ನವದೆಹಲಿ(ಆ.18): ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (National Security Adviser Ajit Doval) ಮಾಸ್ಕೋಗೆ ಭೇಟಿ ನೀಡಿದ್ದಾರೆ. ಉಕ್ರೇನ್ (Ukraine) ಜೊತೆಗಿನ ಯುದ್ಧಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಂಬಂಧ ಸುಧಾರಣೆಗೆ ಮುಂದಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಬೆಳವಣಿಗೆಗೆ ಸಂಬಂಧಿಸಿದ ಉನ್ನತ ಮೂಲಗಳು ಈ ಬಗ್ಗೆ ನ್ಯೂಸ್ 18 ಗೆ ಮಾಹಿತಿ ನೀಡಿವೆ. ಅಜಿತ್ ದೋವಲ್ ಅವರು ಮಂಗಳವಾರ ಅನಿರೀಕ್ಷಿತ ಭೇಟಿಗಾಗಿ ರಷ್ಯಾಕ್ಕೆ (Russia) ಆಗಮಿಸಿದ್ದಾರೆ. ಅವರು ಪ್ರಾಥಮಿಕವಾಗಿ ನಿಕೊಲಾಯ್ ಪೆಟ್ರುಶೆವ್ (Nikolai Patrushev) ಅವರನ್ನು ಭೇಟಿಯಾಗಬಹುದು ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ, ಪಾಶ್ಚಿಮಾತ್ಯ ನಾಯಕರು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಗೆ ಕದನ ವಿರಾಮಕ್ಕೆ ಒಪ್ಪಿಗೆ ಮತ್ತು ಒಪ್ಪಂದಕ್ಕಾಗಿ ರಷ್ಯಾದೊಂದಿಗೆ ಮಾತುಕತೆ ಪ್ರಾರಂಭಿಸಲು ಒತ್ತಡ ಹೇರುತ್ತಿದ್ದಾರೆ. ಕದನ ವಿರಾಮವನ್ನು ಸಾಧಿಸಲು ಯಶಸ್ವಿಯಾದರೆ, ಯುರೋಪ್‌ನಲ್ಲಿ ತನ್ನ ಗೌರವವು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂಬ ಕಾರಣದಿಂದ ಭಾರತವು ಇದನ್ನು ಒಂದು ಅವಕಾಶವಾಗಿ ನೋಡುತ್ತದೆ ಎಂದು ಮೂಲಗಳು ತಿಳಿಸಿವೆ. ಈ ಭೇಟಿಯ ಮತ್ತೊಂದು ಪ್ರಮುಖ ಅಂಶವೆಂದರೆ ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಒದಗಿಸುವುದು.
ಇಂಧನ ಭದ್ರತೆ ಬಗ್ಗೆಯೂ ಮಾತು
ವಾಸ್ತವವಾಗಿ, ಭಾರತವು ರಷ್ಯಾದ ಮೇಲಿನ ಜಾಗತಿಕ ನಿರ್ಬಂಧ ಮತ್ತು ಭಾರತಕ್ಕಾಗುವ ಸರಬರಾಜುಗಳ ಮೇಲೆ ಅದರ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸಭೆಯಲ್ಲಿ ಎನ್‌ಎಸ್‌ಎ ಅಜಿತ್ ದೋವಲ್ ಭಾರತಕ್ಕೆ ಇಂಧನ ಪೂರೈಕೆ ಮತ್ತು ಸಂಭವನೀಯ ಮಾತುಕತೆಗಳನ್ನು ಪರಿಗಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಭೇಟಿಯಲ್ಲಿ ಅಜಿತ್ ದೋವಲ್ ಅವರು ಅಫ್ಘಾನಿಸ್ತಾನ, ಭಯೋತ್ಪಾದನೆ, ರಕ್ಷಣೆ ಮತ್ತು ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ ಸೇರಿದಂತೆ ಹಲವಾರು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Ajit Doval: ಅಜಿತ್ ದೋವಲ್ ಗುರಿಯಾಗಿಸಿ ದಾಳಿಗೆ ಪಾಕ್ ಸ್ಕೆಚ್: ಜೈಶ್ ಭಯೋತ್ಪಾದಕನಿಂದ ಬಹಿರಂಗ!
ವಿಶ್ವಸಂಸ್ಥೆಯಲ್ಲಿ ಭಾರತದ ನಿಲುವೇನಾಗಿತ್ತು?
ಈ ವರ್ಷದ ಫೆಬ್ರವರಿಯಲ್ಲಿ ಆರಂಭವಾದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ನಂತರ, ಭಾರತದಲ್ಲಿನ ಉಕ್ರೇನ್ ರಾಯಭಾರಿಯು ಪ್ರಧಾನಿ ನರೇಂದ್ರ ಮೋದಿ ಬಳಿ ರಷ್ಯಾ ಅಧ್ಯಕ್ಷ ಪುಟಿನ್ರನ್ನು ತಡೆದು, ಉಕ್ರೇನ್ ಮೇಲೆ ರಷ್ಯಾದ ಯುದ್ಧದ ಕೃತ್ಯವನ್ನು ಖಂಡಿಸಲು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದರು. ಅದೇ ಸಮಯದಲ್ಲಿ, ಯುದ್ಧವನ್ನು ನಿಲ್ಲಿಸುವಂತೆ ಭಾರತವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಎರಡೂ ದೇಶಗಳಿಗೆ ಮನವಿ ಮಾಡಿದೆ. ರಕ್ತ ಚೆಲ್ಲುವ ಮೂಲಕ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ