Lakhimpur Kheri Violence: ಹಿಂಸಾಚಾರದ ವರದಿ ಸಲ್ಲಿಸಿದ ಉತ್ತರಪ್ರದೇಶ; ಪ್ರಕರಣ ತನಿಖೆ ತೃಪ್ತಿಕರವಾಗಿಲ್ಲ ಎಂದ ಸುಪ್ರೀಂಕೋರ್ಟ್!

ಈ ಬಗ್ಗೆ ನಾಳೆಯ ಒಳಗೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ" ಎಂದು ತಾಕೀತು ಮಾಡಿತ್ತು. ಅದರಂತೆ ಇಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್​ಗೆ ವರದಿ ಸಲ್ಲಿಸಿದೆ. ಆದರೆ, ವರದಿ ನೋಡಿದ ಸುಪ್ರೀಂಕೋರ್ಟ್ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
    ನವದೆಹಲಿ: ಅಕ್ಟೋಬರ್ 3 ರಂದು ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದ (Lakhimpur Kheri Violence) ತನಿಖೆ ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಇಂದು ಹೇಳಿದೆ. ಪ್ರಕರಣ ಸಂಬಂಧ ಉತ್ತರ ಪ್ರದೇಶ ಸರ್ಕಾರ ವಸ್ತುಸ್ಥಿತಿ ವರದಿ ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್, "ಅತ್ಯುನ್ನತ ಪೊಲೀಸ್ ಅಧಿಕಾರಿ ಪ್ರಕರಣದ ಸಾಕ್ಷ್ಯವನ್ನು ರಕ್ಷಿಸಬೇಕು. ಆರೋಪಿಯನ್ನು ತಕ್ಷಣವೇ ಏಕೆ ಬಂಧಿಸಲಿಲ್ಲ? ಅವರನ್ನು ಇತರ ನಾಗರಿಕರಂತೆ ಏಕೆ ಪರಿಗಣಿಸುವುದಿಲ್ಲ? ಸ್ಥಳೀಯ ಪೊಲೀಸರು ಈ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದು ಹೇಳಿ, ನ್ಯಾಯಾಲಯವು ರಜೆಯ ನಂತರ ಅಂದರೆ ಅಕ್ಟೋಬರ್ 20ರ ಬೆಳಿಗ್ಗೆ 10: 30 ಕ್ಕೆ ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತು.

    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ, ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ಸೂಚಿಸಲಾಗಿದ್ದು, ಬೆಳಿಗ್ಗೆ 10.30 ರವರೆಗೆ ಪೊಲೀಸ್ ಠಾಣೆಗೆ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ. ತನಿಖಾ ತಂಡದ ಮುಖ್ಯಸ್ಥರಾಗಿರುವ ಇನ್ಸ್‌ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದಿದ್ದಾರೆ ಎಂದು ಅವರು ಹೇಳಿದರು. "ಆಶಿಶ್ ಮಿಶ್ರಾ ಇಲ್ಲಿಯವರೆಗೆ ಬಂದಿಲ್ಲ" ಎಂದು ಅಧಿಕೃತ ಮೂಲವು ಬೆಳಿಗ್ಗೆ 10.30 ರ ಸುಮಾರಿಗೆ ತಿಳಿಸಿದೆ. ಪ್ರಕರಣದ ಸಂಬಂಧ ಗುರುವಾರ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ನಂತರ, ಪೊಲೀಸರು ಆತನ ಮನೆಯ ಹೊರಗೆ ನೋಟಿಸ್ ಅಂಟಿಸಿ, ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಆಶಿಶ್ ಅವರ ಸಹೋದರ, ಅಶಿಶ್ ಇಂದು ತನಿಖೆಗೆ ಹಾಜರಾಗುತ್ತಾರೆ ಮತ್ತು ಅವರು ಲಖಿಂಪುರದಲ್ಲಿಯೇ ಇದ್ದಾರೆ ಎಂದು ಭರವಸೆ ನೀಡಿದ್ದಾರೆ.

    ಪೊಲೀಸರ ಮುಂದೆ ಹಾಜರಾಗದ ಆಶಿಶ್

    ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಆದರೆ, ಪೊಲೀಸರು ನೀಡಿದ್ದ ಗಡುವನ್ನು ತಪ್ಪಿಸಿಕೊಂಡಿದ್ದಾನೆ. ನಾಲ್ವರು ರೈತರು ಸೇರಿದಂತೆ ಎಂಟು ಜನರನ್ನು ಕೊಂದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಆತ ತಲೆಮರೆಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ನಡೆದ ಘಟನೆಯನ್ನು ತನಿಖೆ ಮಾಡುವ ತಂಡದ ಮುಖ್ಯಸ್ಥರಾಗಿರುವ ಉಪ ಇನ್ಸ್‌ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಕಾಯುತ್ತಿದ್ದರು. ಆದರೆ ಅವರು ಮಧ್ಯಾಹ್ನ 1 ಗಂಟೆಯಾದರೂ ಹಾಜರಾಗಲಿಲ್ಲ ಎಂದು ಸ್ಥಳದ ಮೂಲಗಳು ತಿಳಿಸಿವೆ. "ಆಶಿಶ್ ಮಿಶ್ರಾ ಇದುವರೆಗೂ ಬಂದಿಲ್ಲ" ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ಇದನ್ನು ಓದಿ: Lakhimpur Kheri Violence: ಸಚಿವರ ಮಗ ಮಿಶ್ರಾನನ್ನು ವಿಚಾರಣೆಗೆ ಕರೆಸಿಕೊಂಡ ಪೊಲೀಸರು; ಪಂಜಾಬ್ ಗಡಿಯಲ್ಲಿ ಸಿಧು ಬಂಧನ

    ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಸುಪ್ರೀಂಕೋರ್ಟ್

    ನಾಲ್ವರು ರೈತರು ಸೇರಿ ಒಟ್ಟು ಎಂಟು ಮಂದಿ ಮೃತಪಟ್ಟ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಚ ನ್ಯಾಯಾಲಯವು (Supreme Court) ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು ಅದರ ವಿಚಾರಣೆ ಆರಂಭಿಸಿದೆ. ಗುರುವಾರ ವಿಚಾರಣೆ ವೇಳೆ ಕೋರ್ಟ್​, "ಲಖೀಂಪುರ್​ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಉತ್ತರಪ್ರದೇಶ ಪೊಲೀಸರು ಎಷ್ಟು ಜನರನ್ನು ಬಂಧಿಸಿದ್ದೀರಿ? ಈ ಬಗ್ಗೆ ನಾಳೆಯ ಒಳಗೆ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ" ಎಂದು ತಾಕೀತು ಮಾಡಿತ್ತು. ಅದರಂತೆ ಇಂದು ಉತ್ತರ ಪ್ರದೇಶ ಸರ್ಕಾರ ಕೋರ್ಟ್​ಗೆ ವರದಿ ಸಲ್ಲಿಸಿದೆ. ಆದರೆ, ವರದಿ ನೋಡಿದ ಸುಪ್ರೀಂಕೋರ್ಟ್ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಉತ್ತರ ಪ್ರದೇಶ ಸರ್ಕಾರಕ್ಕೆ ಚಾಟಿ ಬೀಸಿದೆ.
    Published by:HR Ramesh
    First published: