ನವದೆಹಲಿ(ಮಾ. 02): ಸಂವಿಧಾನದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ಅನ್ನು ಕೇಂದ್ರ ಸರ್ಕಾರ ಕಳೆದ ವರ್ಷ ರದ್ದು ಮಾಡಿತ್ತು. ಕೇಂದ್ರದ ಈ ಕ್ರಮಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ ಎಂದು ವಾದಿಸಿ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿವೆ. ಈ ಅರ್ಜಿಗಳನ್ನು ಏಳು ಸದಸ್ಯರ ವಿಸ್ತೃತ ನ್ಯಾಯಪೀಠದಿಂದ ವಿಚಾರಣೆಯಾಗಬೇಕು ಎಂದು ಅರ್ಜಿಯಲ್ಲಿ ಮಾಡಿಕೊಳ್ಳಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಪುರಸ್ಕರಿಸಿಲ್ಲ. ಇಂದು ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ| ಎನ್.ವಿ. ರಮಣ ನೇತೃತ್ವದ ಐದು ಸದಸ್ಯರ ಸಾಂವಿಧಾನಿಕ ಪೀಠವು, ವಿಸ್ತೃತ ಪೀಠದಲ್ಲಿ ವಿಚಾರಣೆಯ ಅಗತ್ಯ ಇಲ್ಲ ಎಂದು ತೀರ್ಮಾನಿಸಿತು.
1959ರ ಪ್ರೇಮ್ ನಾಥ್ ಕೌಲ್ ವರ್ಸಸ್ ಜಮ್ಮು-ಕಾಶ್ಮೀರ; ಹಾಗೂ 1970ರ ಸಂಪತ್ ಪ್ರಕಾಶ್ ವರ್ಸಸ್ ಜಮ್ಮು-ಕಾಶ್ಮೀರ ಈ ಎರಡು ಪ್ರಕರಣಗಳಲ್ಲಿ ನೀಡಲಾಗಿದ್ದ ತೀರ್ಪುಗಳು ಪರಸ್ಪರ ವಿರೋಧಾಭಾಸವಾಗಿದೆ. ಆದ್ದರಿಂದ ಐದು ಸದಸ್ಯರ ನ್ಯಾಯಪೀಠದಿಂದ ವಿಚಾರಣೆ ನಡೆಸಲು ಆಗುವುದಿಲ್ಲ. ವಿಸ್ತೃತ ನ್ಯಾಯಪೀಠದಿಂದ ವಿಚಾರಣೆ ನಡೆಸಿ ಎಂದು ಕೇಳಿ ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್, ಜಮ್ಮು-ಕಾಶ್ಮೀರ ಹೈಕೋರ್ಟ್ ವಕೀಲರ ಸಂಘ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದವು. ಮೇಲೆ ತಿಳಿಸಿದ ಎರಡು ಪ್ರಕರಣಗಳು 370ನೇ ಆರ್ಟಿಕಲ್ಗೆ ಸಂಬಂಧಿಸಿದ್ದಾಗಿವೆ ಎಂಬುದು ಇವರ ಅಭಿಪ್ರಾಯ.
ಇದನ್ನೂ ಓದಿ: ಅಮಿತ್ ಶಾ ಕೋಲ್ಕತ್ತಾ ರ್ಯಾಲಿಯಲ್ಲಿ ವಿವಾದಾತ್ಮಕ ‘ಗೋಲಿ ಮಾರೊ..’ ಘೋಷಣೆ; 3 ಜನ ಆರೋಪಿಗಳ ಬಂಧನ
ಕೇಂದ್ರ ಸರ್ಕಾರ ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಿತ್ತು. ಸರ್ಕಾರದ ಪರವಾಗಿ ವಾದ ಮಾಡಿದ ಕೆ.ಕೆ. ವೇಣುಗೋಪಾಲ್, ಈ ಎರಡು ಪ್ರಕರಣಗಳು ಪರಸ್ಪರ ಸಂಬಂಧಿತವಾಗಿಲ್ಲ. ಎರಡೂ ಬೇರೆ ವಿಚಾರಗಳನ್ನ ಒಳಗೊಂಡ ಪ್ರಕರಣಗಳಾಗಿವೆ. ಪ್ರೇಮನಾಥ ಕೌಲ್ ವರ್ಸಸ್ ಜಮ್ಮು-ಕಾಶ್ಮಿರ ಪ್ರಕರಣವು 370ನೇ ವಿಧಿಗೆ ಸಂಬಂಧಿಸಿದ್ದಲ್ಲ. ಕಾಶ್ಮೀರದ ಮಹಾರಾಜರಿಗೆ ಶಾಸನದತ್ತ ಅಧಿಕಾರ ಇದೆಯೋ ಇಲ್ಲವೋ ಎಂಬ ಪ್ರಶ್ನೆಗೆ ಸಂಬಂಧಿಸಿದ ಪ್ರಕರಣವಾಗಿತ್ತು. ಈ ಪ್ರಕರಣದಲ್ಲಿ ನೀಡಲಾದ ತೀರ್ಪಿಗೂ ಸಂಪತ್ ಪ್ರಕಾಶ್ ವರ್ಸಸ್ ಕಾಶ್ಮೀರ ಪ್ರಕರಣದ ತೀರ್ಪಿಗೂ ಸಂಬಂಧ ಇಲ್ಲ. ಹೀಗಾಗಿ, ವಿಸ್ತೃತ ಪೀಠಕ್ಕೆ ವಿಚಾರಣೆಯನ್ನು ವರ್ಗಾಯಿಸುವ ಅಗತ್ಯ ಇಲ್ಲ ಎಂದು ಕೆ.ಕೆ. ವೇಣುಗೋಪಾಲ್ ವಾದಿಸಿದರು.
ಸರ್ಕಾರದ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಈ ಎರಡು ಪ್ರಕರಣಗಳಲ್ಲಿ ಯಾವುದೇ ವೈರುದ್ಧ್ಯಗಳಲ್ಲಿಲ್ಲ ಕಂಡುಬರುತ್ತಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾ| ಎನ್.ವಿ. ರಮಣ, ನ್ಯಾ| ಸಂಜಯ್ ಕಿಶನ್ ಕೌಲ್, ನ್ಯಾ| ಆರ್ ಸುಭಾಷ್ ರೆಡ್ಡಿ, ನ್ಯಾ| ಬಿ.ಆರ್. ಗವಾಯ್ ಮತ್ತು ನ್ಯಾ| ಸೂರ್ಯ ಕಾಂತ್ ಅವರಿರುವ ನ್ಯಾಯಪೀಠವು, ಜನವರಿ 23ಕ್ಕೆ ತನ್ನ ತೀರ್ಪು ಕಾಯ್ದಿರಿಸಿದೆ.
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ