ಲಕ್ಷ ಹುದ್ದೆಗಳು ಖಾಲಿ ಇವೆ; ಆಡಳಿತ ನಡೆಸುವುದು ಕಷ್ಟವಾಗಿದೆ: ಸರ್ಕಾರದ ಕೂಗಿಗೆ ಕಿವಿಗೊಡದ ಸುಪ್ರೀಂ ಕೋರ್ಟ್

ಬಡ್ತಿ ಮೀಸಲಾತಿ ವಿಚಾರದಲ್ಲಿ ಅಂತಿಮ ತೀರ್ಪು ಬರುವವರೆಗೂ ಯಾವುದೇ ಬಡ್ತಿ ಮಾಡಿಕೊಳ್ಳಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಸುಪ್ರೀಂಕೋರ್ಟ್

ಸುಪ್ರೀಂಕೋರ್ಟ್

 • Share this:
  ನವದೆಹಲಿ(ಜುಲೈ 23): ಸುಮಾರು 1.3 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಭರ್ತಿ ಮಾಡಿಕೊಳ್ಳುವ ಸರ್ಕಾರದ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ನಕಾರ ತೋರಿದೆ. ಬಡ್ತಿಯಲ್ಲಿ ಎಸ್​ಸಿ-ಎಸ್​ಟಿಗೆ ಮೀಸಲಾತಿ ನೀಡುವ ವಿಚಾರದಲ್ಲಿ ಅಂತಿಮ ತೀರ್ಪು ಬರುವವರೆಗೂ ಯಾವುದೇ ರೀತಿಯ ಬಡ್ತಿ ಪ್ರಕ್ರಿಯೆ ನಡೆಯಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಲಕ್ಷಕ್ಕೂ ಮೇಲ್ಪಟ್ಟ ಹುದ್ದೆಗಳು ಭರ್ತಿಯಾಗದೆ ಖಾಲಿ ಉಳಿದಿವೆ. ಸಮರ್ಪಕ ಆಡಳಿತ ನಡೆಸಲು ಸಿಬ್ಬಂದಿ ಕೊರತೆ ಆಗಿದೆ ಎಂದು ಸರ್ಕಾರ ಮಾಡಿಕೊಂಡ ಮನವಿಗೆ ಸಿಜೆಐ ನೇತೃತ್ವದ ಸುಪ್ರೀಂ ನ್ಯಾಯಪೀಠ ಕಿವಿಗೊಡಲಿಲ್ಲ.

  “2020, ಜನವರಿ 31ಕ್ಕೆ 1.3 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿವೆ. ಕೇಂದ್ರ ಸರ್ಕಾರದ 23 ಇಲಾಖೆಗಳಲ್ಲಿ 1.3 ಲಕ್ಷಕ್ಕೂ ಹೆಚ್ಚು ಬಡ್ತಿಗಳು ಬಾಕಿ ಇವೆ. ಅತ್ಯಗತ್ಯ ಇರುವ ಬಡ್ತಿಗಳನ್ನ ಮಾಡಲಾದರೂ ಅವಕಾಶ ನೀಡಿ. ಈ ಸ್ಥಿತಿಯಲ್ಲಿ ಆಡಳಿತ ನಡೆಸುವುದು ಅಸಾಧ್ಯ” ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಮಾಡಿಕೊಂಡ ಮನವಿಯನ್ನು ನ್ಯಾಯಪೀಠದ ಪುರಸ್ಕರಿಸಲಿಲ್ಲ.

  ಮೀಸಲಾತಿ ವಿಚಾರದಲ್ಲಿ 2018ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಸರ್ಕಾರಿ ಹುದ್ದೆಗಳಲ್ಲಿ ಮತ್ತು ಬಡ್ತಿಗಳಲ್ಲಿ ಕೆನೆಪದರ (ಕ್ರೀಮಿ ಲೇಯರ್) ನೀತಿಯನ್ನು ಅನುಸರಿಸಬೇಕು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸುಧಾರಣೆಗೊಂಡವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಈ ಕೆನೆಪದರ ನೀತಿಯು ಪರಿಶಿಷ್ಟ ಜಾತಿ ಮತ್ತು ಪಂಡಗ ಸೇರಿದಂತೆ ಎಲ್ಲರಿಗೂ ಅನ್ವಯ ಆಗಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಮೇಲ್ಮವಿ ಮಾಡಲಾಯಿತು. 2019ರಲ್ಲಿ ಯಥಾಸ್ಥಿತಿ ಪಾಲಿಸಬೇಕೆಂದು ಕೋರ್ಟ್ ಸೂಚಿಸಿತು. ಆದರೆ, ಈ ಆದೇಶದಲ್ಲಿ ಸ್ಪಷ್ಟತೆ ಇಲ್ಲ ಎಂಬುದು ಸರ್ಕಾರದ ವಾದ.

  ಇದನ್ನೂ ಓದಿ: ಸಂಘರ್ಷ ಸ್ಥಳದಿಂದ ಕಾಲ್ತೆಗೆದಿಲ್ಲ ಚೀನೀ ಸೇನೆ: ಲಡಾಖ್ ಸಮೀಪವೇ ಇದ್ಧಾರಾ 40 ಸಾವಿರ ಚೀನೀ ಸೈನಿಕರು?

  ಇದೀಗ ಒಂದು ತಿಂಗಳ ನಂತರ ಇದೇ ವಿಚಾರವು ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಅದು ಇತ್ಯರ್ಥ ಆಗುವವರೆಗೂ ಯಾವುದೇ ನೇಮಕಾತಿ, ಭಡ್ತಿ ಮಾಡಿಕೊಳ್ಳಬಾರದು ಎಂದು ನ್ಯಾಯಾಲಯ ತಿಳಿಸಿದೆ.

  ತುರ್ತು ಅಗತ್ಯ ಇರುವ ಬಡ್ತಿಗಳನ್ನ ಮಾಡುವುದಕ್ಕಾದರೂ ಅವಕಾಶ ಕೊಡಿ. ಯಾವುದೇ ಮೀಸಲಾತಿ ಇಲ್ಲದೆ ಬಡ್ತಿಯನ್ನ ಸೇವಾ ಹಿರಿತನದ ಪ್ರಕಾರ (ಸೀನಿಯಾರಿಟಿ) ಮಾಡುತ್ತೇವೆ ಎಂದು ಸರ್ಕಾರ ಸ್ಪಷ್ಟನೆ ಕೊಟ್ಟಿತಾದರೂ ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ವಿಚಾರದಲ್ಲಿ ಅಂತಿಮ ತೀರ್ಪು ಬರುವವರೆಗೂ ಕಾಯಿರಿ ಎಂದು ಅಪ್ಪಣೆ ಮಾಡಿತು.
  Published by:Vijayasarthy SN
  First published: