ಮುಂಬೈಗೆ ನೆರೆ ಭೀತಿ, ಹವಾಮಾನ ಇಲಾಖೆ ಎಚ್ಚರಿಕೆ; ಬಾಂಗ್ಲಾ, ಇಂಡೋನೇಷ್ಯಾದಲ್ಲಿ ಪ್ರವಾಹಕ್ಕೆ ಜೀವ ಹಾನಿ

ಮುಂಬೈ ಕರಾವಳಿ ಜಿಲ್ಲೆಗಳಾದ ರಾಯ್‌ಘಡ್‌, ರತ್ನಗಿರಿ, ಸಿಂಧುದುರ್ಗ್ ಮತ್ತು ಮಶ್ಚಿಮ ಮಹಾರಾಷ್ಟ್ರ ಪುಣೆ ಜಿಲ್ಲೆಗಳಿಗೆ ಮುಂಬೈ ಹವಾಮಾನ ಇಲಾಖೆ ಕೇಂದ್ರ ಕಿತ್ತಳೆ ಎಚ್ಚರಿಕೆ ನೀಡಿದ್ದರೆ, ಕೊಲ್ಲಾಪುರ, ಸತಾರಾ, ಔರಂಗಾಬಾದ್ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಿದೆ.

MAshok Kumar | news18-kannada
Updated:July 15, 2020, 1:25 PM IST
ಮುಂಬೈಗೆ ನೆರೆ ಭೀತಿ, ಹವಾಮಾನ ಇಲಾಖೆ ಎಚ್ಚರಿಕೆ; ಬಾಂಗ್ಲಾ, ಇಂಡೋನೇಷ್ಯಾದಲ್ಲಿ ಪ್ರವಾಹಕ್ಕೆ ಜೀವ ಹಾನಿ
ಪ್ರಾತಿನಿಧಿಕ ಚಿತ್ರ.
  • Share this:
ಜುಲೈ ತಿಂಗಳಿನಲ್ಲಿ ಮುಂಬೈನಲ್ಲಿ ಸುರಿಯಬೇಕಿದ್ದ ಶೇ.100ರಷ್ಟು ಮಳೆ ಈಗಾಗಲೇ ಸುರಿದಿದೆ. ಆದರೂ, ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಥಾಣೆ, ಪಾಲ್ಘರ್ ಸೇರಿದಂತೆ ಭಾರತದ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಸಿದೆ.

ಮುಂಬೈ ಕರಾವಳಿ ಜಿಲ್ಲೆಗಳಾದ ರಾಯ್‌ಘಡ್‌, ರತ್ನಗಿರಿ, ಸಿಂಧುದುರ್ಗ್ ಮತ್ತು ಮಶ್ಚಿಮ ಮಹಾರಾಷ್ಟ್ರ ಪುಣೆ ಜಿಲ್ಲೆಗಳಿಗೆ ಮುಂಬೈ ಹವಾಮಾನ ಇಲಾಖೆ ಕೇಂದ್ರ ’ಕಿತ್ತಳೆ’ ಎಚ್ಚರಿಕೆ ನೀಡಿದ್ದರೆ, ಕೊಲ್ಲಾಪುರ, ಸತಾರಾ, ಔರಂಗಾಬಾದ್ ಜಿಲ್ಲೆಗಳಿಗೆ ’ಹಳದಿ’ ಎಚ್ಚರಿಕೆ ನೀಡಿದೆ.

ಮುಂಬೈನ ಉಪನಗರ ಸ್ಯಾಂಟಾಕ್ರೂಜ್ ಹವಾಮಾನ ಬ್ಯೂರೋದಲ್ಲಿ ಮಂಗಳವಾರ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರ ಅವಧಿಯಲ್ಲಿ 86.6 ಮಿ.ಮೀ ಮಳೆಯಾಗಿದೆ. ಕೊಲಾಬಾ ಹವಾಮಾನ ಕೇಂದ್ರದಲ್ಲಿ ಇದೇ ಅವಧಿಯಲ್ಲಿ 50.4 ಮಿ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ.

ಈಶಾನ್ಯ ಭಾರತದ ಭಾಗವಾದ ಗೌಹಾಟಿಯಲ್ಲಿ ಈಗಾಗಲೇ ಭಾರಿ ಮಳೆಗೆ ದೊಡ್ಡ ಪ್ರಮಾಣ ಪ್ರವಾಹ ತಲೆದೋರಿದೆ. ಎಲ್ಲಾ ನದಿಗಳು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜನ ಜೀವನ ಅಸ್ತವ್ಯಸ್ತವಾಗಿದ್ದು, ಸಾವಿರಾರು ಜನ ಆಸ್ತಿ-ಪಾಸ್ತಿ ಮನೆ ಮಠ ಕಳೆದುಕೊಂಡು ಬೀದಿಗೆ ಬರುವಂತಾಗಿದೆ. ಹೀಗಾಗಿ ಈ ಎಲ್ಲರನ್ನೂ ಮನೆಗಳನ್ನು ಖಾಲಿ ಮಾಡಿಸಿ ಸುರಕ್ಷಿತ ಗಂಜಿಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಈ ನಡುವೆ ಮುಂದಿನ ದಿನಗಳಲ್ಲಿ ಭಾರತದ ನಾನಾ ಭಾಗಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಅನೇಕರಲ್ಲಿ ಆತಂಕ ಮನೆ ಮಾಡಿದೆ.

ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಲ್ಬಣಗೊಳ್ಳುತ್ತಿದೆ. 10 ಲಕ್ಷಕ್ಕೂ ಹೆಚ್ಚು ಗ್ರಾಮಸ್ಥರು ತಮ್ಮ ಜಾನುವಾರು ಮತ್ತು ಇತರ ವಸ್ತುಗಳ ಜೊತೆಗೆ ಮನೆಗಳನ್ನು ಖಾಲಿ ಮಾಡಿಕೊಂಡು ಸುರಕ್ಷಿತ ಸ್ಥಳಗಳಿಗೆ ತಲುಪುತ್ತಿದ್ದಾರೆ. ಬಾಂಗ್ಲಾದೇಶದ ಪ್ರಮುಖ ನದಿಗಳ ನೀರಿನ ಮಟ್ಟ 20 ಜಿಲ್ಲೆಗಳಲ್ಲಿ ಎರಡು ಡಜನ್ ಪಾಯಿಂಟ್‌ಗಳಿಗಿಂತ ಅಧಿಕವಾಗುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಎಂಟಿಆರ್‌ ಕಂಪೆನಿಯ ಉದ್ಯೋಗಿಗಳಿಗೆ ಕೊರೋನಾ ಸೋಂಕು; ಪ್ರತಿಷ್ಠಿತ ಸಿದ್ದ ಆಹಾರ ಕಂಪೆನಿ ಸೀಲ್‌ಡೌನ್


ಏತನ್ಮಧ್ಯೆ, ಇಂಡೋನೇಷ್ಯಾದ ದಕ್ಷಿಣ ಸುಲಾವೆಸಿ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಕನಿಷ್ಠ 16 ಜನ ಸಾವನ್ನಪ್ಪಿದ್ದಾರೆ ಮತ್ತು 23 ಮಂದಿ ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಸತತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂರು ಪ್ರಮುಖ ನದಿಗಳು ಉಕ್ಕಿ ಹರಿದು ಸೋಮವಾರ ಸಂಜೆ ಪ್ರವಾಹ ಪ್ರಾರಂಭವಾಗಿದ್ದು, ಈ ಪ್ರವಾಹದಿಂದಾಗಿ ಜನ ಜೀವನ ಅಸ್ಥವ್ಯಸ್ತವಾಗಿದೆ. ಹಲವೆಡೆ ಭೂ ಕುಸಿತಗಳೂ ಉಂಟಾಗಿವೆ ಎಂದು ಇಂಡೋನೇಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.
Published by: MAshok Kumar
First published: July 15, 2020, 1:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading