ನಾನಾ ಅಪರಾಧಗಳನ್ನು ಮಾಡಿ, ಒಮ್ಮೊಮ್ಮೆ ಅಪರಾಧಗಳನ್ನು ಮಾಡದೆಯೇ ಜೈಲು (Prison) ಸೇರುವವರ ಬಗ್ಗೆ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಸಿನಿಮಾ ನೋಡಿದ್ದಕ್ಕೆ ಯಾರನ್ನಾದರೂ ಜೈಲಿಗೆ ದಬ್ಬಲು ಸಾಧ್ಯವೇ..? ಸಾಧ್ಯವಿದೆ..! ಕೇವಲ ಐದು ನಿಮಿಷಗಳ ಕಾಲ ನಿಷೇಧಿತ ಚಲನಚಿತ್ರ (Movie) ವೀಕ್ಷಿಸಿದ್ದಕ್ಕಾಗಿ ಹದಿಹರೆಯದ ಹುಡುಗನೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆಯಂತೆ. ಹಾಗಂತ ಹಾಲಿವುಡ್, ಬಾಲಿವುಡ್ ಸಿನಿಮಾ ಪ್ರೇಮಿಗಳು ಹೆದರಬೇಕಿಲ್ಲ, ಏಕೆಂದರೆ ಈ ಪ್ರಕರಣ ನಡೆದಿರುವುದು ನಮ್ಮ ದೇಶದಲ್ಲಲ್ಲ, ಉತ್ತರ ಕೊರಿಯಾದಲ್ಲಿ.
ಅಲ್ಲಿನ ಯಂಗನ್ ಪ್ರಾಂತ್ಯದ ವಿದ್ಯಾರ್ಥಿಯೊಬ್ಬ ದಕ್ಷಿಣ ಕೊರಿಯಾದ (South Korea) ‘ದ ಅಂಕಲ್’ (The Uncle) ಎಂಬ ಸಿನಿಮಾ ನೋಡಿದ್ದೇ ಮಹಾ ಅಪರಾಧವಾಗಿ, ಈಗ ಜೈಲಿನ ಕಂಬಿ ಎಣಿಸಬೇಕಾಗಿದೆ. ಶತ್ರು ರಾಷ್ಟ್ರದ ಸಿನಿಮಾ ನೋಡಿದ ಅಪರಾಧಕ್ಕಾಗಿ ಆ 14 ವರ್ಷದ ಹುಡುಗನನ್ನು (Student) ನವಂಬರ್ 30ರಂದು, ಹೈಸಾನ್ ಸಿಟಿಯ ಪ್ರಾಥಮಿಕ ಮತ್ತು ಮಧ್ಯಮ ಶಾಲೆಯಲ್ಲಿ ಚಲನಚಿತ್ರ ವೀಕ್ಷಿಸುತ್ತಿದ್ದಾಗ ಬಂಧಿಸಲಾಯಿತು ಎಂದು ಅಲ್ಲಿನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಆ ವಿದ್ಯಾರ್ಥಿ ಈಗ ಜೈಲು ಪಾಲಾಗಿದ್ದು, ಮುಂದಿನ 14 ವರ್ಷಗಳವರೆಗೆ ಅಲ್ಲೇ ಕಠಿಣ ಶಿಕ್ಷೆ ಅನುಭವಿಸಬೇಕಾಗಿದೆ. ಉತ್ತರ ಕೊರಿಯಾದಲ್ಲಿ, ದಕ್ಷಿಣ ಕೊರಿಯಾ ಮತ್ತು ಯುಎಸ್ ಅನ್ನು ‘ಶತ್ರು ದೇಶಗಳು’ ಎಂದು ಪರಿಗಣಿಸಲಾಗಿದ್ದು, ಅಲ್ಲಿಂದ ಬರುವ ಎಲ್ಲಾ ರೀತಿಯ ಸಾಂಸ್ಕೃತಿಕ ಸಾಮಾಗ್ರಿಗಳ ಮೇಲೆ ನಿಷೇಧ ಹೇರಲಾಗಿದೆ.
ಈ ನಿಷೇಧ ಅಂತಹ ವಸ್ತುಗಳ ಆಮದು ಮತ್ತು ಬಳಕೆ ಎರಡಕ್ಕೂ ಅನ್ವಯಿಸುತ್ತದೆ. ಅಂತಹ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವುದು ಅಲ್ಲಿ ಅಚ್ಚರಿಯ ಸಂಗತಿಯಲ್ಲ.
“5 ವರ್ಷಗಳಿಗಿಂತ ಹೆಚ್ಚು ಮತ್ತು 15 ವರ್ಷಕ್ಕಿಂತ ಕಡಿಮೆ ಅವಧಿಗೆ, ದಕ್ಷಿಣ ಕೊರಿಯಾದ ಸಿನಿಮಾಗಳು, ರೆಕಾರ್ಡಿಂಗ್ಗಳು, ಸಂಕಲನಗಳು, ಪುಸ್ತಕಗಳು, ಹಾಡುಗಳು, ವರ್ಣಚಿತ್ರಗಳು ಮತ್ತು ಫೋಟೋಗಳನ್ನು ನೇರವಾಗಿ ನೋಡಿದ, ಕೇಳಿದ ಅಥವಾ ಇಟ್ಟುಕೊಂಡವರಿಗೆ” ಅಲ್ಲಿನ ಸರಕಾರವು “ತಿದ್ದುಪಡಿ ಕಾರ್ಮಿಕ” ಶಿಕ್ಷೆ ನಿಗದಿಪಡಿಸಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮವು ವರದಿ ಮಾಡಿದೆ.
ಉತ್ತರ ಕೊರಿಯಾದ ಅಧಿಕಾರಿಗಳು ಚರ್ಮದ ಟ್ರೆಂಚ್ ಕೋಟುಗಳನ್ನು ಕೂಡ ನಿಷೇಧಿಸಿದ್ದಾರಂತೆ. ಆ ಕೋಟ್ ಅಲ್ಲಿನ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಪ್ರಧಾನ ಶೈಲಿಯಾಗಿ ಮಾರ್ಪಟ್ಟಿದ್ದೆ ಈ ನಿಷೇಧಕ್ಕೆ ಕಾರಣವಂತೆ. ವರದಿಯ ಪ್ರಕಾರ, ಈ ಕೋಟನ್ನು ಅಧ್ಯಕ್ಷರು 2019ರಲ್ಲಿ ಮೊದಲ ಬಾರಿಗೆ ಧರಿಸಿದ ನಂತರ ಅದು ಕೊರಿಯಾದ ಗಣ್ಯ ವರ್ಗದಲ್ಲಿ ಜನಪ್ರಿಯವಾಯಿತು.
ನಿಜವಾದ ಚರ್ಮ ಖರೀದಿಸುವ ಸಾಮರ್ಥ್ಯ ಹೊಂದಿರುವ ಅವರು ಅಧ್ಯಕ್ಷರಿಗೆ ತಮ್ಮ ನಿಷ್ಠೆ ತೋರಿಸಲು ಉತ್ಸುಕರಾದರು. ಕೆಲವು ಕಾಲದ ನಂತರ ಅದನ್ನೇ ಹೋಲುವ ಕಡಿಮೆ ಗುಣಮಟ್ಟದ ಅಥವಾ ನಕಲಿ ಕೋಟುಗಳು ಮಾರುಕಟ್ಟೆಯಲ್ಲಿ ಜನಪ್ರಿಯವಾದವು. ಅದನ್ನು ಮಾರುವ ವ್ಯಾಪಾರಿಗಳು ಮತ್ತು ಧರಿಸುವ ಜನರು ಈಗ ಅಧಿಕಾರಿಗಳಿಂದ ಶಿಸ್ತುಕ್ರಮ ಎದುರಿಸುತ್ತಿದ್ದಾರೆ.
ಇಂಟರ್ನ್ಯಾಶನಲ್ ಬ್ಯುಸಿನೆಸ್ ಟೈಮ್ಸ್ ವರದಿಯ ಪ್ರಕಾರ, ನವೆಂಬರ್ನಲ್ಲಿ ಈ ಕೋಟ್ ಅನ್ನು ಕಿಮ್ ಸಹೋದರಿ ಯೋ ಜಾಂಗ್ ಧರಿಸಿದ ನಂತರ, ಅದು ಮಹಿಳೆಯರಲ್ಲಿ ಕೂಡ ಜನಪ್ರಿಯವಾಯಿತು. ಆ ಕೋಟ್ನ ಅಗ್ಗದ ಅನುಕರಣೆಗಳ ಮೇಲೆ ಇದೀಗ ಶಿಸ್ತು ಕ್ರಮ ವಿಧಿಸಲಾಗಿದೆ.ಈ ಬಗ್ಗೆ ತಿಳಿದಿರುವ ಮೂಲಗಳು, ಇದು “ ಅತ್ಯಂತ ಘನತೆಯ ಅಧಿಕಾರಕ್ಕೆ ಸವಾಲು ಮಾಡುವ ಅಶುದ್ಧ ಟ್ರೆಂಡ್” ಎಂದು ರೇಡಿಯೋ ಫ್ರೀ ಏಷ್ಯಾಗೆ ತಿಳಿಸಿವೆ.
ದೇಶದ ಯುವಕರ ಮೇಲೆ ‘ಬಂಡವಾಳಶಾಹಿ ಜೀವನ ಶೈಲಿ’ ಮತ್ತು ಪಾಶ್ಚಿಮಾತ್ಯ ಪ್ರಭಾವಗಳನ್ನು ತಡೆಯಲು ಅಧ್ಯಕ್ಷ ಕಿಮ್ ಜಾಂಗ್ ಉನ್ , ಮೈಗಂಟುವ ಜೀನ್ಸ್, ಕ್ರೀಡಾ ಮಲ್ಲೆಟ್ ಕೇಶ ಶೈಲಿ ಮತ್ತು ಕೆಲವು ದೇಹಕ್ಕೆ ಚುಚ್ಚಿಸಿಕೊಳ್ಳುವ ಶೈಲಿಗಳ ಮೇಲೆ ನಿಷೇಧ ಹೇರಿದ್ದಾರೆ. “ಬಂಡವಾಳಶಾಹಿ ಸಂಷ್ಕೃತಿ ದೇಶದೊಳಗೆ ನುಗ್ಗುವುದನ್ನು ತಪ್ಪಿಸಲು” ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ ಎಂದು ಅಲ್ಲಿನ ರಾಜ್ಯ ಪತ್ರಿಕೆ ದೇಶವನ್ನು ಎಚ್ಚರಿಸಿದೆ ಎಂದು ವರದಿಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ