ಮುಂಬೈ (ಜೂ. 4): ಖ್ಯಾತ ಮಾಡೆಲ್ ಜೆಸ್ಸಿಕಾ ಲಾಲ್ ಹತ್ಯೆಯಾಗಿ 21 ವರ್ಷಗಳೇ ಕಳೆದಿವೆ. ಆಕೆಯನ್ನು ಕೊಲೆ ಮಾಡಿದ್ದ ಮನು ಶರ್ಮನನ್ನು ಸನ್ನಡತೆಯ ಆಧಾರದಲ್ಲಿ ಸೋಮವಾರ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಈ ಕುರಿತು ಬೇಸರ ವ್ಯಕ್ತಪಡಿಸಿರುವ ಬಾಲಿವುಡ್ ನಟಿ ವಿದ್ಯಾ ಬಾಲನ್, ಜೆಸ್ಸಿಕಾಳನ್ನು ಕೊಂದ ಆತನಿಗೆ ಎಷ್ಟು ವರ್ಷ ಜೈಲು ಶಿಕ್ಷೆ ನೀಡಿದರೂ ಕಡಿಮೆಯೇ ಎಂದಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಜೆಸ್ಸಿಕಾಳನ್ನು ಕೊಲೆ ಮಾಡಿದ ಆತನಿಗೆ ಕಠಿಣ ಶಿಕ್ಷೆಯಾಗಿದ್ದರೆ ಅದು ಜನರ ಮನಸಿನಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಆತ ಈಗ ನಿಜವಾಗಲೂ ಒಳ್ಳೆಯವನಾಗಿ ಬದಲಾಗಿರಬಹುದು. ಆತನ ವ್ಯಕ್ತಿತ್ವ ಬದಲಾಗಿರಲಿ ಎಂದು ನಾನು ಆಶಿಸುತ್ತೇನೆ ಎಂದು ವಿದ್ಯಾ ಬಾಲನ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ವಿನೋದ್ ಶರ್ಮ ಅವರ ಮಗ ಮನು ಶರ್ಮಾ 1999ರಲ್ಲಿ ಮಾಡೆಲ್ ಜೆಸ್ಸಿಕಾ ಲಾಲ್ ಅವರನ್ನು ಕೊಲೆ ಮಾಡಿದ್ದ. ರೆಸ್ಟೋರೆಂಟ್ನಲ್ಲಿ ತನಗೆ ಆಲ್ಕೋಹಾಲ್ ನೀಡಲು ನಿರಾಕರಿಸಿದಳು ಎಂಬ ಸಣ್ಣ ಕಾರಣಕ್ಕೆ ಆತ ಜೆಸ್ಸಿಕಾಳಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಮನು ಶರ್ಮಾಗೆ 2006ರಲ್ಲಿ ದೆಹಲಿ ಹೈಕೋರ್ಟ್ನಿಂದ ಜೀವಾವಧಿ ಶಿಕ್ಷೆಯೂ ಆಗಿತ್ತು. ಆದರೆ, ಸನ್ನಡತೆ ಆಧಾರದಲ್ಲಿ ಸೋಮವಾರ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ಜೆಸ್ಸಿಕಾ ಲಾಲ್ ಹತ್ಯೆ ಪ್ರಕರಣ; ಜೀವಾವಧಿ ಶಿಕ್ಷೆಗೊಳಗಾಗಿರುವ ಮನು ಶರ್ಮಾ ಬಿಡುಗಡೆಗೆ ದೆಹಲಿ ಸರ್ಕಾರ ಒಪ್ಪಿಗೆ
ಜೆಸ್ಸಿಕಾ ಲಾಲ್ ಹತ್ಯೆ ಬಗ್ಗೆ 2011ರಲ್ಲಿ 'ನೋ ಒನ್ ಕಿಲ್ಡ್ ಜೆಸ್ಸಿಕಾ' ಎಂಬ ಹಿಂದಿ ಸಿನಿಮಾ ತೆರೆಕಂಡಿತ್ತು. ಜೆಸ್ಸಿಕಾಳ ಜೀವನವನ್ನು ಆಧರಿಸಿದ್ದ ಈ ಸಿನಿಮಾದಲ್ಲಿ ವಿದ್ಯಾ ಬಾಲನ್ ಜೆಸ್ಸಿಕಾಳ ಅಕ್ಕ ಸಬ್ರಿನಾ ಲಾಲ್ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕಾಗಿ ಹಲವು ಬಾರಿ ಜೆಸ್ಸಿಕಾಳ ಕುಟುಂಬದವರನ್ನು ವಿದ್ಯಾ ಬಾಲನ್ ಭೇಟಿಯಾಗಿದ್ದರು. ಹೀಗಾಗಿ, ವಿದ್ಯಾ ಬಾಲನ್ ಮತ್ತು ಜೆಸ್ಸಿಕಾ ಕುಟುಂಬದ ನಡುವೆ ಒಡನಾಟ ಏರ್ಪಟ್ಟಿತ್ತು. 'ನೋ ಒನ್ ಕಿಲ್ಡ್ ಜೆಸ್ಸಿಕಾ' ಸಿನಿಮಾದಲ್ಲಿ ರಾಣಿ ಮುಖರ್ಜಿ ತನಿಖಾ ವರದಿಗಾರ್ತಿಯಾಗಿ ನಟಿಸಿದ್ದರು. ಜೆಸ್ಸಿಕಾಳ ಕೊಲೆಯ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ಆಕೆಯ ಅಕ್ಕ ಸಬ್ರಿನಾ ಲಾಲ್ ಪಾತ್ರದಲ್ಲಿ ಇದ್ಯಾ ಬಾಲನ್ ಕಾಣಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ