ಮುಂಬೈ: ಪ್ರವಾದಿ ಮಹಮ್ಮದ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ (BJP) ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಹೊಸ ಸಮನ್ಸ್ (Mumbai Police Summons) ಕಳುಹಿಸಿದ್ದಾರೆ. ಜೂನ್ 25 ರಂದು ನೂಪುರ್ ಶರ್ಮಾ ಮುಂಬೈ ಪೊಲೀಸರ ಎದುರು ಹಾಜರಾಗಬೇಕಿದೆ. ಜೂನ್ 25 ರಂದು ಪಿಡೋನಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ನೂಪುರ್ ಶರ್ಮಾಗೆ (Nupur Sharma) ನೀಡಿದ ಸಮನ್ಸ್ನಲ್ಲಿ ಸೂಚನೆ ನೀಡಿದ್ದಾರೆ. ನೂಪುರ್ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಈಮುನ್ನ ಜೂನ್ 22ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದರು. ಆದರೆ ಇದೀಗ ಹೊಸ ಸಮನ್ಸ್ ಜಾರಿಗೊಳಿಸಲಾಗಿದೆ.
ಬೆಳಗಾವಿಯ ಪೋರ್ಟ್ ರಸ್ತೆಯಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ಗಲ್ಲಿಗೆ ಏರಿಸಿದ್ದಾರೆ. ಸಾರ್ವಜನಿಕರು ಓಡಾಡುವ ನಡು ರಸ್ತೆಯಲ್ಲೇ ನಿನ್ನೆ ರಾತ್ರಿ ವೇಳೆಗೆ ಕಿಡಿಗೇಡಿಗಳು ನೂಪುರ್ ಶರ್ಮಾ ಪ್ರತಿಕೃತಿಯನ್ನು ಗಲ್ಲಿಗೇರಿಸಿದ್ದಾರೆ. ಮುಂಜಾನೆ ಸಾರ್ವಜನಿಕರು ಇದನ್ನು ಗಮನಿಸಿದ್ದಾರೆ. ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿವಿಧೆಡೆ ಪ್ರತಿಭಟನೆ, ಹಿಂಸಾತ್ಮಕ ಘರ್ಷಣೆ ಅಮಾನತುಗೊಂಡ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಪಶ್ಚಿಮ ಬಂಗಾಳದ ಹೌರಾ, ಜಾರ್ಖಂಡ್ನ ರಾಂಚಿ, ಕರ್ನಾಟಕದ ಬೆಳಗಾವಿ ಮತ್ತು ದೆಹಲಿಯಲ್ಲಿ ಉತ್ತರ ಪ್ರದೇಶದ ಆರು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ. ಕೆಲವೆಡೆ ಕಲ್ಲು ತೂರಾಟ ಮತ್ತು ಹಿಂಸಾತ್ಮಕ ಘರ್ಷಣೆಗಳೂ ನಡೆದಿದ್ದು ಬಿಗಿಯಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಕಿಡಿಗೇಡಿಗಳ ಕೃತ್ಯಕ್ಕೆ ಹಿಂದೂ ಸಂಘಟನೆಗಳ ವಿರೋಧ ನೂಪುರ್ ಶರ್ಮಾ ಅವರ ಭಾವಚಿತ್ರದ ಸಮೇತ ಅವರ ಪ್ರತಿಕೃತಿಗೆ ಹಗ್ಗ ಕಟ್ಟಿ ನಿನ್ನೆ ತಡರಾತ್ರಿ ನೇತುಹಾಕಿದ್ದರು. ಇಂದು ಬೆಳಗ್ಗೆ ಇದನ್ನು ಕಂಡು ಹಿಂದೂ ಜಾಗರಣ, ಶ್ರೀರಾಮ ಸೇನೆ ಕಾರ್ಯಕರ್ತರು, ಕೆಲ ಪಾಲಿಕೆ ಸದಸ್ಯರು ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೆಚ್ಚು ಜನ ಜಮಾಯಿಸಿದ್ದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಈ ಪ್ರತಿಕೃತಿಯನ್ನು ತಕ್ಷಣ ತೆರವುಗೊಳಿಸಬೇಕು, ಇಲ್ಲದಿದ್ದರೆ ನಾವೇ ಅದನ್ನು ತೆರವು ಮಾಡಬೇಕಾಗುತ್ತದೆ. ಹೊಸ ವಿವಾದಕ್ಕೆ ಅವಕಾಶ ಕೊಡಬಾರದು ಎಂದು ಕೆಲ ಮುಖಂಡರು ಆಗ್ರಹಿಸಿದರು.
ಪ್ರತಿಕೃತಿ ತೆರವು ಮಾಡಿದ ಪೊಲೀಸರು ವಿಷಯ ಗೊತ್ತಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೊಲಿಸರು ಭೇಟಿ ನೀಡಿ, ಪರಿಶೀಲಿಸಿದ್ರು. ಬಳಿಕ ಹಗ್ಗ ಕಟ್ಟಿ ನೇತು ಹಾಕಿದ್ದ ಪ್ರತಿಕೃತಿ ತೆರವು ಮಾಡಿದ್ರು. ಇನ್ನು ಮಾರ್ಕೆಟ್ ಠಾಣೆ ಪೊಲೀಸರು ಸುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು? ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಯಿತು.
ವಿದೇಶಗಳಲ್ಲೂ ಭಾರೀ ವಿರೋಧ ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಮುಸ್ಲಿಂ ರಾಷ್ಟ್ರಗಳು ತಿರುಗಿ ಬಿದ್ದಿವೆ. ಸೌದಿ ಅರೇಬಿಯಾ, ಬಹರೈನ್, ಅರಬ್ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.
ಕ್ಷಮೆ ಕೇಳಿದ ನೂಪುರ್ ಶರ್ಮಾ ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ