ಓಣಂ ಸಡಗರದ ಮೇಲೂ ಪ್ರವಾಹದ ಕರಿಛಾಯೆ; ದೇಶಾದ್ಯಂತ ಕುಸಿತ ಕಂಡ ಚಿನ್ನದ ಬೆಲೆ!

news18
Updated:August 25, 2018, 10:44 AM IST
ಓಣಂ ಸಡಗರದ ಮೇಲೂ ಪ್ರವಾಹದ ಕರಿಛಾಯೆ; ದೇಶಾದ್ಯಂತ ಕುಸಿತ ಕಂಡ ಚಿನ್ನದ ಬೆಲೆ!
ಸಾಂದರ್ಭಿಕ ಚಿತ್ರ
news18
Updated: August 25, 2018, 10:44 AM IST
ನ್ಯೂಸ್ 18 ಕನ್ನಡ

ತಿರುವನಂತಪುರಂ (ಕೇರಳ) ಆ.25: ಕೇರಳದ ಅತೀದೊಡ್ಡ ಹಬ್ಬವಾದ ಓಣಂ ದಿನ ಪ್ರತಿವರ್ಷ ಕೇರಳದ ಮನೆಗಳ ಅಂಗಳಗಳಲ್ಲಿ ಹೂವಿನ ರಂಗೋಲಿಯಿಂದ ಕಂಗೊಳಿಸುತ್ತದೆ. ಆದರೀಗ ಎಲ್ಲೆಡೆ ಬರೀ ನೀರು, ಕೆಸರು ತುಂಬಿದೆ. ಸಾಂಪ್ರದಾಯಿಕವಾಗಿ ಆಚರಿಸುತ್ತ ಬಂದಿರುವ ಹಬ್ಬವನ್ನು ಈ ಬಾರಿ ಸಂಪೂರ್ಣ ನಿಲ್ಲಿಸದಿದ್ದರೂ ಸರಳವಾಗಿ ಓಣಂ ಆಚರಿಸಲು ಮುಂದಾಗಿದ್ದಾರೆ. ಕೆಲವರು ಹಬ್ಬ ಆಚರಿಸುವ ಹಣವನ್ನು ಸಂತ್ರಸ್ತರ ನಿಧಿಗೆ ನೀಡಲು ನಿರ್ಧರಿಸಿದ್ದಾರೆ.

ಕೇರಳದ ಸಾಂಪ್ರದಾಯಿಕ ಓಣಂ ಹಬ್ಬ ಈ ಬಾರಿ ಪ್ರವಾಹದಿಂದಾಗಿ ಬಣಗುಟ್ಟುತ್ತಿದೆ. ರಾಜ್ಯದಲ್ಲೆಡೆ ಓಣಂ ಹಬ್ಬದ ಮೇಲೆ ಪ್ರವಾಹದ ಕರೆಛಾಯೆ ಆವರಿಸಿದೆ. ಅಲ್ಪುಝಾ ಜಿಲ್ಲೆಯ ಕನಿಚುಕುಲಂಗರ್ ಪರಿಹಾರ ಕೇಂದ್ರ ಹಾಗೂ ಹರಿಪಾದ ಪರಿಹಾರ ಕೇಂದ್ರದಲ್ಲಿ ನಿರಾಶ್ರಿತರೆಲ್ಲ ಸೇರಿ ಸರಳವಾಗಿ ಓಣಂ ಆಚರಿಸುತ್ತಿದ್ದಾರೆ.

 

ಹಬ್ಬಕ್ಕಾಗಿ ಮನೆ ಅಲಂಕರಿಸಬೇಕಾಗಿದ್ದ ಮನೆ ಮಂದಿ ಮನೆಯೊಳಗಿದ್ದ ಕೆಸರು ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ. ಪಟ್ಟಣಂತಿಟ್ಟ ಜಿಲ್ಲೆಯ, ಪಂಪಾನದಿ ತಟದ, ಕೋಳಂಚೆರಿ ಪ್ರದೇಶದ ಸುಮಾರು 250 ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.  ಇಂದು ಈ ಮನೆಗಳ ಎದುರು ರಸ್ತೆಯುದ್ದಕ್ಕೂ ಟಿವಿ, ಲ್ಯಾಪ್‌ ಟಾಪ್‌, ಪೀಠೋಪಕರಣಗಳನ್ನು ಒಣಹಾಕಲಾಗಿದೆ. ಎರಡು ದಿನಗಳಿಂದ ತುಸು ಬಿಸಿಲು ಕಂಡಿರುವುದೇ ಇವರೆಲ್ಲರ ಬದುಕಿಗೆ ಹೊಸ ಹುರುಪು ತುಂಬಿದೆ. ಹೊಸ ವರ್ಷದ ಸಂಕೇತವಾದ ಓಣಂ ಈ ಬಾರಿ ಕೇರಳಿಗರಲ್ಲಿ ನಿರಾಸೆ ಮೂಡಿಸಿದಂತೂ ಸುಳ್ಳಲ್ಲ.

ಬೆಂಗಳೂರಿನಲ್ಲೂ ಓಣಂ ಆಚರಣೆ ಇಲ್ಲ

ಬೆಂಗಳೂರಿನಲ್ಲಿ ನೆಲೆಸಿರುವ ಕೇರಳಿಗರೂ ಪ್ರತಿವರ್ಷ ಓಣಂ ಆಚರಿಸುತ್ತಿದ್ದರು. ಆದರೆ, ಈ ಬಾರಿ ತಮ್ಮ ರಾಜ್ಯದ ದುಸ್ಥಿತಿಗೆ ಮರುಗಿ, ಓಣಂ ಆಚರಿಸದಿರಲು ನಿರ್ಧರಿಸಿದ್ದಾರೆ.
Loading...

ಕುಸಿದ ಚಿನ್ನದ ದರ

ಓಣಂ ಆಚರಣೆ ಇಲ್ಲದ ಕಾರಣಕ್ಕಾಗಿ ದೇಶವ್ಯಾಪಿ ಚಿನ್ನದ ದರ ಕುಸಿತ ಕಂಡಿದೆ. ಪ್ರತಿವರ್ಷ ಓಣಂ ಹಬ್ಬದ ಸಮಯದಂದು ಚಿನ್ನದ ಬೆಲೆ ಹೆಚ್ಚಾಗುತ್ತಿತ್ತು. ಏಕೆಂದರೆ ಆ ವೇಳೆ ಕೇರಳಿಗರು ಹೆಚ್ಚಾಗಿ ಚಿನ್ನ ಖರೀದಿಸುತ್ತಿದ್ದರು. ಆದರೆ, ಈ ಬಾರಿ ಕೇರಳ ಎದುರಿಸಿದ ಭೀಕರ ಪ್ರವಾಹದಿಂದ ಅಲ್ಲಿನ ಜನರ ಬದುಕೇ ಮೂರಾಬಟ್ಟೆಯಾಗಿದೆ. ಚಿನ್ನ ಖರೀದಿ ಇರಲಿ, ಕೆ.ಜಿ. ಅಕ್ಕಿ ಕೊಳ್ಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯವೇ ಪ್ರಕೃತಿ ವಿಕೋಪಕ್ಕೆ ನಲುಗಿರುವುದರಿಂದ ಇಂದು ನಡೆಯಬೇಕಿದ್ದ ಓಣಂ ಆಚರಣೆಗೆ ಮಂಕು ಕವಿದಿದೆ. ಹೀಗಾಗಿ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 29,635 ರೂ.ಗೆ ಇಳಿಕೆಯಾಗಿದ್ದು, ಕಳೆದ ವಾರ ಇದು 29,268ಕ್ಕೆ ಇಳಿಕೆ ಕಂಡಿತ್ತು. ಜನವರಿ 10 ಬಳಿಕ ಈ ದರ ಅತ್ಯಂತ ಕನಿಷ್ಠ ಬೆಲೆಯಾಗಿತ್ತು.
First published:August 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ