ಮುಸ್ಲಿಮರಿಗೆ ಶೇ.5 ಮೀಸಲಾತಿ ಎಂದು ಎನ್​ಸಿಪಿ ಸಚಿವ ಹೇಳಿದ ಬಳಿಕ ಸರ್ಕಾರದ ಮುಂದೆ ಆ ಪ್ರಸ್ತಾವನೆಯೇ ಇಲ್ಲ ಎಂದ ಸಿಎಂ ಠಾಕ್ರೆ

ಮಹಾರಾಷ್ರ್ಟ ಸಿಎಂ ಉದ್ಧವ್ ಠಾಕ್ರೆ ಅವರ ಈ ಹೇಳಿಕೆಯು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ರಾಜ್ಯ ಸರ್ಕಾರವು ಮುಸ್ಲಿಂಮರಿಗೆ ಶಿಕ್ಷಣದಲ್ಲಿ ಶೇ. 5 ಮೀಸಲಾತಿ ನೀಡಲಿದೆ ಎಂದು ವಿಧಾನ ಪರಿಷತ್​ನಲ್ಲಿ ನೀಡಿದ ಹೇಳಿಕೆಗೆ ವಿರುದ್ದವಾಗಿದೆ.

ಸಿಎಂ ಉದ್ಧವ್ ಠಾಕ್ರೆ

ಸಿಎಂ ಉದ್ಧವ್ ಠಾಕ್ರೆ

  • Share this:
ಮುಂಬೈ: ಮುಸ್ಲಿಮರಿಗೆ ಮೀಸಲಾತಿ ನೀಡುವ ಬಗ್ಗೆ ಮಹಾರಾಷ್ರ್ಟ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮಂಗಳವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರು ವಿಧಾನ ಪರಿಷತ್ತಿನಲ್ಲಿ ರಾಜ್ಯ ಸರ್ಕಾರವು ಮುಸ್ಲಿಮರಿಗೆ ಶಿಕ್ಷಣದಲ್ಲಿ ಶೇ.5ರಷ್ಟು  ಮೀಸಲಾತಿ ನೀಡಲಿದೆ ಎಂದು ಮಾಹಿತಿ ನೀಡಿದ್ದ ಮರುದಿನವೇ ಸಿಎಂ ಈ ಹೇಳಿಕೆ ನೀಡಿದ್ದಾರೆ.

ಎನ್​ಸಿಪಿ ಸಚಿವ ಮಲಿಕ್​ ಅವರು, ಈ ಮೀಸಲಾತಿ ಬೇಗನೆ ಕಾರ್ಯರೂಪಕ್ಕೆ ಬರುವಂತೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಪರಿಷತ್ತಿನಲ್ಲಿ ಭರವಸೆ ನೀಡಿದ್ದರು. ಆದರೆ, ಈ ವಿಷಯವಾಗಿ ಇಂದು ಮಾತನಾಡಿದ ಸಿಎಂ ಠಾಕ್ರೆ, ಸರ್ಕಾರದ ಮುಂದೆ ಮುಸ್ಲಿಂ ಮೀಸಲಾತಿ ಕುರಿತಂತೆ ಯಾವುದೇ ಪ್ರಸ್ತಾವನೆ ಬಂದಿಲ್ಲ, ಹಾಗೇನಾದರು ಬಂದರೆ ಅದರ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಮತ್ತು ಇದುವರೆಗೂ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಸುದ್ದಿಗಾರರಿಗೆ ಹೇಳಿದರು.

ಈ ವಿಷಯವನ್ನು ಸುಮ್ಮನೆ ದೊಡ್ಡದು ಮಾಡದಂತೆ ವಿರೋಧ ಪಕ್ಷ ಬಿಜೆಪಿಗೆ ಸಿಎಂ ಠಾಕ್ರೆ ತಿರುಗೇಟು ನೀಡಿದ್ದಾರೆ. ಈ ವಿಷಯದ ಬಗ್ಗೆ ಸುಮ್ಮನೆ ಕೂಗಾಡುತ್ತಿರುವ ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಿ. ಯಾಕೆಂದರೆ ಈ ವಿಷಯ ಸರ್ಕಾರದ ಮುಂದೆ ಚರ್ಚೆಗೆ ಬಂದಿಲ್ಲ, ಚರ್ಚೆಗೆ ಬಂದ ಮೇಲೆ ಇದರ ಬಗ್ಗೆ ನೋಡೋಣ. ಈ ವಿಷಯವಾಗಿ ಶಿವಸೇನೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಸರ್ಕಾರದ ಮುಂದೆ ಮೀಸಲಾತಿಯ ಬಗ್ಗೆ ಪ್ರಸ್ತಾವನೆ ಬಂದಾಗ ಕಾನೂನಿನ ಪರಿಧಿಯನ್ನು ನೋಡಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಪ್ರಸ್ತಾವನೆ ಬಂದ ಮೇಲೆಯೇ ಶಿವಸೇನೆ ಮತ್ತು ನನ್ನ ನಿರ್ಧಾರವನ್ನು ತಿಳಿಸುತ್ತೇವೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

ತಮ್ಮ ಹೆಂಡತಿ ರಶ್ಮಿ ಠಾಕ್ರೆ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕಿಯಾಗಿರುವ ಬಗ್ಗೆ ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ ಅವರು, ಅನಿರೀಕ್ಷಿತವಾಗಿ ತಮಗೆ ಒದಗಿಬಂದ ಸಂಪಾದಕ ಹುದ್ದೆಯನ್ನು ಮುಖ್ಯಮಂತ್ರಿಯಾದ ಮೇಲೆ ಬಿಡುವ ಅನಿವಾರ್ಯತೆ ಬಂತು. ಸಾಮ್ನಾ, ಶಿವಸೇನೆ ಮತ್ತು ಠಾಕ್ರೆ ಬೇರೆಯಾಗುವುದಕ್ಕೆ ಸಾಧ್ಯವೇ ಇಲ್ಲ. ನಾವು ಒಂದು ಕುಟುಂಬವಿದ್ದಂತೆ. ರಶ್ಮಿ ಅವರು ಸಂಪಾದಕರಾಗಿರುವುದರಿಂದ ಪತ್ರಿಕೆಯ ಭಾಷೆಯಲ್ಲಿ ಕೆಲ ಬದಲಾವಣೆಗಳಾಗಬಹುದು. ಆದರೆ, ಸಂಪಾದಕೀಯ ಜವಾಬ್ದಾರಿಗಳನ್ನು ಸಂಜಯ್ ರಾವತ್ ನಿಭಾಯಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಸಾಮ್ನಾ ಪತ್ರಿಕೆಯು ಶಿವಸೇನೆಯ ಮುಖವಾಣಿಯಾಗಿದೆ. ಪತ್ರಿಕೆಯು ಶಿವಸೇನೆಯ ಮತ್ತು ನನ್ನ ಅಭಿಪ್ರಾಯಗಳನ್ನು ಪ್ರಕಟಿಸುತ್ತದೆ. ಅಲ್ಲದೇ ಪತ್ರಿಕೆಗೆ ಮತ್ತು ಸಂಪಾದಕರಿಗೆ ಸಂಪಾದಕೀಯ ಸ್ವಾತಂತ್ರ್ಯವಿದೆ ಎಂದು ಠಾಕ್ರೆ ಹೇಳಿದ್ಧಾರೆ.

ಇದರ ನಡುವೆ, ಮಾರ್ಚ್ 7ರಂದು ರಾಮನ ಪೂಜೆಗಾಗಿ ಅಯೋದ್ಯೇಗೆ ತೆರಳುವ ಬಗ್ಗೆ ಮಾತನಾಡಿದ ಅವರು, ನನಗೆ ದೇವರಲ್ಲಿ ನಂಬಿಕೆ ಇದೆ. ದೇವರ ದರ್ಶನಕ್ಕೆ ಹೋಗುವುದರಲ್ಲಿ ರಾಜಕೀಯ ಎಲ್ಲಿದೆ? ಇದಕ್ಕೂ ರಾಜಕೀಯಕ್ಕೂ ಸಂಬಂಧವೇನು? ನಾವು ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷದ ಜೊತೆ ಒಪ್ಪಂದ ಮಾಡಿಕೊಂಡ ಮಾತ್ರಕ್ಕೆ ದೇಗುಲ ಬಾಗಿಲು ಮುಚ್ಚುವುದಿಲ್ಲ. ದೇವರು ಎಲ್ಲರಿಗೂ ಒಂದೇ. ನಾನು ಅಯೋಧ್ಯೆಗೆ ತೆರಳುತ್ತಿದ್ದೇನೆ ಎಂದರು.

ಮಿತ್ರಪಕ್ಷಗಳಲ್ಲಿ ಯಾರೀಗಾದರೂ ದರ್ಶನ ಮಾಡಲು ಬರುವ ಮನಸ್ಸಿದ್ದರೆ ನನ್ನೊಂದಿಗೆ ಬರಬಹುದು. ದೇಗುಲದ ಬಾಗಿಲು ಯಾರಿಗೂ ಮುಚ್ಚುವುದಿಲ್ಲ. ಅವರು ದರ್ಶನ ಮಾಡುವ ಇಚ್ಛೆ ಇದ್ದರೆ ಅವರಿಗೆ ಮನಸ್ಸು ಬಂದಾಗ ಹೋಗಬಹುದು. ಅವರು ನನಗಿಂತ ಮೊದಲು ಅಥವಾ ನಾನು ಹೋಗಿ ಬಂದ ಬಳಿಕ ಬೇಕಾದರೂ ತೆರಳಬಹುದು ಎಂದಿದ್ಧಾರೆ.

ಸಾಲ ಮನ್ನಾ ಬಗ್ಗೆ ಮಾತನಾಡಿದ ಠಾಕ್ರೆ, ಸರ್ಕಾರ ಈಗಾಗಲೇ 2 ಲಕ್ಷದವರೆಗೆ ಸಾಲ ತೆಗೆದುಕೊಂಡಿರುವ ರೈತರನ್ನು ಸಾಲ ಮುಕ್ತಗೊಳಿಸುತ್ತಿದೆ. ಸಾಲ ಮಾಡಿರುವ ಬ್ಯಾಂಕ್  ಖಾತೆಯು ಆಧಾರ್ ಜೊತೆ ಲಿಂಕ್ ಆದವರ ಸಾಲಗಳನ್ನು ಮನ್ನಾ ಮಾಡುತ್ತಿದ್ದೇವೆ.  ಈಗಾಗಲೇ 10 ಲಕ್ಷ ರೈತರ ಖಾತೆಗಳನ್ನು ದೃಢೀಕರಣ ಮಾಡಲಾಗಿದೆ. ಮಹಾರಾಷ್ರ್ಟ ಸರ್ಕಾರದ ಸಾಲ ಮನ್ನಾ ಯೋಜನೆಯು ಸರಿಯಾದ ಸಮಯದಲ್ಲಿಯೇ ಆಗುತ್ತದೆ. ಸರ್ಕಾರದ ಗುರಿಯೇ ರೈತರನ್ನು ಸಂತೋಷವಾಗಿಡುವುದು ಎಂದರು.

10 ಲಕ್ಷ ಖಾತೆಗಳ ದೃಢೀಕರಣ ಆಗಿದೆ. ಈಗಾಗಲೇ 7.5 ಲಕ್ಷ ಖಾತೆಗಳಿಗೆ ಹಣ ವರ್ಗಾವಣೆಯೂ ಆರಂಭವಾಗಿದೆ. ಸರ್ಕಾರ ಇದನ್ನು ಬೇಗನೆ ಪೂರ್ಣಗೊಳಿಸುವ ಯೋಚನೆಯಲ್ಲಿದ್ದು, ಮತ್ತೊಂದು ಸಾಲ ಮನ್ನಾ ಯೋಜನೆಯನ್ನು 2 ಲಕ್ಷಕ್ಕಿಂತ ಹೆಚ್ಚು ಸಾಲ ಮಾಡಿರುವವರಿಗೆ ಮತ್ತು ಸಾಲವನ್ನು ಸರಿಯಾಗಿ ಪಾವತಿಸುತ್ತಿರುವವರಿಗೆ ತರುವ ಬಗ್ಗೆ ಆಲೋಚನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ಆರೋಪ ಹೊತ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ+ ಭದ್ರತೆ

ದೆಹಲಿಯ ಹಿಂಸಾಚಾರದ ಬಗ್ಗೆ ಮಾತನಾಡಿದ ಅವರು ಮುಂಬೈ ಮತ್ತು ಇತರ ನಗರಗಳಲ್ಲಿ ಅಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಾಗಾಗಿ ಇಲ್ಲಿ ಅಂತಹ ಘಟನೆಗಳು ನಡೆದಿಲ್ಲ. ಅಲ್ಲದೇ ಜನರಿಗೆ ಇದನ್ನು ಯಾರು ಮಾಡುತ್ತಿರುವುದು ಎಂಬುದರ ಅರಿವಿದೆ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದರು.

  • ವರದಿ: ಸಂಧ್ಯಾ.ಎಂ


First published: