ನಮ್ಮದು ದೇಶದ್ರೋಹ ಅಲ್ಲ, ಬಿಜೆಪಿ ವಿರೋಧಿ ಮೈತ್ರಿಕೂಟ: ಫಾರೂಕ್ ಅಬ್ದುಲ್ಲಾ

ಗುಪ್ಕರ್ ಘೋಷಣೆಯ ಜನತಾ ಮೈತ್ರಿಯನ್ನು ದೇಶದ್ರೋಹದ ಗುಂಪು ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಇದು ಸತ್ಯವಲ್ಲ. ಇದು ಬಿಜೆಪಿ ವಿರೋಧಿ ಮೈತ್ರಿಕೂಟವೇ ಹೊರತು ದೇಶದ್ರೋಹಿ ಸಂಘಟನೆ ಅಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಫಾರೂಕ್ ಅಬ್ದುಲ್ಲಾ

ಫಾರೂಕ್ ಅಬ್ದುಲ್ಲಾ

 • News18
 • Last Updated :
 • Share this:
  ನವದೆಹಲಿ(ಅ. 24): ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವ ಉದ್ದೇಶದಿಂದ ರಚಿಸಿರುವ ಗುಪ್ಕರ್ ಘೋಷಣೆ ಜನತಾ ಮೈತ್ರಿ (PAGD - ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್)ಯ ನಾಯತ್ವವನ್ನು ಆರಿಸಲಾಗಿದೆ. ಮೈತ್ರಿಕೂಟದ ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ ಅವರನ್ನ ಸರ್ವಸಮ್ಮತವಾಗಿ ಆಯ್ಕೆ ಮಾಡಲಾಗಿದೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಉಪಾಧ್ಯಕ್ಷೆಯಾಗಿದ್ಧಾರೆ. ಸಿಪಿಎಂ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರು ಸಂಚಾಲಕರಾದರೆ, ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಸಾಜದ್ ಲೋನೆ ಅವರನ್ನು ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿದೆ. ಮೆಹಬೂಬ ಮುಫ್ತಿ ಅವರ ನಿವಾಸದಲ್ಲಿ ಇಂದು ಕಾಶ್ಮೀರದ ಬಹುತೇಕ ರಾಜಕೀಯ ನಾಯಕರು ಸಭೆ ಸೇರಿದ್ದರು. ಈ ವೇಳೆ, ಜಮ್ಮು-ಕಾಶ್ಮೀರದ ಸ್ಥಾನಮಾನ ರದ್ದಾಗುವ ಮುನ್ನ ಇದ್ದ ಆ ರಾಜ್ಯದ ಧ್ವಜವನ್ನೇ ಮೈತ್ರಿಕೂಟದ ಲಾಂಛನವನ್ನಾಗಿ ಅಳವಡಿಸಿಕೊಳ್ಳಲಾಗಿದೆ.

  ಒಂದು ವರ್ಷದ ಹಿಂದೆ ಸಂವಿಧಾನದಿಂದ 370ನೇ ವಿಧಿಯನ್ನು ಹಿಂಪಡೆದುಕೊಂಡಾಗಿನಿಂದ ಈವರೆಗೆ ಜಮ್ಮು-ಕಾಶ್ಮೀರದ ಆಡಳಿತದ ಬಗ್ಗೆ ಒಂದು ತಿಂಗಳೊಳಗೆ ಶ್ವೇತಪತ್ರ ತರುತ್ತೇವೆ. ಈ ಶ್ವೇತಪತ್ರ ಭಾವನಾತ್ಮಕವಾಗಿರುವುದಿಲ್ಲ. ಬದಲಾಗಿ, ಜಮ್ಮು-ಕಾಶ್ಮೀರ ಮತ್ತು ದೇಶದ ಜನತೆಗೆ ವಾಸ್ತವ ಪರಿಸ್ಥಿತಿಯನ್ನು ತಿಳಿಸುವ ಅಂಶಗಳನ್ನ ಇದು ಒಳಗೊಂಡಿರುತ್ತದೆ. ಜಮ್ಮು-ಕಾಶ್ಮೀರದಲ್ಲಿ ಮಾತ್ರವೇ ಭ್ರಷ್ಟಾಚಾರ ಆಗಿದೆ ಎಂಬ ತಪ್ಪು ಅಭಿಪ್ರಾಯವನ್ನು ಬಿಂಬಿಸುವ ಪ್ರಯತ್ನವಾಗುತ್ತಿದೆ ಎಂದು ಗುಪ್ಕರ್ ಘೋಷಣೆ ಮೈತ್ರಿಕೂಟದ ವಕ್ತಾರ ಸಾಜದ್ ಲೋನೆ ತಿಳಿಸಿದ್ದಾರೆ.

  ಇದೇ ವೇಳೆ, ಗುಪ್ಕರ್ ಘೋಷಣೆಯ ಜನತಾ ಮೈತ್ರಿಕೂಟವನ್ನು ದೇಶದ್ರೋಹ ಗುಂಪು ಎಂಬಂತೆ ಬಿಜೆಪಿ ಬಿಂಬಿಸುತ್ತಿದೆ. ಇದು ಸತ್ಯವಲ್ಲ. ಇದು ಬಿಜೆಪಿ ವಿರೋಧಿ ಮೈತ್ರಿಕೂಟವೇ ಹೊರತು ದೇಶದ್ರೋಹದ ಸಂಘಟನೆ ಅಲ್ಲ ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

  ಇದನ್ನೂ ಓದಿ: ಐಟಿ ರಿಟರ್ನ್ಸ್ ಮತ್ತು ಜಿಎಸ್​ಟಿ ರಿಟರ್ನ್ಸ್ ಸಲ್ಲಿಕೆಯ ಅವಧಿ ಮತ್ತೆ ವಿಸ್ತರಣೆ

  “ಅವರು ದೇಶದ ಸಂವಿಧಾನವನ್ನು ನಾಶ ಮಾಡಲು ಯತ್ನಿಸಿದ್ದಾರೆ. ದೇಶವನ್ನು ವಿಭಜಿಸಲು, ಒಕ್ಕೂಟ ವ್ಯವಸ್ಥೆಯನ್ನು ಮುರಿಯಲು ಅವರು ಪ್ರಯತ್ನಿಸಿದ್ದಾರೆ. ಕಳೆದ ವರ್ಷದ ಆಗಸ್ಟ್ 5ರಂದು ನಾವು ಇದನ್ನ ನೋಡಿದ್ದೇವೆ. ನಮ್ಮ ಈ ಸಂಘಟನೆ (ಪಿಎಜಿಡಿ) ದೇಶದ್ರೋಹ ಗುಂಪು ಅಲ್ಲ. ಜಮ್ಮು ಕಾಶ್ಮೀರ ಮತ್ತು ಲಡಾಖ್ ಜನರಿಗೆ ಅವರ ಹಕ್ಕನ್ನು ಮರಳಿಸಬೇಕೆಂಬುದು ನಮ್ಮ ಗುರಿ. ನಮ್ಮ ಯುದ್ದದ ಉದ್ದೇಶ ಇಷ್ಟೇ. ಇದಕ್ಕಿಂತ ಹೆಚ್ಚಿಲ್ಲ” ಎಂದು ಫಾರುಕ್ ಸ್ಪಷ್ಟಪಡಿಸಿದ್ದಾರೆ.

  ಇನ್ನು, ಗುಪ್ಕರ್ ಘೋಷಣೆಯ ಜನತಾ ಮೈತ್ರಿ ಕಾಶ್ಮೀರದ ಹಳೆಯ ಧ್ವಜವನ್ನೇ ಲಾಂಛನವನ್ನಾಗಿ ಆರಿಸಿಕೊಂಡಿದೆ. ಭಾರತದ ರಾಷ್ಟ್ರಧ್ವಜವನ್ನು ಹಾರಿಸದಿರಲೂ ನಿರ್ಧರಿಸಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರಳಿಸುವವರೆಗೂ ರಾಷ್ಟ್ರಧ್ವಜ ಮುಟ್ಟುವುದಿಲ್ಲ ಎಂದು ಮೆಹಬೂಬ ಮುಫ್ತಿ ಪಣತೊಟ್ಟಿದ್ದಾರೆ.

  ಈ ಬೆಳವಣಿಗೆ ಬಗ್ಗೆ ಕೇಂದ್ರ ಸರ್ಕಾರ ಖಾರವಾಗಿ ಪ್ರತಿಕ್ರಿಯಿಸಿದೆ. ಮೆಹಬೂಬ ಮುಫ್ತಿ ಅವರು ರಾಷ್ಟ್ರಧ್ವಜವನ್ನು ಅಪಮಾನಿಸುತ್ತಿದ್ಧಾರೆ. ಆರ್ಟಿಕಲ್ 370 ಅನ್ನು ಸಂವಿಧಾನಬದ್ಧವಾಗಿಯೇ ಹಿಂಪಡೆಯಲಾಗಿದೆ. ಮತ್ತೆ ಅದನ್ನು ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ಧಾರೆ.

  ಇದನ್ನೂ ಓದಿ: ದಸರಾ ಉಡುಗೊರೆ: ಕೇಂದ್ರ ಸರ್ಕಾರದಿಂದ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ

  ಏನಿದು ಗುಪ್ಕರ್ ಡಿಕ್ಲರೇಶನ್?

  ಫಾರೂಕ್ ಅಬ್ದುಲ್ಲಾ ಅವರ ನಿವಾಸ ಇರುವುದು ಗುಪ್ಕರ್ ರಸ್ತೆಯಲ್ಲಿ. ಕೇಂದ್ರ ಸರ್ಕಾರ 370ನೇ ವಿಧಿ ತೆಗೆದುಹಾಕುವ ಒಂದು ದಿನ ಮುನ್ನ, ಅಂದರೆ 2019ರ ಆಗಸ್ಟ್ 4ರಂದು ಎಲ್ಲಾ ಪ್ರಾದೇಶಿಕ ಪಕ್ಷಗಳ ಸಭೆ ನಡೆದಿತ್ತು. ಅದರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ, ಅಸ್ಮಿತೆ, ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳಲು ಎಲ್ಲಾ ಪಕ್ಷಗಳೂ ಒಗ್ಗೂಡಲು ನಿರ್ಣಯಿಸಿ ಜಂಟಿಯಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಅದೇ ಗುಪ್ಕರ್ ಘೋಷಣೆ ಎಂದು ಪರಿಗಣಿತವಾಗಿದೆ.

  ಅದಾಗಿ ಮಾರನೇ ದಿನವೇ ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಹೋಳು ಮಾಡಿತು. ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಸಾಜದ್ ಲೋನೆ ಸೇರಿದಂತೆ ಕಣಿವೆ ರಾಜ್ಯದ ಬಹುತೇಕ ರಾಜಕೀಯ ಮುಖಂಡರು, ಪ್ರತ್ಯೇಕತಾವಾದಿ ಹೋರಾಟಗಾರರೆಲ್ಲರನ್ನೂ ಬಂಧನದಲ್ಲಿಡಲಾಯಿತು. ಇತ್ತೀಚೆಗಷ್ಟೇ ಕೆಲವರನ್ನು ಬಿಡುಗಡೆಗೊಳಿಸಲಾಗಿದೆ. ಇದರ ಬೆನ್ನಲ್ಲೇ ವಿವಿಧ ರಾಜಕೀಯ ಮುಖಂಡರು ಮತ್ತೆ ಒಗ್ಗೂಡುತ್ತಿದ್ದಾರೆ. ನಿನ್ನೆ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಅವರು ಮೆಹಬೂಬ ಮುಫ್ತಿ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಗುಪ್ಕರ್ ಘೋಷಣೆಯ ಎರಡನೇ ಆವೃತ್ತಿ ಸಿದ್ಧಗೊಂಡಿದೆ.
  Published by:Vijayasarthy SN
  First published: