Nusrat Jahan - ಪ್ರೀತಿಗೆ ಲವ್ ಜಿಹಾದ್ ಬಣ್ಣ ಬಳಿಯುವುದು ಸರಿಯಲ್ಲ: ನುಸ್ರತ್ ಜಹಾನ್

ನಾವು ಹೇಗೆ ಬದುಕಬೇಕು, ಯಾರನ್ನ ಪ್ರೀತಿಸಬೇಕು, ಯಾರನ್ನ ಮದುವೆಯಾಗಬೇಕು, ಏನನ್ನ ತಿನ್ನಬೇಕು, ಏನನ್ನ ತೊಡಬೇಕು ಎಂಬುದು ನಮ್ಮ ವೈಯಕ್ತಿಕ ನಿರ್ಧಾರಗಳಾಗಿರುತ್ತವೆ. ಯಾರೂ ಕೂಡ ಅದನ್ನ ಹೇರಬಾರದು ಎಂದು ಮೂಲಭೂತವಾದಿಗಳಿಗೆ ನಟಿ, ಸಂಸದೆ ನುಸ್ರತ್ ಜಹಾನ್ ತಿಳಿಹೇಳಿದ್ದಾರೆ.

ಸಂಸದೆ ನುಸ್ರತ್​ ಜಹಾನ್​

ಸಂಸದೆ ನುಸ್ರತ್​ ಜಹಾನ್​

 • News18
 • Last Updated :
 • Share this:
  ಕೋಲ್ಕತಾ(ನ. 24): ದೇಶಾದ್ಯಂತ ಚರ್ಚೆಯ ವಿಷಯವಾಗಿರುವ ಲವ್ ಜಿಹಾದ್ ಬಗ್ಗೆ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್ ಪ್ರತಿಕ್ರಿಯಿಸಿದ್ದು, ಪ್ರೀತಿಗೆ ಲವ್ ಜಿಹಾದ್ ಹಣೆಪಟ್ಟಿ ಕಟ್ಟುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲವ್ ಮತ್ತು ಜಿಹಾದ್ ಎಂಬುದು ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲವೆಂದ ಅವರು, ಧರ್ಮವನ್ನು ಒಂದು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. ತೃಣಮೂಲ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಪ್ರೀತಿ ಎಂಬುದು ತೀರಾ ಖಾಸಗಿ ವಿಚಾರ. ಪ್ರೀತಿ ಮತ್ತು ಜಿಹಾದ್ ಒಟ್ಟೊಟ್ಟಿಗೆ ಸಾಗುವುದಿಲ್ಲ. ಚುನಾವಣೆಗೆ ಮುಂಚೆ ಕೆಲ ಜನರು ಇಂಥ ವಿಚಾರಗಳನ್ನ ಹೊತ್ತು ತರುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು.

  ಹಿಂದೂ ವ್ಯಕ್ತಿಯನ್ನು ವಿವಾಹವಾಗಿ ಬಹಿರಂಗವಾಗಿ ಹಿಂದೂ ಸಂಪ್ರದಾಯಗಳನ್ನ ಪಾಲಿಸಿ ಇಸ್ಲಾಮ್ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರೂ ತನ್ನ ನಡಾವಳಿಯಲ್ಲಿ ಬದಲಾವಣೆ ಮಾಡಿಕೊಳ್ಳದ ಧೈರ್ಯಸ್ಥೆ ನುಸ್ರತ್ ಜಹಾನ್ ಈಗ ಲವ್ ಜಿಹಾದ್ ವಿಚಾರದಲ್ಲಿ ನೇರ ಅನಿಸಿಕೆಗಳನ್ನ ಹೊರಹಾಕಿದ್ದಾರೆ.

  ಇದನ್ನೂ ಓದಿ: ಅಮೆರಿಕದ ಮುಂದಿನ ವಿದೇಶಾಂಗ ಸಚಿವರ ಭಾರತದೊಂದಿಗಿನ ಒಡನಾಟ ಹೇಗೆ? ಚೀನಾ, ಪಾಕ್ ಬಗ್ಗೆ ಅವರ ನಿಲುವೇನು?

  ಮುಸ್ಲಿಮ್ ಹುಡುಗ ಹಿಂದೂ ಹುಡುಗಿಯನ್ನ ಪ್ರೀತಿಸಿ ವಿವಾಹವಾಗುವ ಘಟನೆಗಳಲ್ಲಿ ಹೆಚ್ಚಿನವು ದುರುದ್ದೇಶಪೂರಿತವಾಗಿರುವಂಥವು. ಇದು ಹಿಂದೂ ಹೆಣ್ಮಕ್ಕಳನ್ನ ಇಸ್ಲಾಮ್ ಧರ್ಮಕ್ಕೆ ಪರಿವರ್ತಿಸುವ ದೊಡ್ಡ ಷಡ್ಯಂತ್ರ. ಇದೇ ಲವ್ ಜಿಹಾದ್ ಎಂಬುದು ಹಿಂದೂ ಸಂಘಟನೆಗಳ ಆರೋಪವಾಗಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಮ್ ರಾಜ್ಯಗಳಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಲಾಗಿದೆ. ಮದುವೆ ಉದ್ದೇಶಕ್ಕೆ ಮತಾಂತರ ಮಾಡುವುದನ್ನು ಈ ಕಾನೂನು ನಿಷೇಧಿಸುತ್ತದೆ. ಕರ್ನಾಟಕದಲ್ಲೂ ಇದರನ್ನ ಜಾರಿಗೆ ತರುವ ಚಿಂತನೆ ಇದೆ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಯಸ್ಸಿಗೆ ಬಂದಿರುವ ಯಾವ ವ್ಯಕ್ತಿ ಬೇಕಾದರೂ ತನ್ನಿಚ್ಛೆ ಪ್ರಕಾರ ಯಾವುದೇ ಜಾತಿ ಧರ್ಮದವರನ್ನ ಬೇಕಾದರೂ ವಿವಾಹವಾಗಬಹುದು. ಪ್ರೀತಿಗೂ ಜಾತಿ ಧರ್ಮಕ್ಕೂ ತಳುಕು ಹಾಕುವುದು ಸರಿಯಲ್ಲ ಎಂಬುದು ಅಂತರ್ಧರ್ಮೀಯ ವಿವಾಹ ಸಮರ್ಥಕರ ವಾದ.

  “ನೀವು ಯಾರೊಂದಿಗೆ ಬದುಕಬೇಕೆಂಬುದು ನಿಮ್ಮ ವೈಯಕ್ತಿಕ ಆಯ್ಕೆ. ನೀವು ಬದುಕಿರಿ, ಇನ್ನೊಬ್ಬರನ್ನು ಬದುಕಲು ಬಿಡಿ. ಪ್ರೀತಿಯ ಸಾಗರದಲ್ಲಿ ಮಿಂದು ತೇಲಾಡಿ” ಎಂದು ನುಸ್ರತ್ ಜಹಾನ್ ಹೇಳುತ್ತಾರೆ.

  ಇದನ್ನೂ ಓದಿ: ಹೈದರಾಬಾದಿಗಳ ಕೈಲಿ ಭಾರೀ ಟ್ರೋಲ್ ಆದ ತೇಜಸ್ವಿ ಸೂರ್ಯ; ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್

  ಬಸಿರ್​ಹತ್ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ಸಂಸದೆಯಾಗಿರುವ 30 ವರ್ಷದ ನಟಿ ನಸ್ರತ್ ಜಹಾನ್ ಹಿಂದೂ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಮಂಗಲಸೂತ್ರ ಮತ್ತು ಸಿಂಧೂರ ಧರಿಸಿಕೊಂಡು ಸಂಸತ್​ಗೆ ಹೋಗುತ್ತಾರೆ. ಹಿಂದೂ ವಿವಾಹಿತ ಮಹಿಳೆ ಪಾಲಿಸುವ ಹಲವು ಆಚರಣೆ ಮತ್ತು ಸಂಪ್ರದಾಯಗಳನ್ನ ಇವರೂ ಪಾಲಿಸುತ್ತಾರೆ. ಹಿಂದೂ ಪೂಜೆ, ಹೋಮ ಹವನಗಳಲ್ಲಿ ಇವರು ಭಾಗಿಯಾಗುತ್ತಾರೆ. ಕೆಲ ದಿನಗಳ ಹಿಂದಷ್ಟೇ ಇವರು ಕೋಲ್ಕತಾದಲ್ಲಿ ಜಗಧಾತ್ರಿ ಪೂಜಾ ಮಂಡಲವನ್ನ ಉದ್ಘಾಟಿಸಿ ದೇವರ ಪೂಜೆ ಮಾಡಿದ್ದರು. ಇವರ ಇಂಥ ನಡೆಗಳ ಬಗ್ಗೆ ಹಲವು ಮುಸ್ಲಿಮ್ ಧಾರ್ಮಿಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವುದುಂಟು. ಆದರೂ ನುಸ್ರತ್ ಜಹಾನ್ ತಮ್ಮ ನಿಲುವನ್ನು ಬದಲಿಸಿದವರಲ್ಲ.

  “ನಾವು ಹೇಗೆ ಬದುಕಬೇಕು, ಯಾರನ್ನ ಪ್ರೀತಿಸಬೇಕು, ಯಾರನ್ನ ಮದುವೆಯಾಗಬೇಕು, ಏನನ್ನ ತಿನ್ನಬೇಕು, ಏನನ್ನ ತೊಡಬೇಕು ಎಂಬುದು ನಮ್ಮ ವೈಯಕ್ತಿಕ ನಿರ್ಧಾರಗಳಾಗಿರುತ್ತವೆ. ಯಾರೂ ಕೂಡ ಅದನ್ನ ಹೇರಬಾರದು. ನಾವು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇರುವುದನ್ನು ಮರೆತುಬಿಟ್ಟಿದ್ದೀರಾ?” ಎಂದು ಧಾರ್ಮಿಕ ಮೂಲಭೂತವಾದಿಗಳಿಗೆ ನುಸ್ರತ್ ಪ್ರಶ್ನೆ ಮಾಡಿದ್ದಾರೆ.
  Published by:Vijayasarthy SN
  First published: