Devendra Fadnavis: ಮೃತ ಮಹಿಳೆಯ ಮಾನಹಾನಿ ಪ್ರಕರಣ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ವಿರುದ್ಧ ಕೇಸ್

ಪುಣೆ ಮೂಲದ ಮಹಿಳೆಯ ಮಾನನಷ್ಟ ಮಾಡಿದ ಆರೋಪದಲ್ಲಿ ದೇವೇಂದ್ರ ಫಡ್ನವೀಸ್​ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 500 ಮತ್ತು 501ರ ಅಡಿಯಲ್ಲಿ ಮನೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದೇವೇಂದ್ರ ಫಡ್ನವೀಸ್.

ದೇವೇಂದ್ರ ಫಡ್ನವೀಸ್.

 • Share this:
  ಮುಂಬೈ (ಮಾರ್ಚ್​ 02); ಪುಣೆಯ ಹಡಪಸಾರ್ ಎಂಬಲ್ಲಿ ಇತ್ತೀಚೆಗೆ 23 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದರು. ಮಹಿಳೆಯ ಸಾವಿನ ಹಿಂದೆ ಶಿವಸೇನೆ ಶಾಸಕ ಸಂಜಯ್ ರಾಥೋಡ್ ಅವರ ಕೈವಾಡವಿದೆ ಎಂದು ಬಿಜೆಪಿ ಆಪಾದಿಸಿತ್ತು. ಈ ಆರೋಪದ ಬೆನ್ನಿಗೆ ಮಹಾರಾಷ್ಟ್ರ ಕ್ಯಾಬಿನೆಟ್​ನ ಅರಣ್ಯ ಸಚಿವ ಸಂಜಯ್​ ರಾಥೋಡ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಆರು ಜನ ಬಿಜೆಪಿ ನಾಯಕರು ವಿರುದ್ಧ ಇದೀಗ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.

  ಪುಣೆ ಮೂಲದ ಮಹಿಳೆಯ ಮಾನನಷ್ಟ ಮಾಡಿದ ಆರೋಪದಲ್ಲಿ ದೇವೇಂದ್ರ ಫಡ್ನವೀಸ್​ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 500 ಮತ್ತು 501ರ ಅಡಿಯಲ್ಲಿ ಮನೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಾಶಿಮ್ ಜಿಲ್ಲೆಯ ರಾಷ್ಟ್ರೀಯ ಬಂಜಾರ ಪರಿಷತ್‌ನ ಯುವ ವಿಭಾಗದ ಮುಖ್ಯಸ್ಥರಾಗಿರುವ ಶ್ಯಾಮ್ ಸರ್ದಾರ್ ರಾಥೋಡ್ ಅವರು ದೂರು ದಾಖಲಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

  ಮಹಾರಾಷ್ಟ್ರ ಸಚಿವರ ರಾಜೀನಾಮೆಗೆ ಕಾರಣವಾದ ಸಾವಿನ ಪ್ರಕರಣ ಸಂಬಂಧದಲ್ಲಿ, ಫಡ್ನವೀಸ್ ಜತೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಪ್ರವೀಣ್ ದಾರೇಕರ್, ಮಾಜಿ ಸಚಿವರಾದ ಸುಧೀರ್ ಮುಗಂಟಿವಾರ್, ಆಶೀಶ್ ಶೇಲರ್, ಮುಂಬೈ ಶಾಸಕ ಅತುಲ್ ಭಟ್ಕಳ್‌ಕರ್ ಹಾಗೂ ಬಿಜೆಪಿ ನಾಯಕಿ ಚಿತ್ರಾ ವಾಘ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಜೊತೆಗೆ ದೂರಿನಲ್ಲಿ ಪ್ರಸಾದ್ ಲಾಡ್, ಶಾಂತಾಬಾಯಿ ಚವ್ಹಾಣ್ ಮತ್ತು ಮಹಿಳಾ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರನ್ನೂ ಹೆಸರಿಸಲಾಗಿದೆ.

  ಮೃತ ಮಹಿಳೆ ಮತ್ತು ಬಂಜಾರ ಸಮುದಾಯವನ್ನು ಬಿಜೆಪಿ ನಾಯಕರು ಅವಮಾನಿಸಿದ್ದಾರೆ. ಹೀಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಹಲವರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

  ಪುಣೆಯ ಹಡಪಸಾರ್ ಎಂಬಲ್ಲಿ 23 ವರ್ಷ ಮಹಿಳೆ ಇತ್ತೀಚೆಗೆ ಮೃತಪಟ್ಟಿದ್ದರು. ಮಹಿಳೆಯ ಸಾವಿನ ಹಿಂದೆ ಶಿವಸೇನೆ ಶಾಸಕ ಸಂಜಯ್ ರಾಥೋಡ್ ಅವರ ಕೈವಾಡವಿದೆ ಎಂದು ಬಿಜೆಪಿ ಆಪಾದಿಸಿದ ಹಿನ್ನೆಲೆಯಲ್ಲಿ ರಾಜಕೀಯ ವಿವಾದ ಸೃಷ್ಟಿಯಾಗಿತ್ತು. ಬಂಜಾರ ಸಮುದಾಯಕ್ಕೆ ಸೇರಿದ ರಾಥೋಡ್, ರಾಜ್ಯದ ಅರಣ್ಯ ಸಚಿವ ಹುದ್ದೆಗೆ ಭಾನುವಾರ ರಾಜೀನಾಮೆ ನೀಡಿದ್ದರು. ಆದರೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು.

  ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪೂಜಾ ಚೌವಾಣ್ ಎಂಬ 23 ವರ್ಷದ ಯುವತಿ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಕಲಿಯಲು ಪುಣೆಯಲ್ಲಿ ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ವಾಸಿಸುತ್ತಿದ್ದಳು. ಫೆಬ್ರವರಿ 8 ರಂದು ಈ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

  ಯುವತಿಯ ಸಾವಿನ ಎರಡು ದಿನಗಳ ನಂತರ, ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಕ್ಲಿಪ್ ಬಿಡುಗಡೆಯಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಯುವತಿಯ ಸಾವಿನ ಬಗ್ಗೆ ಮಾತನಾಡಿದ್ದಾರೆ. ಆಡಿಯೋ ಕ್ಲಿಪ್‌ನಲ್ಲಿರುವ ವ್ಯಕ್ತಿಗಳಲ್ಲಿ ಒಬ್ಬರು ಸಂಜಯ್ ರಾಥೋಡ್ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಸಂಜಯ್ ರಾಥೋಡ್ ನಿರಾಕರಿಸಿದ್ದಾರೆ.

  ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, "ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಕಾಣಿಸಿಕೊಂಡರೂ, ಅದನ್ನು ಕ್ರಿಮಿನಲ್ ಪ್ರಕರಣ ಎಂದು ತನಿಖೆ ನಡೆಸುತ್ತಿದ್ದೇವೆ" ಎಂದು ಕಳೆದ ವಾರ ತಿಳಿಸಿದ್ದರು.

  ಸಚಿವ ಸಂಜಯ್ ರಾಥೋಡ್‌ಗೂ ಮೃತ ಯುವತಿಯ ಸಾವಿಗೂ ಸಂಬಂಧವಿದೆ ಎಂದು ಬಿಜೆಪಿ ಆರೋಪಿಸಿ, ಅವರ ಬಂಧನಕ್ಕೆ ಪಕ್ಷ ಒತ್ತಾಯಿಸುತ್ತಿತ್ತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಾವಿನ ಬಗ್ಗೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

  ಇದನ್ನೂ ಓದಿ: Tamilnadu Politics: ತಮಿಳುನಾಡು ಚುನಾವಣೆ; ಎನ್​ಡಿಎ ಮೈತ್ರಿಕೂಟ ತೊರೆದ ಡಿಎಂಡಿಕೆ ಪಕ್ಷ, ಏಕಾಂಗಿ ಹೋರಾಟಕ್ಕೆ ನಿರ್ಧಾರ!

  "ಪೂಜಾ ಚೌವಾಣ್ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರ ಆರೋಪ ಹೊಂದಿರುವ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ, ಬೀಡ್ ಜಿಲ್ಲೆಯಲ್ಲಿ ಸಂಜಯ್ ರಾಥೋಡ್ ಅವರ ಪ್ರತಿಮೆಯನ್ನು ಸುಟ್ಟು ಬಿಜೆಪಿ ಪ್ರತಿಭಟನೆ ನಡೆಸಿತ್ತು" ಎಂದು ಬಿಜೆಪಿ ಮಹಾರಾಷ್ಟ್ರ ಕಳೆದ ವಾರ ಟ್ವೀಟ್ ಮಾಡಿದೆ.

  "ಸಂಜಯ್ ರಾಥೋಡ್ ವಿರುದ್ಧ ಸಾಕಷ್ಟು ಪುರಾವೆಗಳಿವೆ ಆದರೆ ಏನೂ ಆಗುತ್ತಿಲ್ಲ. ಮಾಧ್ಯಮ ವರದಿಗಳು ಹೊರಬರದಿದ್ದರೆ ಏನೂ ಆಗುತ್ತಿರಲಿಲ್ಲ. ರಾಜ್ಯದ ಪೊಲೀಸರು ಒತ್ತಡದಲ್ಲಿದ್ದಾರೆ. ಮೊದಲು, ಪೋಲಿಸ್ ತನಿಖೆಯ ಬಗ್ಗೆ ತನಿಖೆ ನಡೆಸಬೇಕಾಗಿದೆ" ಎಂದು ಫಡ್ನವಿಸ್ ಕಳೆದ ವಾರ ಹೇಳಿದ್ದರು.
  Published by:MAshok Kumar
  First published: