• Home
 • »
 • News
 • »
 • national-international
 • »
 • Norovirus Alert: ಏನಿದು ನೊರೊವೈರಸ್? ಬರದಂತೆ ತಡೆಯುವುದು ಹೇಗೆ? ಸೋಂಕು ತಗುಲಿದರೆ ಏನು ಮಾಡಬೇಕು?

Norovirus Alert: ಏನಿದು ನೊರೊವೈರಸ್? ಬರದಂತೆ ತಡೆಯುವುದು ಹೇಗೆ? ಸೋಂಕು ತಗುಲಿದರೆ ಏನು ಮಾಡಬೇಕು?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೊರೊವೈರಸ್​ನ ಸಾಮಾನ್ಯ ಲಕ್ಷಣಗಳೆಂದರೆ ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ಶೀತ, ತಲೆನೋವು, ಸ್ನಾಯು ನೋವು. ವೈರಸ್‌ ನಿಮ್ಮ ದೇಹ ಪ್ರವೇಶಿಸಿದ 12 ಗಂಟೆಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಜೊತೆಗೆ 1-2 ದಿನಗಳ ನಂತರವೂ ರೋಗ ಲಕ್ಷಣ ಕಂಡುಬರಬಹುದು.

 • Share this:

  ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಲಿ ಎಂಬ ಮಾತಿದೆ. ಕೊವಿಡ್ ಹೋಯ್ತು ಅನ್ನುವಷ್ಟರಲ್ಲಿ ಮಕ್ಕಳಲ್ಲಿ ನೊರೊವೈರಸ್‌ನ ಎರಡು ಪ್ರಕರಣಗಳು ಪತ್ತೆಯಾಗಿರುವುದನ್ನು ಕೇರಳ ಸರ್ಕಾರ ದೃಢಪಡಿಸಿದೆ. ನೊರೊವೈರಸ್ ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತಿದ್ದು, ' ವೇಗವಾಗಿ ಹರಡುವ ಸಾಂಕ್ರಾಮಿಕ' ಎನ್ನಲಾಗಿದೆ.  ನೊರೊವೈರಸ್‌ನ ಆಕ್ರಮಣಕಾರಿ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ಕೇರಳ ಸರ್ಕಾರವು (Norovirus In Kerala) ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಜನರನ್ನು ಒತ್ತಾಯಿಸಿದೆ. ಕೇರಳದಿಂದ ಕರ್ನಾಟಕ ಹೆಚ್ಚೇನೂ ದೂರ ಇಲ್ಲ ತಾನೇ? ಹೀಗಾಗಿ ನಾವೂ ನೊರೊವೈರಸ್​ ಬಗ್ಗೆ ಜಾಗೃತಿ (Norovirus Alert) ಹೊಂದಿ ಎಚ್ಚರಿಕೆ ವಹಿಸುವುದು ಮುಖ್ಯ. ಹಾಗಾದರೆ ಏನಿದು ನೊರೊವೈರಸ್? (What is Norovirus) ಈ ವೈರಸ್ ಹೇಗೆ ಹರಡುತ್ತೆ? ಈ ಸೋಂಕಿನಿಂದ ಪಾರಾಗುವುದು ಹೇಗೆ? ನೊರೊವೈರಸ್​ಗೆ ಔಷಧ ಇದೆಯೇ? ಎಲ್ಲ ವಿವರ ಇಲ್ಲಿದೆ.


  "ಇಬ್ಬರು ಮಕ್ಕಳಲ್ಲಿ ನೊರೊವೈರಸ್ ಸೋಂಕು ಪತ್ತೆಯಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಲ್ಲರೂ ಜಾಗರೂಕರಾಗಿರಬೇಕು. ಸ್ವಚ್ಛತೆ ಕಾಪಾಡಬೇಕು" ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸುದ್ದಿಸಂಸ್ಥೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


  ಚಿಕ್ಕವರಲ್ಲಿ ಹೆಚ್ಚು, ದೊಡ್ಡವರಿಗೂ ಬರಬಹುದು
  ನೊರೊವೈರಸ್ ಒಂದು ಸಾಂಕ್ರಾಮಿಕ ವೈರಸ್ ಆಗಿದ್ದು ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುತ್ತದೆ. ದೇಹದ ಜಠರ, ಕರುಳಿನ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ನೊರೊವೈರಸ್​ ಹೊಟ್ಟೆ ಜ್ವರ ಅಥವಾ ಹೊಟ್ಟೆಯ ದೋಷ ಎಂದೂ ಕರೆಯಲಾಗುತ್ತದೆ. ಮಕ್ಕಳು ಮಾತ್ರವಲ್ಲ, ದೊಡ್ಡವರು ಸಹ ನೊರೊವೈರಸ್​ಗೆ ತುತ್ತಾಗಬಹುದು. ಕಲುಷಿತ ಆಹಾರದ   ಮೂಲಕ ವೇಗವಾಗಿ ಹರಡುವ ಕಾರಣ ಅತಿ ಅಪಾಯಕಾರಿ ಎನಿಸಿದೆ ನೊರೊವೈರಸ್.


  ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಓರ್ವ ಮನುಷ್ಯ ತನ್ನ ಜೀವನದಲ್ಲಿ ಹಲವು ಬಾರಿ ನೊರೊವೈರಸ್​ಗೆ ತುತ್ತಾಗಬಹುದು.


  ಹೇಗೆ ತಗಲುತ್ತದೆ?
  ನೊರೊವೈರಸ್ ಒಂದು ಸಾಂಕ್ರಾಮಿಕ ರೋಗ. ನೀವು ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯೊಂದಿಗೆ ನೇರ ಸಂಪರ್ಕದಲ್ಲಿದ್ದರೆ ನಿಮಗೂ ಈ ಸೋಂಕು ತಗಲುವ ಎಲ್ಲ ಸಾಧ್ಯತೆಯಿದೆ.  ಇದಲ್ಲದೆ ವೈರಸ್‌ ತಗುಲಿರುವ ಆಹಾರವನ್ನು ಸೇವಿಸುವುದು, ನೊರೊವೈರಸ್‌ನಿಂದ ಇರುವ ವಸ್ತುಗಳನ್ನು ಸ್ಪರ್ಶಿಸಿ ಅದೇ ಕೈಯಿಂದ ನಂತರ ಮುಖವನ್ನು ಸ್ಪರ್ಶಿಸುವುದು, ಅಥವಾ ತೊಳೆಯದೆ ಅದೇ ಕೈಗಳಿಂದ ಏನನ್ನಾದರೂ ತಿನ್ನುವುದು ವೈರಸ್ ನಿಮ್ಮ ದೇಹವನ್ನು ತಲುಪಲು ಸಹಾಯ ಮಾಡುತ್ತದೆ. ಕಲುಷಿತ ನೀರಿನಲ್ಲಿ ಬೆಳೆದ ಅಥವಾ ಕೊಯ್ಲು ಮಾಡಿದ ಆಹಾರದಿಂದಲೂ ನೊರೊವೈರಸ್ ಹರಡಬಹುದು.


  ಲಕ್ಷಣವೇ ಕಾಣಿಸದಿರಬಹುದು, ಹುಷಾರ್!
  ನೊರೊವೈರಸ್​ನ ಸಾಮಾನ್ಯ ಲಕ್ಷಣಗಳೆಂದರೆ ವಾಂತಿ, ಅತಿಸಾರ, ಹೊಟ್ಟೆ ಸೆಳೆತ, ಶೀತ, ತಲೆನೋವು, ಸ್ನಾಯು ನೋವು. ವೈರಸ್‌ ನಿಮ್ಮ ದೇಹ ಪ್ರವೇಶಿಸಿದ 12 ಗಂಟೆಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ಜೊತೆಗೆ 1-2 ದಿನಗಳ ನಂತರವೂ ರೋಗ ಲಕ್ಷಣ ಕಂಡುಬರಬಹುದು. ಕೆಲವೊಮ್ಮೆ ನೊರೊವೈರಸ್ ಸೋಂಕಿತ ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ ಅವರಿಂದ ಇನ್ನೂ ಇತರರಿಗೆ ವೈರಸ್ ರವಾನೆಯಾಗಬಹುದು.


  ಇದನ್ನೂ ಓದಿ: Monkeypox Vaccine: ನೀವು ಚಿಕ್ಕವರಿದ್ದಾಗ ಸಿಡುಬಿಗೆ ಲಸಿಕೆ ಹಾಕಿಸಿಕೊಂಡಿದ್ರಾ? ಮಂಕಿಪಾಕ್ಸ್​ನಿಂದ ನೀವು ಬಹುತೇಕ ಸೇಫ್!


  ಚೇತರಿಕೆ ಹೇಗೆ?
  ನೊರೊವೈರಸ್ ತಗುಲಿದ ಅನೇಕ ಜನರು 1-2 ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಅದೃಷ್ಟವಷಾತ್  ದೀರ್ಘಾವಧಿಯ ಆರೋಗ್ಯದ ತೊಂದರೆಗಳು ಅವರಲ್ಲಿ ಕಂಡುಬರುವುದಿಲ್ಲ. ನೊರೊವೈರಸ್ ದಾಳಿಯ ಸಮಯದಲ್ಲಿ ನಿರ್ಜಲೀಕರಣವು ಪ್ರಮುಖ ಆರೋಗ್ಯ ಅಪಾಯವಾಗಿದೆ. ಚಿಕ್ಕ ಮಕ್ಕಳು, ವೃದ್ಧರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರು ತಮ್ಮ ದೇಹ ನಿರ್ಜಲೀಕರಣ ಆಗಲು ಬಿಡಬಾರದು.


  ಬರದಂತೆ ತಡೆಯುವುದು ಹೇಗೆ?
  ನಿಯಮಿತವಾಗಿ ನಿಮ್ಮ ಕೈಗಳನ್ನು ತೊಳೆಯುತ್ತಿರಿ. ವಿಶೇಷವಾಗಿ ಬಾತ್ರೂಮ್ ಬಳಸಿದ ನಂತರ, ತಿನ್ನುವ ಮೊದಲು, ಆಹಾರವನ್ನು ಅಡುಗೆ ಮಾಡುವ ಮೊದಲು ಮತ್ತು ಯಾರಿಗಾದರೂ ಆಹಾರವನ್ನು ಬಡಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ.


  ಇದನ್ನೂ ಓದಿ: Covid-19: ಭಾರತದಲ್ಲಿ ಮತ್ತೆ ಶುರುವಾಯ್ತಾ ಕೋವಿಡ್ ನಾಲ್ಕನೇ ಅಲೆ? ಈ 5 ರಾಜ್ಯಗಳಲ್ಲಿ ಮತ್ತೆ ಪ್ರಕರಣಗಳು ಹೆಚ್ಚಳ


  ವಾಂತಿ ಮತ್ತು ಅತಿಸಾರ ಆದಲ್ಲಿ ಹುಷಾರಾದ ನಂತರ ಇಡೀ ಮನೆಯನ್ನು ಸೋಂಕುರಹಿತಗೊಳಿಸಿ. ನೊರೊವೈರಸ್ ಹರಡಲು ಕಲುಷಿತ ನೀರು ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದರಿಂದ ಸರಿಯಾಗಿ ಬೇಯಿಸದೆ ಸಮುದ್ರದ ಆಹಾರ, ಅಂದರೆ ಮೀನು ಇತ್ಯಾದಿಗಳನ್ನು ಸೇವಿಸುವುದನ್ನು ತಪ್ಪಿಸಿ. ಒಮ್ಮೆ ಆರಾಮಾದ ನಂತರ ಇತರರಿಂದ ಕನಿಷ್ಠ 3 ದಿನಗಳ ಕಾಲ ಪ್ರತ್ಯೇಕವಾಗಿ ವಾಸಮಾಡಿ.

  Published by:guruganesh bhat
  First published: