news18-kannada Updated:December 15, 2020, 3:36 PM IST
ಸಂಸತ್ತು
ನವದೆಹಲಿ (ಡಿ.15): ಕೊರೋನಾವೈರಸ್ ಸೋಂಕಿನ ಹಿನ್ನಲೆ ಈ ಬಾರಿ ಚಳಿಗಾಲ ಅಧಿವೇಶನವನ್ನು ರದ್ದುಮಾಡಲಾಗಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಬಾರಿ ಚಳಿಗಾಲ ಅಧಿವೇನ ನಡೆಸದಿರಲು ತೀರ್ಮಾನಿಸಲಾಗಿದೆ. ಈ ಕುರಿತು ಲೋಕಸಭಾ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಅವರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಚಳಿಗಾಲದ ಅಧಿವೇಶನದ ಬದಲು ಸರ್ಕಾರ ಜನವರಿಯಲ್ಲಿ ಬಜೆಟ್ ಅಧಿವೇಶನ ನಡೆಸುವ ಇಚ್ಛೆ ವ್ಯಕ್ತಪಡಿಸಿದೆ. ದೆಹಲಿಯ ಗಡಿಗಳಲ್ಲಿ ಹೊಸ ಕೃಷಿ ಮಸೂದೆ ರದ್ದುಪಡಿಸುವಂತೆ ಕೋರಿ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಚರ್ಚಿಸಲು ಅಧಿವೇಶನ ಕರೆಯುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌದರಿ ಪತ್ರ ಬರೆದಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವ ಪ್ರಲ್ಹಾದ್ ಜೋಶಿ, ಕೋವಿಡ್-19 ಸೋಂಕಿನ ಬಗ್ಗೆ ಎಚ್ಚರವಹಿಸುವುದು ಅಗತ್ಯವಾಗಿದೆ. ಈ ಹಿನ್ನಲೆ ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಲಾಗಿದೆ. ಅಧಿವೇಶನ ಕರೆಯದಿರುವ ಬಗ್ಗೆ ಒಪ್ಪಿಗೆ ಸೂಚಿಸಿದ ಹಿನ್ನಲೆ, ಈ ಬಾರಿ ಚಳಿಗಾಲ ಅಧಿವೇಶನ ನಡೆಸದಿರಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ದೆಹಲಿಯಲ್ಲಿ ಚಳಿ ಹೆಚ್ಚಿದ್ದು, ಈ ಚಳಿಗಾಲದಲ್ಲಿ ಕೊರೋನಾ ಸೋಂಕು ನಿರ್ವಹಣೆ ಬಹು ದೊಡ್ಡ ಸವಾಲ್ ಆಗಿದೆ. ಅಲ್ಲದೇ ರಾಜಧಾನಿಯಲ್ಲಿ ಪ್ರಕರಣಗಳು ಕೂಡ ಹೆಚ್ಚಿವೆ ಎಂದು ಜೋಶಿ ತಿಳಿಸಿದ್ದಾರೆ.
ಇದನ್ನು ಓದಿ: 2022 ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಎಎಪಿ ಸಜ್ಜು; ಅರವಿಂದ್ ಕೇಜ್ರಿವಾಲ್
ಅಲ್ಲದೇ ಕೊರೋನಾ ಸೋಂಕಿನ ಹಿನ್ನಲೆ ಮಳೆಗಾಲದ ಅಧಿವೇಶನವೇ ವಿಳಂಬವಾಗಿ ಸೆಪ್ಟೆಂಬರ್ನಲ್ಲಿ ನಡೆಸಲಾಗಿತ್ತು. 10 ದಿನಗಳ ಕಾಲ ನಡೆದ ಆ ಅಧಿವೇಶನದಲ್ಲಿ 27 ಮಸೂದೆಗಳನ್ನು ಪಾಸ್ ಮಾಡಲಾಗಿದೆ. ಇದರಲ್ಲಿ ವಿವಾದಿತ ಕೃಷಿ ಮಸೂದೆಗಳು ಕೂಡ ಮಂಡನೆಯಾಗಿದ್ದವು.
ಡಿಸೆಂಬರ್ ಮಧ್ಯದಲ್ಲಿರುವ ನಾವು ಕೋವಿಡ್ ಲಸಿಕೆಯ ನಿರೀಕ್ಷೆಯಲ್ಲಿದ್ದೇವೆ. ಈ ಹಿನ್ನಲೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರನ್ನು ಅನೌಪಚಾರಿಕವಾಗಿ ಸಂಪರ್ಕಿಸಿದ್ದು, ಅವರು ಕೂಡ ಕೋವಿಡ್ 19 ವಿರುದ್ಧ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಂತಹ ಸಮಯದಲ್ಲಿ ಅಧಿವೇಶನ ನಡೆಸದಿರುವುದು ಒಳಿತು ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಈ ಹಿನ್ನಲೆ ಮುಂದಿನ ಅಧಿವೇಶನವನ್ನು ಸರ್ಕಾರ ಶೀಘ್ರವಾಗಿ ನಡೆಸಲು ನಿರ್ಧರಿಸಿದೆ, 2021ರ ಜನವರಿಯಲ್ಲಿ ಬಜೆಟ್ ಅಧಿವೇಶನ ನಡೆಸುವುದು ಸೂಕ್ತ. ಕೊರೋನಾ ಸೃಷ್ಟಿಸಿದ ಈ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಸಂಸದರು ಕೂಡ ಸಹಕರಿಸಬೇಕು ಎಂದು ಉತ್ತರಿಸಿದ್ದಾರೆ.
Published by:
Seema R
First published:
December 15, 2020, 3:36 PM IST