ಆಮದು ಮಾಡಿಕೊಳ್ಳುವುದು ತಪ್ಪಲ್ಲ, ಆದರೆ, ಗಣೇಶ ವಿಗ್ರಹಗಳನ್ನೂ ಚೀನಾದಿಂದ ತರಿಸಬೇಕೆ?; ನಿರ್ಮಲಾ ಸೀತಾರಾಮನ್

ಇಂದು ಗಣೇಶ ವಿಗ್ರಹಗಳನ್ನು ಸಹ ಚೀನಾದಿಂದ ಏಕೆ ಆಮದು ಮಾಡಿಕೊಳ್ಳಲಾಗುತ್ತಿದೆ? ಇಂತಹ ಪರಿಸ್ಥಿತಿ ಏಕೆ ಬಂದಿದೆ? ನಾವು ಜೇಡಿಮಣ್ಣಿನಿಂದ ಗಣೇಶ ವಿಗ್ರಹವನ್ನು ಮಾಡಲು ಸಾಧ್ಯವಿಲ್ಲವೇ? ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
ನವ ದೆಹಲಿ (ಜೂನ್‌ 25): ಭಾರತ ಚೀನಾ ಗಡಿ ಬಿಕ್ಕಟ್ಟಿನ ನಂತರ ಚೀನಾ ಮತ್ತು ಚೀನಾ ವಸ್ತುಗಳ ವಿರುದ್ಧ ಭಾರತದಲ್ಲಿ ದೊಡ್ಡ ಮಟ್ಟದ ಜನಾಕ್ರೋಶವೇ ಹುಟ್ಟಿಕೊಂಡಿದೆ. ಈ ನಡುವೆ ಬಾಯ್ಕಾಟ್ ಚೈನಾ ಎಂಬ ಘೋಷಣೆ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಆದರೆ, ಈ ಜನಾಕ್ರೋಶದ ನಡುವೆಯೇ ಇಂದು ಹೇಳಿಕೆ ನೀಡಿರುವ ದೇಶದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್, “ದೇಶದ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಗಣೇಶನ ಮೂರ್ತಿಯನ್ನೂ ಚೀನಾದಿಂದ ಆಮದು ಮಾಡಿಕೊಳ್ಳಬೇಕೆ? ಎಂಬ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದಾರೆ.

ದೇಶದಲ್ಲಿ ಲಭ್ಯವಿಲ್ಲದ ಮತ್ತು ನಮ್ಮ ಕೈಗಾರಿಕೆಗಳಿಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ತಪ್ಪಲ್ಲ ಎಂದು ಬಿಜೆಪಿಯ ತಮಿಳುನಾಡು ಘಟಕದ ಕಾರ್ಯಕರ್ತರೊಬ್ಬರು ಇಂದು ನಡೆದ ವರ್ಚುವಲ್ ಸಭೆಯಲ್ಲಿ ವಾದವೊಂದನ್ನು ಮುಂದಿಟ್ಟಿದ್ದರು.

ಇದರ ಬೆನ್ನಿಗೆ ಆತ್ಮನಿರ್ಭರ್ ಭಾರತ ಅಭಿಯಾನ್ ಉಪಕ್ರಮದ ಕುರಿತು ತನ್ನ ಅಭಿಪ್ರಾಯವನ್ನು ಹೊರಹಾಕಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆಮದು ಪ್ರಕ್ರಿಯೆ ದೇಶದ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಉದ್ಯೋಗವನ್ನು ಸೃಷ್ಟಿಸುತ್ತದೆ. ಹೀಗಾಗಿ ಯಾವುದೇ ವಸ್ತುಗಳನ್ನು ಯಾವ ದೇಶದಿಂದ ಬೇಕಿದ್ದರೂ ಆಮದು ಮಾಡಿಕೊಳ್ಳಬಹುದು” ಎಂದು ತಿಳಿಸಿದ್ದಾರೆ.

“ಆದಾಗ್ಯೂ, ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಬೆಳವಣಿಗೆಗಳನ್ನು ಬೆಂಬಲಿಸದ ಮತ್ತು ದೇಶಕ್ಕೆ ಯಾವುದೇ ಪ್ರಯೋಜನವಾಗದ ವಸ್ತುಗಳ ಆಮದಿನಿಂದ ಯಾವುದೇ ಉಪಯೋಗವಿಲ್ಲ. ಪ್ರತಿ ವರ್ಷ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಕುಂಬಾರರಿಂದ ಜೇಡಿಮಣ್ಣಿನಲ್ಲಿ ಮಾಡಿದ ಗಣೇಶ ವಿಗ್ರಹಗಳನ್ನು ಸಾಂಪ್ರದಾಯಿಕವಾಗಿ ಖರೀದಿಸಲಾಗುತ್ತಿದೆ.

ಆದರೆ ಇಂದು ಗಣೇಶ ವಿಗ್ರಹಗಳನ್ನು ಸಹ ಚೀನಾದಿಂದ ಏಕೆ ಆಮದು ಮಾಡಿಕೊಳ್ಳಲಾಗುತ್ತಿದೆ? ಇಂತಹ ಪರಿಸ್ಥಿತಿ ಏಕೆ ಬಂದಿದೆ? ನಾವು ಜೇಡಿಮಣ್ಣಿನಿಂದ ಗಣೇಶ ವಿಗ್ರಹವನ್ನು ಮಾಡಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಸೋಪ್ ಬಾಕ್ಸ್, ಪ್ಲಾಸ್ಟಿಕ್ ವಸ್ತುಗಳು ಅಥವಾ ಪೂಜಾ ಉದ್ದೇಶಗಳಿಗಾಗಿ ಬಳಸುವ ಧೂಪದ್ರವ್ಯದ ತುಂಡುಗಳಂತೆ ಪ್ರತಿದಿನ ಬಳಸುವ ಗೃಹೋಪಯೋಗಿ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಸ್ವಾವಲಂಬನೆಯನ್ನು ಬೆಂಬಲಿಸುತ್ತದೆಯೇ? ಎಂದು ಆಶ್ಚರ್ಯಪಟ್ಟ ನಿರ್ಮಲಾ ಸೀತಾರಾಮನ್, ಅಂತಹ ಉತ್ಪನ್ನಗಳನ್ನು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸ್ಥಳೀಯವಾಗಿ ತಯಾರಿಸಿದಾಗ ನಿಜಕ್ಕೂ ಸ್ವಾವಲಂಭನೆ ಆಚರಣೆಗೆ ಬರುತ್ತದೆ.

ಸ್ಥಳೀಯವಾಗಿ ತಯಾರಿಸಿದ ಮತ್ತು ಲಭ್ಯವಿರುವ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಇಂತಹ ಪರಿಸ್ಥಿತಿ ಬದಲಾಗಬೇಕು ಮತ್ತು ಸ್ವಾವಲಂಬನೆ ಎಂಬುದು ಆತ್ಮನಿರ್ಭರ್ ಅಭಿಯಾನದ ಹಿಂದಿನ ಮೂಲ ಆಲೋಚನೆಯಾಗಬೇಕು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : ತಾಕತ್ತಿದ್ದರೆ ಭೂ ಹಿಡುವಳಿ ಮಿತಿ ಕಾಯ್ದೆ ಜಾರಿಗೆ ತರಲಿ; ಸಿಎಂ ಗೆ ಸವಾಲು ಹಾಕಿದ ಕಾಗೋಡು ತಿಮ್ಮಪ್ಪ

ಭಾರತದಲ್ಲಿ ಸ್ವಾವಲಂಬನೆ ದೀರ್ಘಕಾಲದ ಅಭ್ಯಾಸವಾಗಿತ್ತು, ಆದರೆ ಅದು ತರುವಾಯ ಮರೆಯಾಗಿದೆ. ಈಗ ಅಭಿಯಾನ್ ಉಪಕ್ರಮವು ಸ್ಥಳೀಯ ಉತ್ಪಾದನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಸ್ವಾವಲಂಬಿ ಭಾರತ (ಆತ್ಮನಿರ್ಭರ್ ಭಾರತ್ ಅಭಿಯಾನ್) ಎಂದರೆ ಆಮದು ಮಾಡಿಕೊಳ್ಳಬಾರದು ಎಂದಲ್ಲ, ಬದಲಾಗಿ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ನೀವು ಅಗತ್ಯವಿರುವ ಯಾವುದೇ ಆಮದುಗಳನ್ನು ದಯವಿಟ್ಟು ಮಾಡಬಹುದು” ಎಂದು ಅವರು ತಿಳಿಸಿದ್ದಾರೆ.
First published: