಗಳು ಮತ್ತು ಕಬ್ಬಿಣದ ಕ್ಯಾಪ್ಸುಲ್‌ಗಳನ್ನು ತಿನ್ನಲು ಸಲಹೆ ನೀಡಲಾಗಿದೆ. ಇವುಗಳು ಆರೋಗ್ಯದ ಮೇಲ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಸದ್ಯ ಸಾಹು ಕುಟುಂಬದವರ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸುತ್ತಿದ್ದೇವೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ " ಎಂದು ಜಟ್ನಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಜಿತೇಂದ್ರ ಕುಮಾರ್ ಪಾಂಡಾ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ