ನವ ದೆಹಲಿ (ಮಾರ್ಚ್ 16); ಪೆಟ್ರೋಲ್, ಡೀಸೆಲ್ ಮತ್ತು ಅಡಿಗೆ ಅನಿಲ (LPG) ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತೈಲ ಬೆಲೆ ಏರಿಕೆ ಇರತೆ ವಸ್ತುಗಳ ಬೆಲೆ ಏರಿಕೆ ಮೇಲೂ ಸಾಕಷ್ಟು ಪರಿಣಾಮ ಬೀರಿದ್ದು, ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ತೆರಿಗೆ ಅಡಿಯಲ್ಲಿ ತರಬೇಕು ಎಂಬ ಕೂಗು ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಹೀಗೆ ಮಾಡಿದಲ್ಲಿ ತೈಲ ಬೆಲೆ ಕನಿಷ್ಟ 30 ರೂ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ, ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಈ ಕುರಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಪೆಟ್ರೋಲ್, ಡೀಸೆಲ್, ಜೆಟ್ ಇಂಧನ (ಎಟಿಎಫ್) ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ಅಡಿಯಲ್ಲಿ ತರುವಂತಹ ಯಾವುದೇ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದೆ ಇಲ್ಲ" ಎಂದು ಹೇಳಿದ್ದಾರೆ.
"ತೈಲ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರುವುದು ಯಾವಾಗಿನಿಂದ ಎಂಬ ಬಗ್ಗೆ, ಜಿಎಸ್‌ಟಿ ಮಂಡಳಿ ಶಿಫಾರಸು ಮಾಡಬೇಕು ಎಂದು ಕಾನೂನು ತಿಳಿಸುತ್ತದೆ. ಆದರೆ, ರಾಜ್ಯಗಳಿಗೂ ಪ್ರಾತಿನಿಧ್ಯ ಇರುವ ಜಿಎಸ್‌ಟಿ ಮಂಡಳಿಯು ಇದುವರೆಗೆ ಈ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂಬ ಶಿಫಾರಸು ಮಾಡಿಲ್ಲ" ಎಂದು ಸೀತಾರಾಮನ್ ಹೇಳಿದ್ದಾರೆ.
ಸದನದಲ್ಲಿ ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ಒಂದು ವರ್ಷಗಳ ಹಿಂದೆ ಒಂದು ಲೀಟರ್‌ಗೆ 19.98 ರೂ. ಇತ್ತು, ಈಗ ಅದು 32.9 ರೂ.ಆಗಿದೆ. ಅದೇ ರೀತಿ ಡೀಸೆಲ್ ಅಬಕಾರಿ ಸುಂಕವನ್ನು 15.83 ರೂ. ನಿಂದ 31.8 ರೂ.ಗೆ ಏರಿಸಲಾಗಿದೆ ಎಂದು ಹೇಳಿದ್ದಾರೆ.
"ಪ್ರಸಕ್ತ ಹಣಕಾಸಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ವೆಚ್ಚಗಳ ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಅಬಕಾರಿ ಸುಂಕದ ದರವನ್ನು ಮಾಪನಾಂಕ ಮಾಡಲಾಗಿದೆ" ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.
ಜುಲೈ 1, 2017 ರಂದು ಜಿಎಸ್‌ಟಿ ತೆರಿಗೆ ವಿಧಾನವನ್ನು ಪರಿಚಯಿಸಿತ್ತು. ಈ ವೇಳೆ ಎಲ್ಲಾ ಸರಕುಗಳನ್ನೂ ಈ ತೆರಿಗೆ ವಿಧಾನದ ಅಡಿಗೆ ತಂದಿದ್ದ ಕೇಂದ್ರ ಸರ್ಕಾರ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಸೇರಿದಂತೆ ಡಜನ್ಗೂ ಹೆಚ್ಚು ಇಂಧನ ಪ್ರಕಾರಗಳನ್ನೂ ಮಾತ್ರ ಜಿಎಸ್ಟಿಯಿಂದ ಹೊರಗಿಟ್ಟಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ