ಬದುಕಿನ ಪಯಣ ಮುಗಿಸಿದ ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್

news18
Updated:August 12, 2018, 9:06 AM IST
ಬದುಕಿನ ಪಯಣ ಮುಗಿಸಿದ ನೊಬೆಲ್ ಪುರಸ್ಕೃತ ಸಾಹಿತಿ ವಿ.ಎಸ್. ನೈಪಾಲ್
news18
Updated: August 12, 2018, 9:06 AM IST
 ನ್ಯೂಸ್ 18 ಕನ್ನಡ

ಲಂಡನ್ (ಆ.12) : 2001ರಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ನೊಬೆಲ್ ಪುರಸ್ಕಾರಕ್ಕೆ ಭಾಜನರಾಗಿದ್ದ ವಿಶ್ವದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಸರ್. ವಿ.ಎಸ್. ನೈಪಾಲ್ (85) ಅವರು ನಿನ್ನೆ ಲಂಡನ್​ನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

“ನೈಪಾಲ್ ತಾವು ಇಷ್ಟಪಟ್ಟ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದವರು. ಸೃಜನಶೀಲತೆ ಮತ್ತು ಚಲನಶೀಲತೆ ಇದ್ದ ಅದ್ಬುತ ಬದುಕನ್ನು ಸಾಗಿಸಿದ್ದರು,” ಎಂದು ನೈಪಾಲ್ ಅವರ ಪತ್ನಿ ನಾದಿರಾ ನೈಪಾಲ್ ತಿಳಿಸಿದ್ದಾರೆ. ನೈಪಾಲ್ ಅವರ ನಿಧನಕ್ಕೆ ಸಾಹಿತ್ಯ ಕ್ಷೇತ್ರದ ದಿಗ್ಗಜರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ನೈಪಾಲ್ ಅವರ ಮೊದಲ ಪತ್ನಿ ಪಾಟ್ರಿಸಿಯಾ ಹಾಲೆ 1996ರಲ್ಲಿ ನಿಧನರಾದರು. ನಂತರ ನೈಪಾಲ್ ಅವರು ಪಾಕಿಸ್ತಾನದ ಪತ್ರಕರ್ತೆ ನಾದಿರಾ ಅವರನ್ನು ಮದುವೆಯಾದರು.

ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರು ಟ್ರಿನಿಡಾಡ್​ನಲ್ಲಿ 1932 ರ ಆಗಸ್ಟ್ 17ರಂದು ಜನಿಸಿದರು. ಇವರ ತಂದೆ ಭಾರತ ಸರ್ಕಾರದ ಸೇವೆಯಲ್ಲಿದ್ದರು. ನೈಪಾಲ್ ಅವರು ಆಕ್ಸಫರ್ಡ್ ವಿವಿಯಿಂದ ವಿದ್ಯಾರ್ಥಿ ವೇತನ ಪಡೆದು, ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದ್ದರು.

ಇಂಗ್ಲೆಂಡ್ ನಲ್ಲಿ ನೆಲೆಸಿದ್ದರೂ ಜೀವನ ಬಹುಪಾಲು ಸಮಯವನ್ನು ಪ್ರವಾಸದಲ್ಲಿಯೇ ಕಳೆದರು. ಬ್ರಿಟನ್ ಸಾಂಸ್ಕೃತಿಕ ಜಗತ್ತಿನ ಆಧಾರ ಸ್ತಂಭವಾಗಿದ್ದ ನೈಪಾಲ್ ಅವರು ‘ಬೇರಿಲ್ಲದ ಬದುಕು’ ಪರಿಕಲ್ಪನೆಯಲ್ಲಿ ತಮ್ಮ ಬದುಕು ಸಾಗಿಸಿದ್ದರು.

ಆಧುನಿಕ ತತ್ವಶಾಸ್ತ್ರಜ್ಞ:
Loading...

ನೈಪಾಲ್ ಬಾಲ್ಯದಲ್ಲಿದ್ದಾಗ ಶೇಕ್ಸ್​ಪಿಯರ್ ಮತ್ತು ಡಿಕೆನ್ಸ್ ಅವರ ಸಾಹಿತ್ಯವನ್ನು ಓದುತ್ತಿದ್ದರು. 1950ರಲ್ಲಿ ಆಕ್ಸ್ ಫರ್ಡ್ ವಿವಿಯಿಂದ ಸರ್ಕಾರಿ ಸ್ಕಾಲರ್ ಶಿಪ್ ಪಡೆಯುವ ಮೂಲಕ ಯಾವುದೇ ವಿವಿಯಲ್ಲಿ ಓದುವ ಆಯ್ಕೆಯನ್ನು ಪಡೆದುಕೊಂಡರು. ವಿದ್ಯಾರ್ಥಿಯಾಗಿದ್ದಾಗ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನೈಪಾಲ್ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

ಇವರ ಮೊದಲ ಕೃತಿ ‘ದ ಮೈಸ್ಟಿಕ್ ಮೆಶರ್’ 1951ರಲ್ಲಿ ಪ್ರಕಟಗೊಂಡಿತ್ತು. ಒಂದು ದಶಕದ ಬಳಿಕ ‘ಎ ಹೌಸ್ ಫಾರ್ ಮಿ. ಬಿಸ್ವಾಸ್’ ಕಾದಂಬರಿ ಪ್ರಕಟವಾಯಿತು. ಈ ಕಾದಂಬರಿ ನೈಪಾಲ್ ಅವರಿಗೆ ಬಹುದೊಡ್ಡ ಹೆಸರನ್ನು ತಂದುಕೊಟ್ಟಿತು. ಈ ಕಾದಂಬರಿ ಬರೆಯಲು ಅವರು ಮೂರು ವರ್ಷ ಸಮಯ ತೆಗೆದುಕೊಂಡಿದ್ದರು.

ಆರಂಭದಲ್ಲಿ ನೈಪಾಲ್ ಅವರ ಸಾಹಿತ್ಯ ವೆಸ್ಟ್ ಇಂಡೀಸ್ ಬದುಕನ್ನು ಕೇಂದ್ರೀಕರಿಸಿದ್ದವು. ವಸಾಹತು ಕಾಲಘಟ್ಟದ ನಂತರ ವಿಶ್ವದ ವಿವಿಧ ದೇಶಗಳಲ್ಲಿ ಆದ ಬದಲಾವಣೆಗಳನ್ನು ಅವರ ಕೃತಿಗಳು ಹಿಡಿದಿಟ್ಟಿವೆ. 2001ರಲ್ಲಿ ಇವರ ಸಾಹಿತ್ಯ ಸಾಧನೆಗಾಗಿ ನೊಬೆಲ್ ಪುರಸ್ಕಾರ ಸಂದಿತ್ತು. “ಜಗತ್ತು ಸುತ್ತುವ ಈ ಪಯಣಿಗ ಮನೆಯಲ್ಲಿ ಇರುವುದೇ ಅಪರೂಪ. ಸಾಹಿತ್ಯ ಕೃತಿಗಳಲ್ಲಿನ ಅವರ ದನಿ ಅನುಕರಣೀಯ. ಆಧುನಿಕ ತತ್ವಶಾಸ್ತ್ರಜ್ಞರಾದ ನೈಪಾಲ್ ಅವರ ಬರೆವಣಿಗೆ ಶೈಲಿ ಜಾಗರೂಕತೆಯಿಂದ ಕೂಡಿತ್ತು,” ಎಂದು ನೊಬೆಲ್ ಪ್ರಶಸ್ತಿ ನೀಡುವ ಸ್ವೀಡಿಷ್ ಅಕಾಡೆಮಿ ಬಣ್ಣಿಸಿತ್ತು.

 
First published:August 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...