ಕ್ಯಾನ್ಸರ್ ಥೆರಪಿ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಗೌರವ

news18
Updated:October 2, 2018, 11:56 AM IST
ಕ್ಯಾನ್ಸರ್ ಥೆರಪಿ ಸಂಶೋಧಕರಿಗೆ ವೈದ್ಯಕೀಯ ನೊಬೆಲ್ ಗೌರವ
  • Advertorial
  • Last Updated: October 2, 2018, 11:56 AM IST
  • Share this:
-ನ್ಯೂಸ್ 18 ಕನ್ನಡ

ಸ್ಟಾಕ್ಹೋಮ್: ಈ ಬಾರಿಯ ನೊಬೆಲ್​ ಪಾರಿತೋಷಕವನ್ನು ವೈದ್ಯಕೀಯ ವಿಭಾಗದಲ್ಲಿ ಅಮೆರಿಕದ ಜೇಮ್ಸ್​ ಆಲಿಸನ್ ಮತ್ತು ಜಪಾನ್​ನ ತಸುಕು ಹೊಂಜೊ ಅವರಿಗೆ ನೀಡಲಾಗಿದೆ. ನೈಸರ್ಗಿಕ ರೋಗ ನಿರೋಧಕ ಶಕ್ತಿ( ಇಮ್ಯೂನ್ ಥೆರಪಿ) ಚಿಕಿತ್ಸೆ ಮೂಲಕ ಕ್ಯಾನ್ಸರ್ ರೋಗವನ್ನು ಗುಣಪಡಿಸಲು ಸಾಧ್ಯ ಎಂದು ಜೇಮ್ಸ್ ಅಲಿಸನ್ ಮತ್ತು ತಸುಕು ಹೊಂಜೊ ಕಂಡು ಹಿಡಿದಿದ್ದರು. ವೈದ್ಯಕೀಯ ಲೋಕದಲ್ಲಿ ಮಹತ್ತರವಾದ ಈ ಅನ್ವೇಷಣೆಗಾಗಿ ಈ ಇಬ್ಬರಿಗೆ ಜಂಟಿಯಾಗಿ ನೊಬೆಲ್ ಪುರಸ್ಕಾರ ನೀಡಲಾಗಿದೆ ಎಂದು ನೊಬೆಲ್ ಸಂಸ್ಥೆ ತಿಳಿಸಿದೆ.

2014ರಲ್ಲಿ ಏಷ್ಯಾದ ನೊಬೆಲ್​ ಎಂದು ಬಿಂಬಿಸಲಾಗುವ ಟಾಂಗ್ ಪ್ರೈಸ್​ ಪ್ರಶಸ್ತಿಯನ್ನು ಈ ವೈದ್ಯ ತಜ್ಞರು ಪಡೆದುಕೊಂಡಿದ್ದರು. ಸದ್ಯ ಅಲಿಸನ್ ಟೆಕ್ಸಾಸ್​ನ ವಿಶ್ವವಿದ್ಯಾಲಯದಲ್ಲಿ ಹಾಗೂ ಹೊಂಜೊ ಕ್ರೋಟೊ ವಿಶ್ವವಿದ್ಯಾಲಯದಲ್ಲಿ ಫ್ರೊಫೆಸರ್​ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಿಮೋಥೆರಪಿ ಮತ್ತು ರೇಡಿಯೋಥೆರಪಿಗಳ ಬದಲಾಗಿ ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವ ಮೂಲಕ ಕ್ಯಾನ್ಸರ್​ ಕೋಶಗಳನ್ನು ನಾಶಪಡಿಸಬಹುದು ಎಂಬುದನ್ನು ಈ ಜೋಡಿ ಸಂಶೋಧಿಸಿ, ಮಾರಣಾಂತಿಕ ಖಾಯಿಲೆ ಕ್ಯಾನ್ಸರ್​ ನಿಯಂತ್ರಣಕ್ಕೆ ಹೊಸ ವಿಧಾನವನ್ನು ಕಂಡು ಹಿಡಿದಿದ್ದರು.

ಈ ಪ್ರಶಸ್ತಿಯೊಂದಿಗೆ ಒಂಬತ್ತು ದಶಲಕ್ಷ ಸ್ವೀಡಿಷ್ ಕ್ರೋನರ್ ಮೊತ್ತವನ್ನು (ಸುಮಾರು 870,000 ಯುರೋಗಳಷ್ಟು) ಇವರು ಪಡೆದುಕೊಳ್ಳಲಿದ್ದಾರೆ. ಕ್ಯಾನ್ಸರ್ ಎಂಬುದು ಮಾರಣಾಂತಿಕ ಖಾಯಿಲೆಯಾಗಿದ್ದು, ಮಾನವ ಜನಾಂಗ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಕ್ಯಾನ್ಸರ್ ರೋಗ ಚಿಕಿತ್ಸೆ ಕೂಡ ಒಂದಾಗಿದೆ. ದೇಹದದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಕೋಶಗಳನ್ನು ನಿರ್ನಾಮ ಮಾಡಬಹುದು ಎಂದು ಈ ವೈದ್ಯಕೀಯ ತಜ್ಞರು ನಿರೂಪಿಸಿದ್ದಾರೆ. ಈ ಮೂಲಕ ವೈದ್ಯಕೀಯ ಲೋಕದಲ್ಲಿ ಹೊಸ ಮೈಲುಗಲ್ಲನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆಂದು ನೊಬೆಲ್ ಸಮಿತಿ ತಿಳಿಸಿದೆ.

ಈ ವರ್ಷದ ರಸಾಯನಶಾಸ್ತ್ರಕ್ಕೆ ನೀಡಲಾಗುವ ಪ್ರಶಸ್ತಿಯನ್ನು ಮಂಗಳವಾರ ಘೋಷಿಸಲಿದ್ದು, ಶಾಂತಿಗಾಗಿ ನೀಡಲಾಗುವ ನೊಬೆಲ್​ ಪ್ರಶಸ್ತಿಯನ್ನು ಶುಕ್ರವಾರ ಘೋಷಿಸಲಾಗುತ್ತದೆ. ಹಾಗೆಯೇ ಈ ವರ್ಷದ ಒಟ್ಟು ನೊಬೆಲ್ ಪ್ರಶಸ್ತಿಗಳನ್ನು ಅಕ್ಟೋಬರ್ 8ರ ಒಳಗೆ ಅಂತಿಮಗೊಳಿಸಲಾಗುತ್ತದೆ ಎಂದು ನೊಬೆಲ್ ಸಮಿತಿ ತಿಳಿಸಿದೆ.
First published:October 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ