ಳೂಡೆಹ್ರಾಡೂನ್: ಉತ್ತರಾಖಂಡದ (Uttarakhand) ಪ್ರಸಿದ್ಧ ಪಟ್ಟಣ ಜೋಶಿಮಠ (Joshimath) ಮುಳುಗುತ್ತಿದ್ದು, ಇದುವರೆಗೆ 185 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಪಟ್ಟಣದಲ್ಲಿ ಅಸುರಕ್ಷಿತ ಕಟ್ಟಡಗಳನ್ನು ತೆರವು ಕಾರ್ಯ ನಡೆಯುತ್ತಿದೆ. ಆದರೆ ತಜ್ಞರ ಅಭಿಪ್ರಾಯ ಪ್ರಕಾರ ಜೋಶಿಮಠ ಉತ್ತರಾಖಂಡದಲ್ಲಿ ಅಪಾಯದಲ್ಲಿರವ ಏಕೈಕ ಹಿಮಾಲಯ ಪಟ್ಟಣವಲ್ಲ(Himalayan town). ಇನ್ನು ಅನೇಕ ಪಟ್ಟಗಳು ಇದೇ ರೀತಿಯ ಸಮಸ್ಯೆಗೆ ಒಳಗಾಗಿವೆ ಎಂದು ಹೇಳಿದ್ದಾರೆ. ಈಗಾಗಲೇ ಜೋಶಿಮಠದಲ್ಲಿ ಸಂಭವಿಸಿದ ಭೂ ಕುಸಿತದಿಂದ (Landslide) ಪಟ್ಟಣದ ನೂರಾರು ಕಟ್ಟಡಗಳಲ್ಲಿ ಅಪಾಯಕಾರಿ ಬಿರುಕುಗಳು ರೂಪುಗೊಂಡಿವೆ. ಸುಮಾರು 4000 ಮಂದಿಯನ್ನು ಸ್ಥಳಾಂತರಗೊಳಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation) ಈ ಕುರಿತು ಕೆಲವು ಉಪಗ್ರಹ ಚಿತ್ರಗಳು ಬಿಡುಗಡೆ ಮಾಡಿದ್ದು, ಜೋಶಿಮಠವು ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದೆ ಎಂದು ಬಹಿರಂಗಪಡಿಸಿದೆ.
ನೈನಿತಾಲ್ನ ಕುಮೌನ್ ವಿಶ್ವವಿದ್ಯಾಲಯದ ಭೂವಿಜ್ಞಾನದ ಪ್ರಾಧ್ಯಾಪಕ ರಾಜೀವ್ ಉಪಾಧ್ಯಾಯ ಅವರ ಪ್ರಕಾರ, ಜೋಶಿಮಠವು ಹಿಮಾಲಯ ಪ್ರದೇಶದಲ್ಲಿ ಮುಳುಗುವ ಅಪಾಯದಲ್ಲಿರುವ ಏಕೈಕ ಪಟ್ಟಣವಲ್ಲ. ಉತ್ತರಾಖಂಡದ ಉತ್ತರ ಭಾಗದಲ್ಲಿರುವ ಹಳ್ಳಿಗಳು ಮತ್ತು ಪಟ್ಟಣಗಳು ಅಪಾಯದಲ್ಲಿವೆ. ಈ ಪ್ರದೇಶ ದುರ್ಬಲವಾದ ಪರಿಸರ ವ್ಯವಸ್ಥೆಯಿಂದಾಗಿ ಬಹಳ ಸೂಕ್ಷ್ಮವಾಗಿದ್ದು, ಅಪಾಯದ ಅಂಚಿನಲ್ಲಿವೆ ಎಂದು ಹೇಳಿದ್ದಾರೆ.
ಭೂಮಿ ಜಾರುವ ಸಾಧ್ಯತೆ
" ಹಳೆಯ ಭೂಕುಸಿತದ ಅವಶೇಷಗಳ ಮೇಲೆ ನಿರ್ಮಿಸಲಾದ ಅನೇಕ ಕಟ್ಟಡಗಳು ಈಗಾಗಲೇ ನೈಸರ್ಗಿಕ ಒತ್ತಡದಲ್ಲಿವೆ . ಅಲ್ಲದೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ನಿರ್ಮಾಣ ಮಾಡಿರುವ ರಸ್ತೆ, ಸೇತುವೆಗಳು, ಜಲಾಶಯಗಳು ಈ ಪ್ರದೇಶಕ್ಕೆ ಮತ್ತಷ್ಟು ಒತ್ತಡವನ್ನುಂಟು ಮಾಡುತ್ತಿವೆ " ಎಂದು ಅವರು ಹೇಳಿದ್ದಾರೆ. ಇಂತಹ ಪ್ರದೇಶದಲ್ಲಿ ಹೆಚ್ಚಿನ ಯಾಂತ್ರಿಕ ಚಟುವಟಿಕೆ ಮಾಡಿದರೆ, ಭೂಮಿಯು ಜಾರುವ ಸಾಧ್ಯತೆಯಿದ್ದು, ಇಡೀ ಪ್ರದೇಶವು ಕುಸಿತಕ್ಕೆ ಗುರಿಯಾಗುತ್ತದೆ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: Joshimath: 12 ದಿನಗಳಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ, ಫೋಟೋ ಬಿಡುಗಡೆ ಮಾಡಿದ ಇಸ್ರೋ
ಜೋಶಿಮಠ ಹೊರತುಪಡಿಸಿ ಅಪಾಯದಲ್ಲಿರುವ ಪಟ್ಟಣಗಳು
ಗರ್ವಾಲ್ ಜಿಲ್ಲೆಯ ತೆಹ್ರಿ
ತೆಹ್ರಿ, ಗರ್ವಾಲ್ ಜಿಲ್ಲೆಯು ಜನಪ್ರಿಯ ಪ್ರವಾಸಿ ತಾಣವಾಗಿದೆ. ಇದು ಭಾರತದ ಅತಿ ಎತ್ತರದ ಅಣೆಕಟ್ಟಾಗಿದ್ದು, ಅತಿದೊಡ್ಡ ಜಲವಿದ್ಯುತ್ ಉತ್ಪಾದನೆ ಮಾಡುವ ಅಣೆಕಟ್ಟಾಗಿದೆ. ಈ ಜಿಲ್ಲೆಯಲ್ಲಿ ಕೆಲವು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸರಕಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ತೆಹ್ರಿ ಸರೋವರದ ಪಕ್ಕದ ಹಳ್ಳಿಗಳಲ್ಲಿ ಭೂಕುಸಿತ ವರದಿಯಾಗಿದೆ.
ಮನ
ಚೀನಾ ಗಡಿಯಲ್ಲಿರುವ 'ಕೊನೆಯ ಭಾರತೀಯ ಗ್ರಾಮ' ಎಂದು ಕರೆಯಲ್ಪಡುವ ಮನ ಗ್ರಾಮವು ಪ್ರಮುಖ ಮಿಲಿಟರಿ ಸ್ಥಳವಾಗಿದೆ. ಹಿಂದೂ ಯಾತ್ರಾ ಸ್ಥಳಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಯೋಜನೆಯ ಭಾಗವಾಗಿ ರಾಷ್ಟ್ರೀಯ ಹೆದ್ದಾರಿಯೊಂದಿಗೆ ಜೋಡಿಸಲು ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಈ ಪ್ರದೇಶದಲ್ಲಿ ಯೋಜನೆಗಾಗಿ ಮರಗಳನ್ನು ಕಡಿಯುವುದು ಭೂಕುಸಿತದ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪರಿಸರವಾದಿಗಳು ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಧರಾಸು
ಭೂಕುಸಿತದ ಅಪಾಯವನ್ನು ಎದುರಿಸುತ್ತಿರುವ ಪಟ್ಟಣಗಳಲ್ಲಿ ಧರಾಸು ಕೂಡ ಒಂದಾಗಿದೆ. ಈ ಪಟ್ಟಣವು ನಿರ್ಣಾಯಕ ಸ್ಥಳವಾಗಿದ್ದು, ವಿವಾದಿತ ಹಿಮಾಲಯದ ಗಡಿಗೆ ಸೇನಾಪಡೆ ಮತ್ತು ಸಾಮಾಗ್ರಿಗಳನ್ನು ಸ್ಥಳಾಂತರಿಸಲು ಸ್ಥಳೀಯರಿಗೆ ಮತ್ತು ಸೇನೆಗೆ ಪ್ರಮುಖವಾದ ಸ್ಥಳವಾಗಿದೆ.
ಹರ್ಷಿಲ್
ಈ ಪಟ್ಟಣವು ಮಿಲಿಟರಿ ಕಾರ್ಯಾಚರಣೆಗಳಿಗೆ ಮತ್ತು ಹಿಮಾಲಯ ತೀರ್ಥಯಾತ್ರೆಗೆ ಮತ್ತೊಂದು ನಿರ್ಣಾಯಕ ಸ್ಥಳವಾಗಿದೆ. 2013 ರಲ್ಲಿ ಸಂಭವಿಸಿದ ಪ್ರವಾಹದ ಸಮಯದಲ್ಲಿ ಈ ಪ್ರದೇಶವು ತೀವ್ರವಾಗಿ ಹಾನಿಗೊಳಗಾಗಿತ್ತು. ವರದಿಯ ಪ್ರಕಾರ ಹರ್ಷಿಲ್ ಅಪಾಯದ ಸಂಧರ್ಭದಲ್ಲಿ ಜನರನ್ನು ಸ್ಥಳಾಂತರಿಸುತ್ತಿದ್ದ ಸ್ಥಳಗಳಲ್ಲಿ ಇದು ಪ್ರಮುಖ ಕೇಂದ್ರವಾಗಿತ್ತು.
ಗೌಚಾರ್
ಜೋಶಿಮಠದಿಂದ ನೈಋತ್ಯಕ್ಕೆ 100 ಕಿಮೀ ಮತ್ತು ಇಂಡೋ-ಚೀನಾ ಗಡಿಯಿಂದ 200 ಕಿಮೀ ದೂರದಲ್ಲಿದೆ. ಗೌಚಾರ್ ಪ್ರಮುಖ ನಾಗರಿಕ ಮತ್ತು ಮಿಲಿಟರಿ ನೆಲೆಯಾಗಿದ್ದು, ಅಲ್ಲಿ 2013 ರಲ್ಲಿ ಭಾರತೀಯ ವಾಯುಪಡೆಯ ರಕ್ಷಣಾ ಮತ್ತು ಪರಿಹಾರ ಪ್ರಯತ್ನಗಳ ಪ್ರದರ್ಶನಕ್ಕೆ ವೇದಿಕೆಯಾಗಿತ್ತು.
ಪಿತೋರಗಢ
ಈ ಪಟ್ಟಣವು ಹಿಮಾಲಯ ಭಾಗದ ಮತ್ತೊಂದು ಪ್ರಮುಖ ಮಿಲಿಟರಿ ಮತ್ತು ನಾಗರಿಕ ಹಾಗೂ ದೊಡ್ಡ ಆಡಳಿತ ಕೇಂದ್ರವಾಗಿದೆ. ಇದು ದೊಡ್ಡ ವಿಮಾನಗಳಿಗೆ ಅವಕಾಶ ಕಲ್ಪಿಸುವ ಏರ್ಸ್ಟ್ರಿಪ್ ಅನ್ನು ಸಹ ಹೊಂದಿದೆ ಮತ್ತು ಇದು ಮಿಲಿಟರಿಗೆ ನಿರ್ಣಾಯಕವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ