Korea Talks: ದಕ್ಷಿಣ ಕೊರಿಯಾ ಜೊತೆ ಮಾತುಕತೆಗೆ ಸಿದ್ಧ, ಷರತ್ತುಗಳು ಅನ್ವಯ ಎಂದ ಉತ್ತರ ಕೊರಿಯಾ 

North and South Korea: ತಮಗೇನೂ ಶಾಶ್ವತವಾಗಿ ಯುದ್ಧ ನಡೆಯಲಿ ಎಂಬ ಅಪೇಕ್ಷೆ ಇಲ್ಲ. ಮಾತನಾಡುವ ಮೂಲಕ ಉಭಯ ದೇಶಗಳು ಸಮಸ್ಯೆ ಬಗೆಹರಿಸಿಕೊಳ್ಳುವುದಿದ್ದರೆ ಖಂಡಿತಾ ತಾವು ತಯಾರಾಗಿದ್ದೇವೆ ಎಂದು ಉತ್ತರ ಕೊರಿಯಾ ತಿಳಿಸಿದೆ. ಆದರೆ ಇದಕ್ಕಾಗಿ ಒಂದಷ್ಟು ಷರತ್ತುಗಳನ್ನು ವಿಧಿಸಿದೆ.

ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು-2018ರ ಚಿತ್ರ

ಉತ್ತರ ಮತ್ತು ದಕ್ಷಿಣ ಕೊರಿಯಾ ನಾಯಕರು-2018ರ ಚಿತ್ರ

 • Share this:
  ಬದ್ಧದ್ವೇಷಿಗಳಂತಿದ್ದ ಉತ್ತರ-ದಕ್ಷಿಣ ಕೊರಿಯಾಗಳು (North Korea) ಅಚ್ಚರಿಯ ರೀತಿಯಲ್ಲಿ ಮತ್ತೆ ತಮ್ಮ ಸ್ನೇಹ ಸಂಬಂಧವನ್ನು ಮುಂದುವರೆಸಲು ನಾನಾ ಪ್ರಯತ್ನಗಳನ್ನು ಮಾಡುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್, ದಕ್ಷಿಣ ಕೊರಿಯಾದೊಂದಿಗೆ (South Korea) ದ್ವಿಪಕ್ಷೀಯ ಮಾತುಕತೆ (Bilateral Talks) ನಡೆಸಲು ಸಿದ್ಧ, ಆದರೆ ಕೆಲವು ಷರತ್ತುಗಳು ಅನ್ವಯ (Conditions Apply) ಎಂದು ಘೋಷಣೆ ಮಾಡಿದ್ದಾರೆ. ಅಮೆರಿಕದ ಜೊತೆ ಸೇರಿ ರಾಜತಾಂತ್ರಿಕ ಒತ್ತಡ ಹೇರುವ ನಿಲುವು ಕೈಬಿಡುವುದು ಹಾಗೂ ಉತ್ತರ ಕೊರಿಯಾಗೆ ದಕ್ಷಿಣ ಕೊರಿಯಾ ಬದ್ಧತೆ ತೋರಿದರೆ ಮಾತ್ರ ಮಾತುಕತೆ ನಡೆಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ಹೇಳಿಕೆ ನೀಡಿದ್ದಾರೆ.

  ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಾಯ್ ಇನ್ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡುವಾಗ 1950ರಿಂದ 53ರವರೆಗೆ ನಡೆದಿದ್ದ ಕೊರಿಯಾ ಯುದ್ಧಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ.. ಇದನ್ನ ಶೀಘ್ರವೇ ಶಾಶ್ವತವಾಗಿ ಕೊನೆಗಾಣಿಸಲಾಗುವುದು ಅಂತ ಘೋಷಣೆ ಮಾಡಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿಮ್ ಸಹೋದರಿ ಕಿಮ್ ಯೋ ಜಾಂಗ್  ಬಲವಂತವಾಗಿ ಮುಖದ ಮೇಲೆ ನಗು ತರಿಸಿಕೊಳ್ಳುವುದು, ಫೋಟೋಗಾಗಿ ಯುದ್ಧದ ಅಂತ್ಯದ ಘೋಷಣೆಗಳನ್ನು  ಓದುವುದು ಯಾರಿಗಾದರೂ ಅಗತ್ಯ ಇರಬಹುದು ಎಂದು ದಕ್ಷಿಣ ಕೊರಿಯಾ ಅಧ್ಯಕ್ಷರ ಘೋಷಣೆ ಬಗ್ಗೆ ಕಿಮ್ ಯೋ ಜಾಂಗ್ ವ್ಯಂಗ್ಯ ಮಾಡಿದ್ದಾರೆ.

  ಕಿಮ್ ಯೋ ಜಾಂಗ್ ಕೂಡಾ ಇದೇ ಹೇಳಿದ್ದಾರೆ

  ಇನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದ ಯುದ್ಧವನ್ನು ಕೇವಲ ಘೋಷಣೆಯೊಂದಿಗೆ ಮುಕ್ತಾಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹದಗೆಟ್ಟಿರುವ ಸಂಬಂಧವನ್ನು ಹೇಗೆ ಸುಧಾರಿಸುವುದು ಮತ್ತು ಅದನ್ನು ಮತ್ತಷ್ಟು ಉತ್ತಮ ಪಡಿಸುವುದು ಹೇಗೆ ಎನ್ನುವುದರ ಬಗ್ಗೆ ದಕ್ಷಿಣ ಕೊರಿಯಾದ ಜೊತೆ ಉತ್ತರ ಕೊರಿಯಾವು ಕೆಲವೊಂದು ಷರತ್ತುಗಳ ನಡುವೆ ಮಾತುಕತೆ ನಡೆಸಲು ಸಿದ್ದವಿದೆ ಅಂತ ಕಿಮ್ ಯೋ ಜಾಂಗ್ ತಿಳಿಸಿದ್ದಾರೆ.

  ಪರಿಶೀಲನೆ ನಡೆಸಬೇಕಾಗಿದೆ: ದಕ್ಷಿಣ ಕೊರಿಯಾ

  ಇನ್ನು ಉತ್ತರ ಕೊರಿಯಾ ನೀಡಿರುವ ಮಾತುಕತೆ ಆಹ್ವಾನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ಕೊರಿಯಾದ ಸಚಿವರು,  ಕಿಮ್ ಯೋ ಜಾಂಗ್ ನೀಡಿರುವ ಹೇಳಿಕೆಯನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ದಕ್ಷಿಣ ಕೊರಿಯಾ ಸಹ ಉತ್ತರ ಕೊರಿಯಾದ ಜೊತೆಗಿನ ಸಂಬಂಧವನ್ನು ಪುನಃ ಸ್ಥಾಪಿಸಲು ತನ್ನ ಪ್ರಯತ್ನಗಳನ್ನು ಮುಂದುವರೆಸಲಿದೆ ಅಂತ ತಿಳಿಸಿದರು.

  ಕ್ಷಿಪಣಿ ಪರೀಕ್ಷೆ

  ಇನ್ನು ಕಳೆದವಾರ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿದ ಕೆಲವೇ ಅಂತರದಲ್ಲಿ ದಕ್ಷಿಣ ಕೊರಿಯಾ ಸಹ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು. ಜೊತೆಗೆ ದಕ್ಷಿಣ ಕೊರಿಯ ಮತ್ತು ಅಮೆರಿಕಾ ಒಂದಾಗಿ ಉತ್ತರ ಕೊರಿಯ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿ,  ಎರಡು ದೇಶಗಳು ಜಂಟಿ ಸಮರಾಭ್ಯಾಸದಲ್ಲಿ ತೊಡಗಿವೆ . ಅಲ್ಲದೆ ಉ.ಕೊರಿಯ ನ್ಯೂಕ್ಲಿಯರ್ ಶಸ್ತ್ರಾಸ್ತ್ರ ಯೋಜನೆಯಲ್ಲಿ ತೊಡಗಿದ್ದರಿಂದ ಅಮೆರಿಕ ನಿರ್ಬಂಧ ವಿಧಿಸಿತ್ತು. ಅದನ್ನು ಹಿಂಪಡೆಯುವಂತೆ ಮಾಡಲು ತಲೆಕೆಡಿಸಿಕೊಂಡಿರುವ ಉತ್ತರ ಕೊರಿಯಾ, ದಕ್ಷಿಣ ಕೊರಿಯಾದ ಜೊತೆ ಮಾತುಕತೆ ನಡೆಸಲು ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ.

  2018ರಲ್ಲೇ ಆರಂಭವಾಗಿತ್ತು, ಆದರೆ ಯಶಸ್ವಿಯಾಗಿರಲಿಲ್ಲ

  ಇನ್ನು 2018 ರಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ದಕ್ಷಿಣ ಕೊರಿಯಾಗೆ ಭೇಟಿ ನೀಡಿ ಉತ್ತರ ಕೊರಿಯಾ-ದಕ್ಷಿಣ ಕೊರಿಯಾದ ಅಧ್ಯಕ್ಷರುಗಳಾದ ಕಿಮ್ ಜಾಂಗ್ ಉನ್ ಹಾಗೂ ಮೂನ್ ಜೇ-ಇನ್ ಐತಿಹಾಸಿಕ ದ್ವಿಪಕ್ಷೀಯ ಮಾತುಕತೆಗೆ ಚಾಲನೆ ನೀಡಿದ್ದರು. ಆದರೆ ಮಹತ್ತರವಾದದ್ದನ್ನು ಸಾಧಿಸಲು ವಿಫಲರಾಗಿ ದ್ವಿಪಕ್ಷೀಯ ಮಾತುಕತೆ ಮುರಿದುಬಿದ್ದಿತ್ತು.ಕೊರಿಯಾ ಯುದ್ಧ ಅಂತ್ಯಗೊಂಡ ದಿನದ ವಾರ್ಷಿಕ ದಿನದಂದು ಉಭಯ ದೇಶಗಳ ನಾಯಕರು ಮತ್ತೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಸಲು ಮುಂದಾಗಿದ್ದರು.. ಇದರ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಸಹೋದರಿ ದಕ್ಷಿಣ ಕೊರಿಯಾ ಜೊತೆ ಮಾತುಕತೆ ನಡೆಸಲು ಸಿದ್ಧ ಎಂದು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

  (ವರದಿ - ವಾಸುದೇವ್.ಎಂ)
  Published by:Soumya KN
  First published: