ಭಾರತದ ಕಮಾಂಡೋಗಳ ಅಗತ್ಯವಿಲ್ಲ; ಉಗ್ರ ಸಂಹಾರಕ್ಕೆ ಲಂಕಾ ಸಮರ್ಥವಾಗಿದೆ: ರಾಜಪಕ್ಸ

ಲಂಕಾದ ಅಧ್ಯಕ್ಷರು ಮತ್ತು ಪ್ರಧಾನಿಗಳು ದೇಶದ ಭದ್ರತೆಯನ್ನು ಪಕ್ಕಕ್ಕಿಟ್ಟು ರಾಜಕೀಯದಲ್ಲಿ ನಿರತರಾಗಿದ್ದಾರೆ. ದಾಳಿಯ ಮುನ್ಸೂಚನೆ ಇದ್ದರೂ ಇವರಿಂದ ತಡೆಯಲು ಸಾಧ್ಯವಾಗಲಿಲ್ಲ ಎಂದು ರಾಜಪಕ್ಸ ಟೀಕಿಸಿದ್ದಾರೆ.

Vijayasarthy SN | news18
Updated:April 28, 2019, 5:16 PM IST
ಭಾರತದ ಕಮಾಂಡೋಗಳ ಅಗತ್ಯವಿಲ್ಲ; ಉಗ್ರ ಸಂಹಾರಕ್ಕೆ ಲಂಕಾ ಸಮರ್ಥವಾಗಿದೆ: ರಾಜಪಕ್ಸ
ಮಹಿಂದ ರಾಜಪಕ್ಸ
  • News18
  • Last Updated: April 28, 2019, 5:16 PM IST
  • Share this:
ನವದೆಹಲಿ(ಏ. 28): ಕಳೆದ ಭಾನುವಾರದಂದು 250 ಮಂದಿಯನ್ನು ಬಲಿತೆಗೆದುಕೊಂಡ ಸರಣಿ ಬಾಂಬ್ ಸ್ಫೋಟಗಳ ಮೂಲಕ ಶ್ರೀಲಂಕಾದಲ್ಲಿ ಉಗ್ರವಾದ ಹೆಡೆ ಬಿಚ್ಚಿ ನಿಂತಿದೆ. ಲಂಕಾದಲ್ಲಿ ಉಗ್ರರ ದಮನಕ್ಕಾಗಿ ಸಹಾಯ ಮಾಡಲು ಭಾರತ ಸಿದ್ಧವಾಗಿದೆ. ಅದಕ್ಕಾಗಿ ವಿಶೇಷ ಎನ್​ಎಸ್​ಜಿ ಕಮಾಂಡೋಗಳ ಪಡೆಯನ್ನು ಸಜ್ಜಾಗಿರಿಸಿಕೊಂಡಿದೆ ಎಂಬ ಸುದ್ದಿ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸ ಅವರು, ಲಂಕಾದಲ್ಲಿ ಭಯೋತ್ಪಾದನೆಯನ್ನು ಹತ್ತಿಕ್ಕಲು ತಮ್ಮ ದೇಶ ಸಮರ್ಥವಾಗಿದೆ. ತಮಗೆ ವಿದೇಶ ಸೈನಿಕರ ಅಗತ್ಯವಿಲ್ಲ. ಭಾರತದ ಎನ್​ಎಸ್​ಜಿ ಬೇಕಾಗಿಲ್ಲ ಎಂದು ಹೇಳಿದರು.

ನ್ಯೂಸ್18 ಜೊತೆ ಸಂದರ್ಶನದಲ್ಲಿ ಮಾತನಾಡಿದ ರಾಜಪಕ್ಸ, ಭಾರತದ ನೆರವಿಗೆ ಧನ್ಯವಾದ ಹೇಳಲು ಮರೆಯಲಿಲ್ಲ. ಆದರೆ, ಉಗ್ರರನ್ನು ಬಗ್ಗು ಬಡಿಯಲು ಲಂಕಾ ಸೈನಿಕರಿಂದ ಸಾಧ್ಯ. ಅವರಿಗೆ ಅಧಿಕಾರ ಮತ್ತು ಸ್ವಾತಂತ್ರ್ಯ ಕೊಡಬೇಕಷ್ಟೇ ಎಂದು ಮಾಜಿ ಲಂಕಾ ಅಧ್ಯಕ್ಷರು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಶ್ರೀಲಂಕಾ ಬಾಂಬ್ ದಾಳಿಯ ಸಂಚುಕೋರನ ಕುಟುಂಬ ಎನ್​ಕೌಂಟರ್​ನಲ್ಲಿ ನಾಶ

ಮಹಿಂದಾ ರಾಜಪಕ್ಸ ಅವರು ಈ ಹಿಂದೆ ಲಂಕಾದ ಅಧ್ಯಕ್ಷರಾಗಿದ್ದಾಗ ಎಲ್​ಟಿಟಿಇ ಸಂಘಟನೆಯನ್ನು ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಲಂಕಾದಲ್ಲಿ 10 ವರ್ಷಗಳವರೆಗೂ ಶಾಂತಿ ನೆಲೆಸಿತ್ತು. ಈಗ 8 ಸರಣಿ ಬಾಂಬ್ ಸ್ಫೋಟ ಘಟನೆಯು ಈ ದ್ವೀಪ ರಾಷ್ಟ್ರಕ್ಕೆ ಶಾಕ್ ಕೊಟ್ಟಿದೆ.

ಈ ದುರ್ಘಟನೆಗೆ ಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಪ್ರಧಾನಿ ರಾನಿಲ್ ವಿಕ್ರೆಮೆಸಿಂಘೆ ಇಬ್ಬರೂ ಜವಾಬ್ದಾರರು. ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸಿ ಅವರಿಬ್ಬರು ರಾಜಕೀಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಉಗ್ರವಾದ ಹೆಚ್ಚಾಗುತ್ತಿರುವುದು ಎಲ್ಲರಿಗೂ ಗೊತ್ತಿತ್ತು. ಅವರಿಗೆ ವೋಟ್ ಬ್ಯಾಂಕ್ ಚಿಂತೆಯೇ ಹೆಚ್ಚಾಗಿ ಏನೂ ಮಾಡದೆ ನಿಷ್ಕ್ರಿಯರಾಗಿದ್ದರು ಎಂದು ಮಹಿಂದ ರಾಜಪಕ್ಸ ಆರೋಪಿಸಿದರು.

ಇದನ್ನೂ ಓದಿ: ಬಾಂಬ್​ ದಾಳಿ ಹಿನ್ನೆಲೆ; ಎರಡು ಉಗ್ರ ಸಂಘಟನೆಗಳ ಮೇಲೆ ನಿಷೇಧ ಹೇರಿದ ಶ್ರೀಲಂಕಾ

ಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಲಂಕಾದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಮಾಹಿತಿಯನ್ನು ಭಾರತ ಈ ಮುಂಚೆಯೇ ಲಂಕಾ ಜೊತೆ ಹಂಚಿಕೊಂಡಿತ್ತು. ಆದರೂ ಶ್ರೀಲಂಕಾ ಸರಕಾರಕ್ಕೆ ದಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ಲಂಕಾದ 3 ಚರ್ಚ್​ಗಳು, 3 ಐಷಾರಾಮಿ ಹೋಟೆಲ್​ಗಳ ಮೇಲೆ ಉಗ್ರರು ಆತ್ಮಾಹುತಿ ಬಾಂಬ್ ದಾಳಿ ನಡೆಸಿ 250ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿದ್ದರು. ಲಂಕಾದ ಪೊಲೀಸ್ ಮುಖ್ಯಸ್ಥ ಪುಜಿತ್ ಜಯಸುಂದರ ಮತ್ತು ರಕ್ಷಣಾ ಕಾರ್ಯದರ್ಶಿ ಹೇಮಸಿರಿ ಫರ್ನಾಂಡೋ ಇಬ್ಬರೂ ದಾಳಿಗೆ ಜವಾಬ್ದಾರಿ ಹೊತ್ತುಕೊಂಡು ರಾಜೀನಾಮೆ ನೀಡಿದರು. ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರೂ ಕೂಡ ದೇಶದ ಕ್ಷಮೆ ಯಾಚಿಸಿದರು.ಇದರ ಮಧ್ಯೆ, ಅರಬ್ ನಾಡಿನಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಸೇರಿ ವಾಪಸ್ ಬಂದಿದ್ದ ಶ್ರೀಲಂಕಾ ನಾಗರಿಕರ ವಿರುದ್ಧ ಲಂಕಾ ಸರಕಾರ ಕ್ರಮ ಕೈಗೊಳ್ಳಲು ಅಸಹಾಯಕತೆ ತೋರಿರುವುದು ಟೀಕೆಗೆ ಗುರಿಯಾಗಿದೆ. ವಿದೇಶೀ ಸಂಘಟನೆಯಲ್ಲಿದ್ದು ಬಂದವರನ್ನು ಬಂಧಿಸುವ ಕಾನೂನು ಲಂಕಾದಲ್ಲಿಲ್ಲ ಎಂದು ಲಂಕಾ ಪ್ರಧಾನಿಗಳು ಹೇಳಿದ್ದಾರೆ. ಇದನ್ನು ಬಲವಾಗಿ ಖಂಡಿಸಿರುವ ಮಹಿಂದ ರಾಜಪಕ್ಸ, ಭಯೋತ್ಪಾದನೆ ಜೊತೆ ನಂಟು ಹೊಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗಿರುವ ಕಾನೂನುಗಳು ಸಮರ್ಥವಾಗಿವೆ ಎಂದು ರಾಜಪಕ್ಸ ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಲಂಕಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 359 ಅಲ್ಲ 253

ಇದೇ ವರ್ಷ ಅಂತ್ಯದಲ್ಲಿ ಶ್ರೀಲಂಕಾದಲ್ಲಿ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆಗಳು ನಡೆಯುತ್ತಿವೆ. ರಾಜಪಕ್ಸ ಅವರು ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಗೋಟಬಾಯಾ ಅವರು ಸ್ಪರ್ಧಿಸಲಿದ್ದಾರೆ.

ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ಅಧ್ಯಕ್ಷ ಸಿರಿಸೇನ ಮತ್ತು ಪ್ರಧಾನಿ ವಿಕ್ರಮಸಿಂಘೆ ಅಸಮರ್ಥರಾಗಿದ್ದಾರೆ ಎಂಬ ಟೀಕೆ ವ್ಯಕ್ತವಾಗುತ್ತಿರುವ ವೇಳೆಯೇ ಇವತ್ತು ನಡೆದ ಎನ್​ಕೌಂಟರ್​ನಲ್ಲಿ 15 ಮಂದಿಯನ್ನು ಹತ್ಯೆಗೈಯಲಾಗಿದೆ. ಇದರಲ್ಲಿ ಉಗ್ರ ದಾಳಿ ಘಟನೆಯ ಮಾಸ್ಟರ್ ಮೈಂಡ್​ನ ಕುಟುಂಬದ ಮೂರು ಸದಸ್ಯರು ಸೇರಿದ್ದಾರೆ.

(ವರದಿ: ಪ್ರದೀಪ್ ಪಿಳ್ಳೈ, ನ್ಯೂಸ್18)

ನಿಮ್ಮ ನ್ಯೂಸ್​18 ಕನ್ನಡವನ್ನು ಇನ್‌ಸ್ಟಾಗ್ರಾಮ್​ನಲ್ಲಿ ಹಿಂಬಾಲಿಸಲು ಕೆಳಗಿನ ಲಿಂಕ್​ ಕ್ಲಿಕ್ ಮಾಡಿ: www.instagram.com/news18kannada

First published: April 28, 2019, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading