ನವದೆಹಲಿ, ಜೂ. 12: ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಇಡುಮಾಡುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (Enforcement Directorate) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ( Congress president Sonia Gandhi) ಅವರಿಗೆ ಜೂನ್ 8ರಂದು ಹಾಗೂ ಅವರ ಪುತ್ರ ಸಂಸದ ರಾಹುಲ್ ಗಾಂಧಿ (Rahul Gandhi) ಅವರಿಗೆ ಜೂನ್ 13ರಂದು ಫೆಡರಲ್ ಏಜೆನ್ಸಿಯ ಎದುರು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ಸಂಸ್ಥೆ ಮತ್ತಿತರ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ನಾಳೆ ಕಾಂಗ್ರೆಸ್ ಪಕ್ಷದ ವತಿಯಿಂದ ಎಐಸಿಸಿ (AICC) ಕಚೇರಿಯಿಂದ ಇಡಿ ಕಚೇರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಸಂಸದರು ಮತ್ತು ಹಿರಿಯರು ಭಾಗಿ
ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಹೈಕಮಾಂಡ್ ತಮ್ಮ ಪಕ್ಷದ ಎಲ್ಲಾ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಹಿರಿಯ ನಾಯಕರಿಗೆ ಸೂಚನೆ ನೀಡಿದೆ. ಕರ್ನಾಟಕದ ವತಿಯಿಂದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಸದಸ್ಯರಾದ ನಾಸಿರ್ ಹುಸೇನ್, ಡಾ. ಎಲ್. ಹನುಮಂತಯ್ಯ, ಜಿ.ಸಿ. ಚಂದ್ರಶೇಖರ್, ಲೋಕಸಭಾ ಸದಸ್ಯ ಡಿ.ಕೆ. ಸುರೇಶ್, ಅಖಿಲ ಭಾರತ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ., ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಎಚ್.ಕೆ. ಪಾಟೀಲ್, ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: National Herald Case: ರಾಹುಲ್ ಗಾಂಧಿಗೆ ಇಡಿ ವಿಚಾರಣೆ, ಬೃಹತ್ ಪ್ರತಿಭಟನೆಗೆ ಕಾಂಗ್ರೆಸ್ ಪ್ಲಾನ್
ಮಾರ್ಗ ಮಧ್ಯಯೇ ತಡೆಯುವ ಸಾಧ್ಯತೆ
ಬೆಳಿಗ್ಗೆ 9ಗಂಟೆಗೆ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿಯಲ್ಲಿ ಜಮಾವಣೆಗೊಳ್ಳಲಿರುವ ಕಾಂಗ್ರೆಸ್ ನಾಯಕರು ಬಳಿಕ ಜಾರಿ ನಿರ್ದೇಶನಾಲಯದ ಕಚೇರಿಗೆ ಮೆರವಣಿಗೆ ಮೂಲಕ ತೆರಳುವರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾರ್ಗ ಮಧ್ಯೆ ಪೊಲೀಸರು ಕಾಂಗ್ರೆಸ್ ನಾಯಕರನ್ನು ತಡೆದು ಬಂಧಿಸುವ ಸಾಧ್ಯತೆ ಇದೆ.
ವಿನಾಯಿತಿ ಪಡೆದಿರುವ ಸೋನಿಯಾ ಗಾಂಧಿ
ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸೋನಿಯಾ ಗಾಂಧಿ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಕೋವಿಡ್ ಪಾಸಿಟಿವ್ ಆಗಿರುವ ಸೋನಿಯಾ ಗಾಂಧಿ ಅವರು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ವಿನಾಯಿತಿ ಪಡೆದಿದ್ದರು.
ಯಂಗ್ ಇಂಡಿಯನ್ ಅಕ್ರಮ ಸಂಬಂಧ ದೂರು ದಾಖಲು
ಕಾಂಗ್ರೆಸ್ ಪಕ್ಷ, ವಿಶೇಷವಾಗಿ ಅದರ ಅಧ್ಯಕ್ಷೆಯಾದ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಮಾಲೀಕತ್ವ ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಯಲ್ಲಿ ಪಾಲುದಾರರಾಗಿದ್ದಾರೆ. ಯಂಗ್ ಇಂಡಿಯನ್ ಸಂಸ್ಥೆಯು ಹಣಕಾಸು ಅಕ್ರಮಗಳನ್ನು ನಡೆಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದಲ್ಲಿ ದೂರು ದಾಖಲು ಮಾಡಿಕೊಂಡಿದೆ. ಇದೇ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಹೇಳಿಕೆ ದಾಖಲಿಸಿಕೊಳ್ಳಲು ಸಮನ್ಸ್
ಯಂಗ್ ಇಂಡಿಯನ್‌ನಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ದೂರು ದಾಖಲಾಗಿದ್ದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಇತ್ತೀಚೆಗೆ ಹಿರಿಯ ನಾಯಕರೂ ಆದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಖಜಾಂಚಿ ಪವನ್ ಬನ್ಸಲ್ ಅವರಿಗೂ ಸಮನ್ಸ್ ನೀಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ